ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬತ್ತಿದ ಕೆರೆಯಲ್ಲಿ ಜೀವಸೆಲೆ ಸೃಷ್ಟಿಸಿದ ನರೇಗಾ

ಪ್ರಗತಿ ಪಥದಲ್ಲಿ ನಾಲ್ಕೂರು ಗ್ರಾಮ ಪಂಚಾಯಿತಿ
Last Updated 20 ಜನವರಿ 2022, 19:30 IST
ಅಕ್ಷರ ಗಾತ್ರ

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮ ಪಂಚಾಯಿತಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ 2021-22ನೇ ಸಾಲಿನಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ.

ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸುವದರೊಂದಿಗೆ ನಾಲ್ಕೂರು ಗ್ರಾಮ ಪಂಚಾಯಿತಿಯು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರಸ್ತುತ ಸಾಲಿನಲ್ಲಿ ಪ್ರಸ್ತುತ ಸಾಲಿನಲ್ಲಿ ನಾಲ್ಕೂರು ಗ್ರಾಮ ಪಂಚಾಯತಿಗೆ 18,260 ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಈಗಾಗಲೇ 18,515 ಮಾನವ ದಿನನಗಳನ್ನು ಸೃಜನೆ ಮಾಡುವುದರೊಂದಿಗೆ ನಾಲ್ಕೂರು ಪಂಚಾಯಿತಿ ಗುರಿ ಮೀರಿದೆ. ₹ 50 ಲಕ್ಷ ವೆಚ್ಚ ಪೂರೈಸಿದೆ.

ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಡಿಯಲ್ಲಿ 33 ಕೃಷಿ ಬಾವಿ, 12 ಗೊಬ್ಬರ ಗುಂಡಿ, ಎರೆಹುಳು ಗೊಬ್ಬರ ತೊಟ್ಟಿ, ದನದ ಹಟ್ಟಿ, ಬಚ್ಚಲುಗುಂಡಿ, ಕೋಳಿಗೂಡು ಹಾಗೂ ಇತರೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಮುದಾಯ ಕಾಮಗಾರಿಗಳಾದ ಕೆರೆ ಹಾಗೂ ತೋಡುಗಳನ್ನು ಹೂಳೆತ್ತುವ ಕಾಮಗಾರಿಗಳು ನಡೆದಿವೆ.

ಬತ್ತಿದ ಕೆರೆಯಲ್ಲಿ ಜೀವಸೆಲೆ
ನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಕೆರೆ ಹೂಳೆತ್ತುವ ಕಾಮಗಾರಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಸಂಪೂರ್ಣ ಬತ್ತಿ ಹೋಗಿದ್ದ ಕೆರೆಗೆ ಮರುಜೀವ ನೀಡಲಾಗಿದೆ. ಶಿಥಿಲಗೊಂಡಿದ್ದ ಕೆರೆಯನ್ನು ನರೇಗಾ ಅಡಿ ದುರಸ್ತಿಗೊಳಿಸಿ ಹೂಳೆತ್ತಲಾಗಿದ್ದು ಮಳೆಗಾಲದಲ್ಲಿ ನೀರು ತುಂಬಿಕೊಂಡಿದ್ದು ಜೀವಸೆಲೆ ಬಂದಿದೆ. ಈ ಕಾಮಗಾರಿಗಾಗಿ ₹ 2,74,482 ವೆಚ್ಚವಾಗಿದ್ದು 918 ಮಾನವ ದಿನಗಳನ್ನು ಸೃಜಿಸಲಾಗಿದೆ.

ಹೂಳೆತ್ತುವ ಮುನ್ನ ಕೆರೆ ಸಂಪೂರ್ಣ ಹಾಳಾಗಿತ್ತು. ಕೆರೆಯ ಸುತ್ತಲೂ ಕಲ್ಲುಗಳನ್ನು ಜೋಡಿಸಿ ಕುಸಿಯದಂತೆ ದುರಸ್ತಿ ಮಾಡಲಾಗಿದೆ. ಈಚೆಗೆ ಸುರಿದ ಮಳೆಗೆ ಕೆರೆ ತುಂಬಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗಿದೆ. ಗ್ರಾಮಸ್ಥರಿಗೆ ನೀರಿನ ಆಸರೆಯಾಗಿದೆ.

ತೋಟಗಾರಿಕೆ ಸೇರಿದಂತೆ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೆ ಫಲಾನುಭವಿಗಳಿಗೆ ಉತ್ತಮ ಬೇಡಿಕೆಯಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಗದರ್ಶನದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗರಿಷ್ಠ ಮಾನವ ದಿನಗಳ ಸೃಜನೆ ಮಾಡುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಮನ್‌ರೆಗಾ ಸಹಾಯಕ ನಿರ್ದೇಶಕರಾದ ಕೆ.ಮಹೇಶ್.

ನಾಲ್ಕೂರು ಪಂಚಾಯಿತಿಯಲ್ಲಿ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, ನರೇಗಾ ಯೋಜನೆಯಡಿ ಉದ್ಯೋಗ ಸೃಜನೆಗೆ ಒತ್ತು ನೀಡಲಾಗಿದ್ದು, ಫಲಾನುಭವಿಗಳಿಗೆ ಅನುಕೂಲವಾಗಿದೆ. ಈ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಪೈಪ್ ಲೈನ್ ಸಂಪರ್ಕ ಕಷ್ಟಸಾಧ್ಯ ಕಾರಣ ನರೇಗಾ ಅಡಿ ಮನೆಗಳಲ್ಲಿ ಬಾವಿ ನಿರ್ಮಾಣ ಕಾಮಗಾರಿಗಳ ಮೂಲಕ ನೀರಿನ ಕೊರತೆ ನೀಗಿಸಲಾಗುತ್ತಿದೆ. ಪಂಚಾಯಿತಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ನರೇಗಾ ಸಹಕಾರಿಯಾಗಿದೆ ಎನ್ನುತ್ತಾರೆ ನಾಲ್ಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೀತಾರಾಮ್.

‘ವೈಯಕ್ತಿಕ, ಸಾಮೂಹಿಕ ಕಾಮಗಾರಿಗೆ ಆದ್ಯತೆ’
ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಲಾಗುತ್ತಿದೆ. ನಾಲ್ಕೂರು ಗ್ರಾಮ ಪಂಚಾಯಿತಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಗ್ರಾಮೀಣ ಭಾಗದ ಜನರಿಗೆ ಉಪಯುಕ್ತವಾಗುವಂತೆ ಮುಂದೆಯೂ ಪಂಚಾಯಿತಿಯಿಂದ ಹೆಚ್ಚಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎನ್ನುತ್ತಾರೆ ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ವಿ.ಇಬ್ರಾಹಿಂಪುರ.

‘ನರೇಗಾ ಆಧಾರ’
ನರೇಗಾ ಯೋಜನೆಯಡಿ ಗೊಬ್ಬರ ಗುಂಡಿ ಹಾಗೂ ಎರೆಹುಳು ಗೊಬ್ಬರ ತೊಟ್ಟಿ ಕಾಮಗಾರಿಗೆ ಸಹಾಯಧನ ಪಡೆದು ಕಾಮಗಾರಿ ನಡೆಸಿದ್ದೇವೆ. ಇದರಿಂದ ಕೃಷಿಗೆ ಉತ್ತಮ ಗೊಬ್ಬರ ಲಭ್ಯವಾಗುತ್ತಿದೆ. ನರೇಗಾ ಅತ್ಯುತ್ತಮ ಯೋಜನೆಯಾಗಿದೆ ಎನ್ನುತ್ತಾರೆ ಫಲಾನುಭವಿ ಕೃಷ್ಣ ನಾಯ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT