ಗುರುವಾರ , ಮಾರ್ಚ್ 23, 2023
30 °C
ವಾರ್ಷಿಕವಾಗಿ ನಡೆಯುವ ಸಾಂಪ್ರದಾಯಿಕ ನಾಟಿ

ಕಂಬಳ ಗದ್ದೆ ನಾಟಿ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳಗದ್ದೆಯಲ್ಲಿ ವಾರ್ಷಿಕವಾಗಿ ನಡೆಯುವ ಸಾಂಪ್ರದಾಯಿಕ ನಾಟಿ ಭಾನುವಾರ ಸಂಪನ್ನವಾಯಿತು.

ಕುಟುಂಬದ ಹಿರಿಯರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರು ವಾಡಿಕೆಯಂತೆ ಒಂದೇ ದಿನದಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಿದರು. ಮನೆಯ ಎದುರು ಇರುವ ಈ ಕಂಬಳ ಗದ್ದೆ 5.14 ಎಕರೆ ವಿಸ್ತಾರವಾಗಿದೆ. ಇದನ್ನು ‘ದೇವರಗದ್ದೆ’ ಎಂದು ಕುಟುಂಬದವರು, ಊರವರು ನಂಬುತ್ತಾರೆ. ಹೀಗಾಗಿ, ಇದರ ನಾಟಿ ಮತ್ತು ಕಟಾವು ಕಾರ್ಯಗಳು ಕೆಲವು ಕಟ್ಟಳೆಗೆ ಅನುಗುಣವಾಗಿ ನಡೆಯುತ್ತವೆ. ಇಡೀ ಗದ್ದೆಯ ನಾಟಿಯನ್ನು ಒಂದೇ ದಿನದಲ್ಲಿ ಮುಗಿಸಬೇಕು ಎಂಬ ಸಂಪ್ರದಾಯ ಅನುಸರಿಸುತ್ತಿದ್ದ ಕಾರಣ, ಹಿಂದೆ ಊರಿನ ಎಲ್ಲ ಉಳುಮೆ ಜಾನುವಾರು ಬಳಸಿ, ಉಳುಮೆ ಮಾಡಿ ನೂರಾರು ನಾಟಿಯಾಳುಗಳು ನೇಜಿ ನೆಡುತ್ತಿದ್ದರು. ಉಳುಮೆ ಜಾನುವಾರು ವಿರಳವಾದ ಕಾರಣ ಈಗ ಉಳುಮೆಗೆ ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ನಾಟಿ ಮಾತ್ರ ಕಟ್ಟಳೆಯಂತೆ ನಡೆಯತ್ತಿದೆ. ಉಳುಮೆ ಮತ್ತು ನಾಟಿ ಪೂರ್ವದಲ್ಲಿ ಶುದ್ಧಾಚಾರ ಅನುಸರಿಸಿ ಗದ್ದೆಗೆ ಪೂಜೆ ಸಲ್ಲಿಸಲಾಗುತ್ತದೆ. ಗದ್ದೆಯ ಒಂದು ಮೂಲೆಯಲ್ಲಿರುವ ವೀರಗಲ್ಲು, ಈ ಗದ್ದೆ ಮತ್ತು ನಾಟಿ ಸಂಪ್ರದಾಯ ಪುರಾತನವಾದುದು ಎಂಬುದಕ್ಕೆ ಪುಷ್ಟಿ ನೀಡುತ್ತದೆ.

ಕುಟುಂಬದ ಸದಸ್ಯರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ಗ್ರಾಮ ಪಂಚಾಯಿತಿ ಸದಸ್ಯ ಕಂಠದಮನೆ ಬಾಲಕೃಷ್ಣ ಹೆಗ್ಡೆ, ಕಂಠದಮನೆ ಸುಭಾಶ್ಚಂದ್ರ ಶೆಟ್ಟಿ, ಉದಯ ಹೆಗ್ಡೆ, ಬೈಂದೂರು ತಾಲ್ಲೂಕು ಕಂಬಳ ಸಮಿತಿ ಅಧ್ಯಕ್ಷ ಎಸ್. ವೆಂಕಟ ಪೂಜಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.