ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ತಿಳಿದವರು ಇರಲಿ

ಹೊರ ರಾಜ್ಯಗಳ ಸಿಬ್ಬಂದಿ ನೇಮಕದಿಂದ ಗ್ರಾಹಕರಿಗೆ ಭಾಷಾ, ಸಂವಹನ ಸಮಸ್ಯೆ: ಕೆಡಿಪಿ ಸಭೆಯಲ್ಲಿ ಚರ್ಚೆ
Last Updated 28 ಜನವರಿ 2021, 13:20 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯಗಳ ಸಿಬ್ಬಂದಿ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳೀಯರು ವ್ಯವಹರಿಸಲು ಭಾಷೆಯ ಸಮಸ್ಯೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಿಬ್ಬಂದಿಯ ನೇಮಕ ಹೆಚ್ಚಾದರೆ ಸಂವಹನ ಸಮಸ್ಯೆ ಬಗೆಹರಿಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಬಾಬು ಶೆಟ್ಟಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯಗಳ ಸ್ಥಳೀಯ ಭಾಷೆ ಗೊತ್ತಿರದ ಸಿಬ್ಬಂದಿ ಹೆಚ್ಚಾಗಿದ್ದು, ಸ್ಥಳೀಯರು ಬ್ಯಾಂಕ್‌ ಸೇವೆ ಪಡೆಯಲು ತೊಡಕಾಗಿದೆ. ಕನಿಷ್ಠ ಪ್ರಮಾಣದಲ್ಲಿಯಾದರೂ ರಾಜ್ಯದ ಸಿಬ್ಬಂದಿ ನೇಮಿಸಿದರೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರ ಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶದ ಸಿಬ್ಬಂದಿ ಆಯ್ಕೆಯಾಗುತ್ತಿದ್ದಾರೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ಸಮಸ್ಯೆಯ ಮೂಲವನ್ನು ಸಭೆಗೆ ತಿಳಿಸಿದರು.

ಬ್ಯಾಂಕ್‌ಗಳಲ್ಲಿ ವಿದ್ಯಾಭ್ಯಾಸ ಸಾಲ ಮತ್ತು ಮುದ್ರಾ ಯೋಜನೆಯಡಿ ಸಾಲ ಪಡೆಯಲು ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಬೇಕು. ಸಣ್ಣ ಕಾರಣಗಳನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಬೇಡಿ. ಈ ಬಗ್ಗೆ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ ಹೇಳಿದರು.

ಜಿಲ್ಲೆಯಲ್ಲಿ ಪ್ರಾಣಿಗಳು ನಾಡಿಗೆ ಬಂದು ಬೆಳೆ ಹಾನಿ ಮಾಡುತ್ತಿದ್ದು, ಈಚೆಗೆ ಹೆಬ್ರಿಯ ಮತ್ತಾವಿನಲ್ಲಿ ಕರಡಿಯೊಂದು ಆಕ್ರಮಣ ಮಾಡಿದೆ ಎಂದು ಸದಸ್ಯೆ ಜ್ಯೋತಿ ಹರೀಶ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಧನಿಗೂಡಿಸಿದ ಸದಸ್ಯ ಜನಾರ್ದನ ತೋನ್ಸೆ, ಕಾಡುಕೋಣ ಹಾಗೂ ಜಿಂಕೆಗಳಿಂದಲೂ ಕಾಡಂಜಿನ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಅರಣ್ಯ ಇಲಾಖೆ ವನ್ಯ ಜೀವಿಗಳಿಂದ ಆಗುತ್ತಿರುವ ಸಮಸ್ಯೆ ತಪ್ಪಿಸಬೇಕು ಎಂದರು.

ಪಡುಬಿದ್ರಿ ಎಂಡ್ ಪಾಯಿಂಟ್‌ನಲ್ಲಿ ಬ್ಲೂ ಫ್ಲಾಗ್ ಯೋಜನೆಯಿಂದ ಸ್ಥಳೀಯರಿಗೆ ಮತ್ತು ಮೀನುಗಾರರಿಗೆ ದೈನಂದಿನ ಚಟುವಟಿಕೆ ನಡೆಸಲು ತೊಂದರೆಯಾಗದಂತೆ ಪ್ರವಾಸೋದ್ಯಮ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಶಶಿಕಾಂತ್ ಪಡುಬಿದ್ರಿ ಆಗ್ರಹಿಸಿದರು.

ಸುಜ್ಲಾನ್ ಕಂಪೆನಿಗೆ ನೀಡಿದ್ದ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದ್ದು, ಮಾರಾಟದ ಜಾಗವನ್ನು ನೋಂದಣಿ ನೋದಣಿ ಮಾಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಕಂಪೆನಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಕ್ಕಿಲ್ಲ ಎಂದು ಸದಸ್ಯ ಶಶಿಕಾಂತ ಪಡುಬಿದ್ರೆ ತಿಳಿಸಿದರು.

ಜಿಲ್ಲೆಯ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಸಂಬಂಧ ಸಾಕಷ್ಟು ಮುಂಚಿತವಾಗಿ ಪ್ರಚಾರ ನೀಡಿ ಖರೀದಿಸಬೇಕು ಹಾಗೂ ಭತ್ತ ಖರೀದಿಯಲ್ಲಿ ಎಂಒ 4 ತಳಿಯನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರಬೇಕು ಎಂದು ಉದಯ ಎಸ್.ಕೋಟ್ಯಾನ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರತಾಪ್ ಹೆಗ್ಡೆ ಮಾರಾಳಿ, ಶೋಭಾ ಜಿ ಪುತ್ರನ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT