ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಬರಿದಾಗುತ್ತಿದೆ ಮುಂಡ್ಲಿ ಜಲಾಶಯ

ತಿಂಗಳ ಅಂತ್ಯವರೆಗೆ ಮಾತ್ರ ಸಾಲಲಿದೆ ನೀರು
ಎಸ್. ವಾಸುದೇವ ಭಟ್
Published 15 ಏಪ್ರಿಲ್ 2024, 5:04 IST
Last Updated 15 ಏಪ್ರಿಲ್ 2024, 5:04 IST
ಅಕ್ಷರ ಗಾತ್ರ

ಕಾರ್ಕಳ: ಬೇಸಿಗೆಯ ಬಿಸಿಲಿನ ತಾಪಕ್ಕೆ ನೀರಿನ ಸಮಸ್ಯೆ ಎಲ್ಲೆಡೆ ಕಾಡುತ್ತಿದೆ. ಕಾರ್ಕಳ ನಗರಕ್ಕೆ ನೀರು ಪೂರೈಸುತ್ತಿರುವ ಮುಂಡ್ಲಿ ಜಲಾಶಯದಲ್ಲೂ ದಾಖಲೆ ಪ್ರಮಾಣದಲ್ಲಿ ನೀರಿನ ಮಟ್ಟ ಕುಸಿದಿದೆ. ಮಳೆಗಾಲ ಆರಂಭದವರೆಗೂ ಲಭ್ಯವಿರುವ ನೀರನ್ನು ಕಾಪಿಟ್ಟುಕೊಂಡು ಪೂರೈಸಬೇಕಾದ ಸವಾಲು ತಾಲ್ಲೂಕು ಆಡಳಿತದ ಮುಂದಿದೆ.

ಕಾರ್ಕಳ ಪುರಸಭೆಯ ವತಿಯಿಂದ ವಾಣಿಜ್ಯ ಉಪಯೋಗಕ್ಕೆ 129ನಲ್ಲಿ ನೀರಿನ ಸಂಪರ್ಕ ನೀಡಲಾಗಿದ್ದು, 3,926 ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಲಭ್ಯವಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರತಿದಿನ ನಗರಕ್ಕೆ 4 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಪ್ರಸ್ತುತ 3 ಎಂಎಲ್‌ಡಿ ಪೂರೈಕೆಯಾಗುತ್ತಿದ್ದು ಒಂದು ಎಂಎಲ್‌ಡಿ ಕೊರತೆ ಉಂಟಾಗಿದೆ.

ಪುರಸಭೆ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುಂಡ್ಲಿ ಸ್ವರ್ಣಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಮುಖಗೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಅವಧಿಗೂ ಮುನ್ನ ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗುವ ಭೀತಿ ತಲೆದೋರಿದೆ.

ಪುರಸಭೆ ವ್ಯಾಪ್ತಿಯಲ್ಲಿ ಹಿಂದೆ ಪ್ರತಿದಿನ ನೀರು ಬಿಡಲಾಗುತ್ತಿತ್ತು. ನೀರಿನ ಕೊರತೆ ಪರಿಣಾಮ ಇದೀಗ ಎರಡು ದಿನಗಳಿಗೊಮ್ಮೆ ನೀರು ಹರಿಸಲಾಗುತ್ತಿದೆ. ಎರಡು ದಿನಕ್ಕೊಮ್ಮೆ ನೀರು ಬಿಟ್ಟರೂ ಮುಂಡ್ಲಿ ಜಲಾಶಯದ ನೀರು ತಿಂಗಳ ಅಂತ್ಯದವರೆಗೆ ಮಾತ್ರ ಸಾಲುತ್ತದೆ. ನಂತರ ಸಮಸ್ಯೆ ಬಿಗಡಾಯಿಸಲಿದೆ.

ರಾಮಸಮುದ್ರದಲ್ಲಿ ಸಾಕಷ್ಟು ನೀರಿರುವುದರಿಂದ ಅದನ್ನು ಉಪಯೋಗಿಸಿಕೊಳ್ಳುವ ಯೋಜನೆಯೂ ಪುರಸಭೆಯ ಮುಂದಿದೆ. ಮುಂಡ್ಲಿ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಸಂಪಿಗೆ ಹಾಯಿಸಿ, ಅಲ್ಲಿ ಶುದ್ಧೀಕರಿಸಿ ಕಾರ್ಕಳದ 23 ವಾರ್ಡ್‌ಗಳಿಗೆ ನಿತ್ಯ ನೀರು ಪೂರೈಕೆಯನ್ನು ಮಾಡುವ ಯೋಚನೆ ಇದೆ.

ರಾಮ ಸಮುದ್ರದಲ್ಲಿ ನಿರ್ಮಿಸಿರುವ ಸಂಪು 2 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಕೇವಲ 50 ಎಚ್‌ಪಿ ಸಾಮರ್ಥ್ಯ ಹೊಂದಿರುವುದರಿಂದ ಸಾರ್ವಜನಿಕರ ನಲ್ಲಿಗಳಲ್ಲಿ ನೀರಿನ ಹರಿವು ತಗ್ಗಲಿದೆ. ಎತ್ತರದ ಪ್ರದೇಶಗಳಿಗೆ ನೀರು ಹತ್ತಲು ಸಮಸ್ಯೆಯಾಗಲಿದೆ. ಆದರೆ, ಅನ್ಯ ಮಾರ್ಗವಿಲ್ಲದಿರುವುದರಿಂದ ಮುಂಡ್ಲಿ ಜಲಾಶಯ ಖಾಲಿಯಾದ ಬಳಿಕ ರಾಮ ಸಮುದ್ರದಲ್ಲಿ ಸಂಗ್ರಹವಾಗುವ ನೀರನ್ನು ಬಳಸಿಕೊಳ್ಳಲು ಪುರಸಭೆ ನಿರ್ಧರಿಸಿದೆ ಎನ್ನುತ್ತಾರೆ ಅಧಿಕಾರಿಗಳು.

ಸಾರ್ವಜನಿಕರು ಕುಡಿಯುವ ನೀರನ್ನು ಅಂಗಳ ತೊಳೆಯಲು, ವಾಹನ ತೊಳೆಯಲು ಹಾಗೂ ಮನೆಯ ಗಿಡಗಳಿಗೆ ಬಳಸದಂತೆ ಪುರಸಭೆ ಜಾಗೃತಿ ಮೂಡಿಸುತ್ತಿದ್ದು, ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲು ನಿರ್ಧರಿಸಿದೆ.

ರಾಜ್ಯ ಸರ್ಕಾರ ಕಾರ್ಕಳ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂದೆ ಎದುರಾಗುವ ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಪುರಸಭೆ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಯೋಜನೆ ರೂಪಿಸಲಾಗಿದೆ. ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ 12 ಗ್ರಾಮ ಹಾಗೂ ಪುರಸಭೆಯ 13 ವಾರ್ಡ್‌ಗಳನ್ನು ಗುರುತಿಸಲಾಗಿದೆ.

ತಾಲ್ಲೂಕು ಗ್ರಾಮೀಣ ನೈರ್ಮಲ್ಯ ಎಂಜಿನಿಯರ್ ಹಾಗೂ ತಾಲ್ಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳ ಸಮಾಲೋಚನಾ ಸಭೆಗಳನ್ನು ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲ್ಲೂಕಿನಾದ್ಯಂತ ಖಾಸಗಿ ಬೋರ್‌ವೆಲ್‌ಗಳನ್ನು ತಾತ್ಕಾಲಿಕ ನೆಲೆಯಲ್ಲಿ ಖರೀದಿಸಿ 18 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ಗಳಿಗೆ ಸಂಗ್ರಹಿಸಿ ನಂತರ ಸರಬರಾಜು ಮಾಡಲು ಚಿಂತಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಎರಡು ಮನೆ ಹಾಗೂ ಇತರೆಡೆ 35 ಮನೆಯ ಮಾಲೀಕರು ಬಾವಿ ನೀರು ಕೊಡುವ ಆಶ್ವಾಸನೆ ನೀಡಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೀರು ಸರಬರಾಜು ನಡೆಸಲು ಜಿಲ್ಲಾಧಿಕಾರಿ ಆದೇಶದಂತೆ ಕಳೆದ ತಿಂಗಳು ಟೆಂಡರ್ ಕರೆಯಲಾಗಿದೆ. ಆಯಾ ಪಂಚಾಯಿತಿ ಅಥವಾ ಪುರಸಭೆಯ ಆಡಳಿತ ಪತ್ರದಲ್ಲಿ ಸೂಚಿಸಿದ ಕಡೆಗಳಲ್ಲಿ ಸೂಚಿತ ಪ್ರಮಾಣದಂತೆ ನೀರು ಸರಬರಾಜಿಗೆ ಯೋಜನೆ ಸಿದ್ಧಗೊಳಿಸಲಾಗಿದೆ. ನದಿ ತೀರದ ಪ್ರದೇಶಗಳಲ್ಲಿನ ಕಿಂಡಿ ಅಣೆಕಟ್ಟುಗಳ ದ್ವಾರಗಳ ಮೂಲಕ ನೀರು ಪೋಲಾಗದಂತೆ ವ್ಯವಸ್ಥೆ ಕೈಗೊಳ್ಳಲು ತಿಳಿಸಲಾಗಿದೆ.

ನೀರಿನ ಕೊರತೆ ಹಿನ್ನೆಲೆಯಲ್ಲಿ ಜನರು ನೀರನ್ನು ಮಿತವಾಗಿ ಬಳಸಬೇಕು ಎಂದು ಮನವಿ ಮಾಡುತ್ತಾರೆ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ.

ರೂಪಾ ಟಿ. ಶೆಟ್ಟಿ ಮುಖ್ಯಾಧಿಕಾರಿ ಪುರಸಭೆ ಕಾರ್ಕಳ.
ರೂಪಾ ಟಿ. ಶೆಟ್ಟಿ ಮುಖ್ಯಾಧಿಕಾರಿ ಪುರಸಭೆ ಕಾರ್ಕಳ.

ನೀರಿನ ಸಮಸ್ಯೆ ಇರುವ ಗ್ರಾಮಗಳು

ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ಪರಪು ಗುಂಡ್ಯಡ್ಕ ದುರ್ಗಾ ನಗರ ಅಯ್ಯಪ್ಪ ನಗರ ಇನ್ನಾ ಗ್ರಾಮದ ಗುರ್ಪೇಳು ಪರಿಶಿಷ್ಟರ ಕಾಲನಿ ಕಡೆಕುಂಚ ಆಶ್ರಯ ಕಾಲನಿ ಕಡ್ತಲ ಗ್ರಾಮದ ಕುಕ್ಕುಜೆ ಮರ್ಣೆ ಗ್ರಾಮದ ದೆಪ್ಪುತ್ತೆ ಕಾಂತಾವರ ಗ್ರಾಮದ ಬೇಲಾಡಿ ಬೈಲಂಗಡಿ ಇರ್ವತ್ತೂರು ಗ್ರಾಮದ ಬಾಕ್ಯಾರುಕೋಡಿ ಮಿಯಾರು ಗ್ರಾಮದ ಕಾರೂಲ್ ಗುಡ್ಡೆ ಕುಂಟಿಬೈಲು ಅಡ್ಯರಪಲ್ಕೆ ತಿಮ್ಮಗುಡ್ಡೆ ನೆಲ್ಲಿ ಗುಡ್ಡೆ ಪ್ರಗತಿ ನಗರ ಬೆರ್ಕೆ ನೀರೆ ಗ್ರಾಮದ ಶೇನೆಗುರಿ ತ್ರಿಶೂಲನಗರ ಬಾದಾಮಿ ಕಟ್ಟೆ ಕಲ್ಲೊಟ್ಟೆ ನೀರೆ ಹೈಸ್ಕೂಲು ಪಾಲಟ್ಟ ರಾಜೀವ ನಗರ ಕಲ್ಯಾ ಗ್ರಾಮದ ನೆಲ್ಲಿಗುಡ್ಡೆ ಈದು ಗ್ರಾಮದ ಕರಂಜಾಲು ಹೊಸ್ಮಾರು ಆಸ್ಪತ್ರೆ ಬಳಿ ನೂರಾಲಬೆಟ್ಟು ಗ್ರಾಮದ ಕಲ್ಲೆಜ್ಜಿ ಬೆಳ್ಮಣ್ ಗ್ರಾಮದ ಸೂಡ ಕಂಬಲ್ಕೆ ದರ್ಖಾಸ್ತು ಸುರ್ಪು ಹಾಗೂ ಪುರಸಭಾ ವ್ಯಾಪ್ತಿಯ 13ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT