ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕಾಲದಲ್ಲೂ ರೈತರನ್ನು ತಲುಪಿದ ಕೆವಿಕೆ

ವೆಬಿನಾರ್, ಫೇಸ್‌ಬುಕ್‌, ವಾಟ್ಸ್‌ಆ್ಯಪ್ ಮೂಲಕ ತರಬೇತಿ ಕಾರ್ಯಕ್ರಮ ಆಯೋಜಿಸಿದ ಬ್ರಹ್ಮಾವರದ ಕೃಷಿವಿಜ್ಞಾನ ಕೇಂದ್ರ
Last Updated 3 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಕೈಗಾರಿಕೆಗಳು ಸ್ತಬ್ಧವಾದವು. ಕರಾವಳಿಯ ಆರ್ಥಿಕತೆಯ ಬೆನ್ನೆಲುಬಾಗಿರುವ ಮತ್ಸ್ಯೋದ್ಯಮವೂ ಬಂದ್ ಆಯಿತು. ವ್ಯಾಪಾರ, ವಹಿವಾಟು ನಿಂತುಹೋಯಿತು. ಬಹುತೇಕ ಎಲ್ಲ ಕ್ಷೇತ್ರಗಳು ಸಂಕಷ್ಟದ ಸುಳಿಗೆ ಸಿಲುಕಿದ್ದವು. ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲೂ ಭರವಸೆಯ ಬೆಳಕು ಕಂಡಿದ್ದು ಕೃಷಿ ಕ್ಷೇತ್ರದಲ್ಲಿ ಮಾತ್ರ.

ಕೊರೊನಾ ಕಾಲದಲ್ಲಿ ಎಲ್ಲ ಕ್ಷೇತ್ರಗಳು ಹಿನ್ನಡೆ ಅನುಭವಿಸಿದರೆ, ಕೃಷಿ ಕ್ಷೇತ್ರ ಮಾತ್ರ ಪ್ರಗತಿ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಭತ್ತದ ಕೃಷಿ ಹೆಚ್ಚಾಗಿದೆ. ಹಡಿಲುಬಿದ್ದ ಗದ್ದೆಗಳು ನಳನಳಿಸುತ್ತಿವೆ. ತೋಟಗಾರಿಕಾ ಬೆಳೆ ಬೆಳೆಯುವತ್ತ ಆಸಕ್ತಿ ಹೆಚ್ಚಾಗಿದೆ. ರೈತರು ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಯುವಕರು ಸ್ವಉದ್ಯೋಗದತ್ತ ಮುಖ ಮಾಡಿದ್ದಾರೆ. ಇದೆಲ್ಲ ಸಾದ್ಯವಾಗಿದ್ದು, ಕೋವಿಡ್‌ ಕಾಲಘಟ್ಟದಲ್ಲಿ ಎಂಬುದು ವಿಶೇಷ.

ಕೃಷಿ ಕ್ಷೇತ್ರದಲ್ಲಿ ಇಂಥಹ ಸಕಾರಾತ್ಮಕ ಬೆಳವಣಿಗೆಯ ಹಿಂದೆ ಕೃಷಿ ವಿಜ್ಞಾನ ಕೇಂದ್ರಗಳ ಪರಿಶ್ರಮವೂ ಹೆಚ್ಚಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ರೈತರು ಕೃಷಿ ವಿಜ್ಞಾನ ಕೇಂದ್ರಗಳತ್ತ ಮುಖಮಾಡಲು ಸಾದ್ಯವಾಗದಿದ್ದಾಗ, ತಂತ್ರಜ್ಞಾನದ ಮೂಲಕ ರೈತರನ್ನು ಬೆಸೆಯುವಲ್ಲಿ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಸಫಲವಾಯಿತು. ತನ್ನ ಕಾರ್ಯ ಚಟುವಟಿಕೆಗಳನ್ನು ಹಿಂದಿಗಿಂತಲೂ ಹೆಚ್ಚು ವಿಸ್ತಾರಗೊಳಿಸಿ ರೈತರ ಮನೆಬಾಗಿಲು ತಲುಪುವಲ್ಲಿ ಯಶಸ್ವಿಯಾಯಿತು..

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಯೂಟ್ಯೂಬ್‌, ವೆಬಿನಾರ್ ಹೀಗೆ, ಹಲವು ಸಂವಹನ ಮಾಧ್ಯಮಗಳನ್ನು ಬಳಸಿಕೊಂಡ ಕೆವಿಕೆ ಮುಖ್ಯಸ್ಥರಾದ ಡಾ.ಬಿ. ಧನಂಜಯ್ ನೇತೃತ್ವದ ವಿಜ್ಞಾನಿಗಳ ಹಾಗೂ ಅಧಿಕಾರಿಗಳ ತಂಡ, ರೈತರಿಗೆ ಸಮಗ್ರ ಕೃಷಿ ಮಾಹಿತಿ ಹಂಚಿತು. ಯೂಟ್ಯೂಬ್ ಮೂಲಕ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ವಿಧಾನ ತಿಳಿಸಿತು. ವೆಬಿನಾರ್ ಮೂಲಕ ಪ್ರಸಿದ್ಧ ಕೃಷಿ ವಿಜ್ಞಾನಿಗಳ ಜತೆ ರೈತರು ಸಂವಾದ ನಡೆಸಲು ವೇದಿಕೆ ಕಲ್ಪಿಸಿತು.

ಮುಖ್ಯವಾಗಿ ಕೋವಿಡ್‌ ಕಾಲದಲ್ಲಿ ಉದ್ಯೋಗ ಕಳೆದುಕೊಂಡು ತವರಿಗೆ ಮರಳಿದ್ದ ಯುವಕರು ಮತ್ತೆ ಕೃಷಿಯತ್ತ ಹೊರಳಲು, ಸ್ವಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನು ಬೆಳೆಯುವಂತೆ ಪ್ರೇರೇಪಿಸಿ, ಅವರು ಬೆಳೆದ ಉತ್ಪನ್ನಗಳಿಗೆ ಆನ್‌ಲೈನ್‌ನಲ್ಲಿ ಮಾರುಕಟ್ಟೆ ಕಲ್ಪಿಸುವ ಪ್ರಯತ್ನವೂ ನಡೆಯಿತು ಎನ್ನುತ್ತಾರೆ ಕೆವಿಕೆ ತೋಟಗಾರಿಕಾ ವಿಜ್ಞಾನಿ ಎಚ್‌.ಎಸ್‌. ಚೈತನ್ಯ.

ತಂತ್ರಜ್ಞಾನಕ್ಕೆ ಒಗ್ಗುತ್ತಿರುವ ರೈತರು:

ಕರಾವಳಿ ರೈತರು ತಂತ್ರಜ್ಞಾನ ಬಳಕೆ ವಿಚಾರದಲ್ಲಿ ಇತರೆ ಜಿಲ್ಲೆಗಳಿಗಿಂತ ಮುಂದಿದ್ದಾರೆ. ಹಾಗಾಗಿ, ಲಾಕ್‌ಡೌನ್ ಅವಧಿಯಲ್ಲಿ ಇಲಾಖೆಯ ಕಾರ್ಯಕ್ರಮಗಳು, ತರಬೇತಿ, ವೆಬಿನಾರ್‌ಗಳಲ್ಲಿ ರೈತರ ಭಾಗವಹಿಸುವಿಕೆ ಹೆಚ್ಚು ಕಂಡುಬಂತು. ‘ಕೆವಿಕೆ ಉಡುಪಿ’ ಫೇಸ್‌ಬುಕ್‌ ಪುಟದಲ್ಲಿ ತೋಟಗಾರಿಕಾ ಬೆಳೆ ಬೆಳೆಯುವ ಬಗ್ಗೆ ನಿರಂತರ ಮಾಹಿತಿ ನೀಡಲಾಗಿದ್ದು, ಸಾವಿರಾರು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ನಿರ್ಧಿಷ್ಟ ಬೆಳೆ ಬೆಳೆಯುವವರನ್ನು ಒಗ್ಗೂಡಿಸಿ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ, ರೋಗಬಾಧೆಗೆ ಪರಿಹಾರ, ಗುಣಮಟ್ಟದ ಬೀಜಗಳ ಲಭ್ಯತೆ, ಖರೀದಿಗೆ ನೆರವು, ಯಂತ್ರೋಪಕರಣಗಳ ಮಾಹಿತಿ ನೀಡಲಾಗುತ್ತಿದೆ. ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿದರೂ, ಇಷ್ಟು ಮಾಹಿತಿಯನ್ನು ಏಕಕಾಲಕ್ಕೆ ಎಲ್ಲ ಬೆಳೆಗಾರರಿಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಕೋವಿಡ್‌ ಸೃಷ್ಟಿಸಿದ ಪರ್ಯಾಯ ವ್ಯವಸ್ಥೆಯಿಂದ ಇದೆಲ್ಲವೂ ಸಾದ್ಯವಾಯಿತು ಎಂದರು ಚೈತನ್ಯ.

‘ಸ್ವಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿ’

‘ಲಾಕ್‌ಡೌನ್ ಅವಧಿಯಲ್ಲಿ 11 ಎಕರೆ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಮಾರಾಟ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು. ಕೆವಿಕೆ ಅಧಿಕಾರಿಗಳ ಮಾರ್ಗದರ್ಶನ, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಕಾರಣ ಗ್ರಾಹಕರು ಹೊಲಕ್ಕೆ ಬಂದು ಖರೀದಿಸಲು ಶುರುಮಾಡಿದರು. ಒಂದೇ ದಿನ 7 ರಿಂದ 10 ಟನ್‌ ಕಲ್ಲಂಗಡಿ ಮಾರಾಟವಾಗಿದ್ದು ಕಂಡು ಅಚ್ಚರಿಯಾಯಿತು. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿದ ಖುಷಿ ಒಂದೆಡೆಯಾದರೆ, ಕಷ್ಟಕ್ಕೆ ಸಿಲುಕಿದ್ದ ಇತರ ರೈತರ ನೆರವಿಗೆ ಧಾವಿಸಿದ ತೃಪ್ತಿಯೂ ಇದೆ. ಬಾಗಲಕೋಟೆ, ಕಾರವಾರ, ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ ತರಕಾರಿ, ಹಣ್ಣು ಖರೀದಿಸಿ ಮಾರಾಟ ಮಾಡಿದ್ದೇನೆ. ಮುಂದೆ ಹಿರಿಯಡ್ಕದಲ್ಲಿ ದೊಡ್ಡದೊಂದು ಮಳಿಗೆ ತೆರೆದು, ರೈತರಿಂದ ತರಕಾರಿ, ಹಣ್ಣು ಖರೀದಿಸಿ ಆ್ಯಪ್‌ ಮೂಲಕ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಉದ್ದೇಶವಿದೆ. ಇದರಿಂದ ಕೃಷಿಗೆ ಉತ್ತೇಜನ ಸಿಗಲಿದೆ, ರೈತರಿಗೆ ಗರಿಷ್ಠ ದರ ಸಿಗಲಿದೆ. ಗ್ರಾಹಕರಿಗೂ ತಾಜಾ ಉತ್ಪನ್ನ ಸಿಗಲಿದೆ’ ಎನ್ನುತ್ತಾರೆ ಸುರೇಶ್ ನಾಯಕ್‌.

‘ಆನ್‌ಲೈನ್‌ ತರಬೇತಿ’

‘ಮನೆಯ ಅಂಗಳ, ತಾರಸಿಗಳಲ್ಲಿ ಕೈತೋಟ ಹಾಗೂ ತರಕಾರಿ ಬೆಳೆಯುವ ಬಗ್ಗೆ, ಅಣಬೆ ಬೇಸಾಯ, ಜೇನು ಸಾಕಣೆ, ಹೈನುಗಾರಿಕೆಯ ಬಗ್ಗೆ ಆನ್‌ಲೈನ್ ತರಗತಿಗಳನ್ನು ಆಯೋಜಿಸಲಾಗಿದೆ. ವೈಜ್ಞಾನಿಕವಾಗಿ ಕೊಕೊ ಹಾಗೂ ಅಡಿಕೆ ಗಿಡಗಳನ್ನು ನಾಟಿ ಮಾಡುವುದು, ಸಮಗ್ರ ಕೃಷಿ ಪದ್ಧತಿ ಅಳವಡಿಕೆ, ಕಾಂಪೋಸ್ಟ್ ಹಾಗೂ ಎರೆಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ಅಂತರಗಂಗೆ, ಹಾಗೂ ಹಳದಿ ಹಸಿರುಪಾಚಿ ಕಳೆಗಳ ನಿರ್ವಹಣಾ ಪದ್ಧತಿ, ತೋಟಗಾರಿಕಾ ಬೆಳೆಗಳಿಗೆ ತಗುಲುವ ರೋಗಬಾಧೆ ನಿವಾರಣೆಯ ಬಗ್ಗೆ ವೆಬಿನಾರ್‌ಗಳನ್ನು ಆಯೋಜಿಸಿ ವಿಚಾರ ವಿನಿಮಯಕ್ಕೆ ಅವಕಾಶ ಮಾಡಿಕೊಡಲಾಗಿದೆ’ ಎನ್ನುತ್ತಾರೆ ಕೆವಿಕೆ ತೋಟಗಾರಿಕಾ ವಿಜ್ಞಾನಿ ಎಚ್‌.ಎಸ್‌. ಚೈತನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT