ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ: ಮೆಹಂದಿ ಕಾರ್ಯಕ್ರಮದಲ್ಲಿ ಕೊರಗರ ಮೇಲೆ ಪೊಲೀಸರಿಂದ ಹಲ್ಲೆ ಆರೋಪ, ತನಿಖೆ

ಪಿಎಸ್‌ಐ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ: ಡಿಎಸ್‌ಪಿ ನೇತೃತ್ವದಲ್ಲಿ ತನಿಖೆ
Last Updated 28 ಡಿಸೆಂಬರ್ 2021, 16:31 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಲೌಡ್‌ ಸ್ಪೀಕರ್ ಬಳಸಿದ ಆರೋಪದ ಮೇಲೆ ಮದುಮಗ ಸೇರಿ ಕೊರಗ ಸಮುದಾಯದರ ಹಲವರ ಮೇಲೆ ಪೊಲೀಸರು ಲಾಠಿ ಚಾರ್ಚ್‌ ನಡೆಸಿದ್ದಾರೆ ಎಂದು ಕೊರಗ ಸಮುದಾಯದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೊರಗರ ವಿರುದ್ಧ ಅಮಾನುಷವಾಗಿ ನಡೆದುಕೊಂಡಿರುವ ಕೋಟ ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಕೊರಗ ಸಮುದಾಯದವರು ಒತ್ತಾಯಿಸಿದರು.

ಘಟನೆ ವಿವರ:

ಕೊರಗ ಕಾಲೋನಿಯ ರಾಜೇಶ್ ಎಂಬುವರ ಮದುವೆ ಪ್ರಯುಕ್ತ ಸೋಮವಾರ ರಾತ್ರಿ ನಡೆದ ಮೆಹಂದಿಯ ಕಾರ್ಯಕ್ರಮದಲ್ಲಿ ಲೌಡ್ ಸ್ಕೀಕರ್ ಹಾಕಲಾಗಿತ್ತು. ಲೌಡ್ ಸ್ಪೀಕರ್ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಡಿಜೆ ಬಂದ್‌ ಮಾಡುವಂತೆ ತಿಳಿಸಿದರೂ ಕುಟುಂಬಸ್ಥರು ನಿರಾಕರಿಸಿದರು ಎಂದು ಪೋಲಿಸರು ಹೇಳುತ್ತಿದ್ದಾರೆ.

ಆದರೆ, ಪೊಲೀಸರು ಕೊರಗ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಮಧು ಮಗ ರಾಜೇಶ ಹಾಗೂ ಸಮುದಾಯದ ಇತರರನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಕೊರಗರು ದೂರಿದ್ದಾರೆ.

ಘಟನೆ ಖಂಡಿಸಿ ಕೊರಗ ಸಮುದಾಯದವರು ಹಾಗೂ ಮುಖಂಡರು ಸೋಮವಾರ ಮಧ್ಯರಾತ್ರಿವರೆಗೂ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪೊಲೀಸರ ಹಲ್ಲೆ ಖಂಡನೀಯ. ಕೋಟ ಪಿಎಸ್‌ಐ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಹೋರಾಟ ತೀವ್ರಗೊಳಿಸುವುದಾಗಿ ಕೊರಗ ಸಮುದಾಯದ ಮುಖಂಡ ಗಣೇಶ್ ಕೊರಗ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಎಚ್ಚರಿಕೆ ನೀಡಿದರು.

ಮಹಿಳೆಯರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ಮಕ್ಕಳನ್ನು ಬಿಡಿ ಎಂದು ಕಾಲು ಹಿಡಿದು ಅಂಗಲಾಚಿದರೂ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ‌ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಇನ್‌ಸ್ಪೆಕ್ಟರ್ ಭೇಟಿ:

ಮಂಗಳವಾರ ಬ್ರಹ್ಮಾವರ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಕಲೆ ಹಾಕಿದರು. ಈ ಸಂದರ್ಭ ತಪ್ಪಿತಸ್ಥ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್, ಘಟನೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಾಲಾಡಿ ಭೇಟಿ:

ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೊರಗ ಕಾಲೊನಿಗೆ ಭೇಟಿನೀಡಿದರು. ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸ್‌ಪಿಗೆ ಸೂಚನೆ ನೀಡಿದರು.

ತನಿಖೆಗೆ ಸೂಚನೆ: ಕೋಟ

ಪ್ರಕರಣಕ್ಕೆ ಸಂಬಂಧ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ತನಿಖೆಗೆ ಸೂಚಿಸಿದ್ದೇನೆ.. ಅನ್ಯಾಯಕ್ಕೊಳಗಾದ ಕೊರಗರ ಕುಟುಂಬಕ್ಕೆ ನ್ಯಾಯ ಒದಗಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಡಿ.30ರಂದು ಅಧಿಕಾರಿಗಳ ನೇತೃತ್ವದಲ್ಲಿ ಸಂತ್ರಸ್ತರ ಕಾಲೋನಿಗೆ ಭೇಟಿ ನೀಡುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಡಿಎಸ್‌ಪಿ ನೇತೃತ್ವದಲ್ಲಿ ತನಿಖೆ: ಎಸ್‌ಪಿ

ಮೆಹಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಲೌಡ್‌ ಸ್ಪೀಕರ್ ಬಳಸಲಾಗುತ್ತಿದೆ ಎಂಬ ಕಾರಣಕ್ಕೆ ಕೋಟ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಲಾಠಿ ಚಾರ್ಜ್‌ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ಡಿ.29ರ ಸಂಜೆಯೊಳಗೆ ವರದಿ ನೀಡುವಂತೆ ಉಡುಪಿ ಡಿಎಸ್‌ಪಿ ಅವರಿಗೆ ಸೂಚನೆ ನೀಡಲಾಗಿದೆ. ತನಿಖೆ ಮುಗಿಯುವವರೆಗೂ ಆರೋಪ ಕೇಳಿಬಂದಿರುವ ಕೋಟ ಪಿಎಸ್‌ಐ ಹಾಗೂ ಸಿಬ್ಬಂದಿಯನ್ನು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸದಂತೆ ಸೂಚಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT