ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರೂರು ಮಠದ ಲಕ್ಷ್ಮೀವರ ತೀರ್ಥರ ಸಾವಿನ ಸುತ್ತಾ...

ಇಲ್ಲಿದೆ ಈವರೆಗಿನ ಅಪ್‌ಡೇಟ್‌
Last Updated 21 ಜುಲೈ 2018, 9:46 IST
ಅಕ್ಷರ ಗಾತ್ರ

ಉಡುಪಿ:ಅಷ್ಠಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಜುಲೈ 19ರಂದು(ಗುರುವಾರ) ನಿಧನರಾಗಿದ್ದಾರೆ. ಶ್ರೀಗಳು ವಿಠಲನಿಗಾಗಿ ಬದುಕನ್ನೇ ಮೀಸಲಿಟ್ಟು, ಕ್ರೀಡೆ, ಸಂಗೀತಗಳಲ್ಲೂ ಅಪಾರ ಆಸಕ್ತಿ ಹೊಂದಿದ್ದರು. ಎಲ್ಲರೊಂದಿಗೆ ಬೆರೆಯುತ್ತಿದ್ದ ‘ಬಿಂದಾಸ್’ ಸ್ವಾಮೀಜಿಯೂ ಆಗಿದ್ದರು.

ಶ್ರೀಗಳ ನಿಧನದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಅವರ ದೇಹದಲ್ಲಿ ವಿಷದ ಅಂಶ ಹೇಗೆ ಬಂತು? ಎಂಬ ಪ್ರಶ್ನೆಯನ್ನಿಟ್ಟಿದ್ದಾರೆ. ಶ್ರೀಗಳ ಸಾವಿಗೂ ಮುನ್ನ ಅವರ ಬದುಕಿನ ಹಾದಿ ಹಾಗೂ ನಂತರದ ಬೆಳವಣಿಗೆಗಳ ಸುತ್ತಾ ಒಂದು ಸಮಗ್ರ ನೋಟ ಇಲ್ಲಿದೆ.

ಶೀರೂರು ಲಕ್ಷ್ಮೀವರ ತೀರ್ಥ ಶ್ರೀ ಅಸ್ತಂಗತ
ಅಷ್ಠಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಗುರುವಾರ ಬೆಳಿಗ್ಗೆ 8ಕ್ಕೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಉಡುಪಿ ನಗರ ಸ್ಥಬ್ಧಗೊಂಡಿತ್ತು. ಕೆಲವು ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಗೌರವ ಸಮರ್ಪಿಸಿದರು. ಕೃಷ್ಣಮಠದ ರಥಬೀದಿಯಲ್ಲಿ ಸೂತಕದ ಛಾಯೆ ಆವರಿಸಿತ್ತು.

ವಿಷಪ್ರಾಶನದ ಪ್ರಶ್ನೆಯೇ ಉದ್ಬವಿಸಲ್ಲ: ಪೇಜಾವರ ಶ್ರೀ
ಶಿರೂರು ಶ್ರೀಗಳಿಗೆ ವಿಷಪ್ರಾಸನ ಮಾಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳವರು ಸ್ಪಷ್ಟಪಡಿಸಿದ್ದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶ್ರೀಗಳಿಗೆ ವಿಷಪ್ರಾಶನ ಮಾಡಿಸುವ ಕೆಲಸ ಮಾಡಲು ಯಾರಿಗೂ ಅವಕಾಶವಿಲ್ಲ. ಇಂಥ ಅನುಮಾನ ಸೃಷ್ಟಿಯಾಗಿರುವುದು ಸರಿಯಲ್ಲ, ಸಂಶಯಕ್ಕೆ ಕಾರಣ ಬೇಕು, ಅಡುಗೆ ಪಾತ್ರೆ ಸರಿಯಿರಲಿಲ್ಲ ಹೀಗಾಗಿ ಆಹಾರದೋಷದೊಂದಿಗೆ ತೊಂದರೆಯಾಗಿದೆ ಎಂದು ಅವರ ಹೇಳಲಾಗುತ್ತಿದೆ’ ಎಂದಿದ್ದರು.

ಮದ್ಯಸೇವನೆ, ಹೆಣ್ಣಿನ ವಿಚಾರ ಸಾವಿಗೆ ಕಾರಣ ಇರಬಹುದು!
ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಅತಿಯಾದ ಮದ್ಯ ಸೇವಿಸಿ ಮೃತಪಟ್ಟಿರಬಹುದು ಅಥವಾ ಅವರ ಜತೆಗಿದ್ದ ಇಬ್ಬರು ಮಹಿಳೆಯರ ನಡುವಿನ ಜಗಳದಿಂದಲೂ ಸಾವನ್ನಪ್ಪಿರಬಹುದು ಎಂಬ ಊಹಾಪೋಹಗಳಿವೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶಿರೂರು ಶ್ರೀ ಸಾವಿನ ತನಿಖೆ ಶುರು
ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಹಠಾತ್‌ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು ತನಿಖೆ ಶುರುವಾಗಿದೆ. ಹಿರಿಯಡಕ ಸಮೀಪದ ಶಿರೂರು ಮಠವನ್ನು ಪೊಲೀಸರು ಗುರುವಾರ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಶಿರೂರು ಶ್ರೀಗಳ ಖಾಸಗಿ ಕೋಣೆಯ ಬೀಗದ ಕೈಗಾಗಿ ಮಠದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಠವು ಮೂರು ದಿನ ಪೊಲೀಸ್‌ ನಿಗಾದಲ್ಲಿ ಇರಲಿದೆ.

ಮರಣಪೂರ್ವದಲ್ಲೇ ಉತ್ತರಾಧಿಕಾರಿ ನೇಮಕ?
‘ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಮರಣಪೂರ್ವದಲ್ಲೇ ಮಠದ ಉತ್ತರಾಧಿಕಾರಿಯ ಆಯ್ಕೆ ಮಾಡಿ, ಆಪ್ತರ ಬಳಿ ಮಾಹಿತಿ ನೀಡಿದ್ದರು’ ಎಂದು ಮಠದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಶಿರೂರು ಮೂಲಮಠಕ್ಕೆ ಖಾಕಿ ದಿಗ್ಭಂಧನ
ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳು ಅನಾರೋಗ್ಯಕ್ಕೀಡಾದ ದಿನ ಸೇವಿಸಿದ್ದ ಊಟದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಶ್ರೀಗಳ ಆಪ್ತವಲಯದ ಪ್ರಕಾರ, ಸ್ವಾಮೀಜಿ ಬಹಳ ದಿನಗಳಿಂದ ಅನ್ನ ಸೇವನೆಯನ್ನು ನಿಲ್ಲಿಸಿದ್ದರಂತೆ. ಹಾಗಾದರೆ, ವಿಷಪ್ರಾಷನವಾಗಿದ್ದು ಹೇಗೆ ಎಂಬ ಅನುಮಾನ ಕಾಡುತ್ತಿದೆ.

ಎಲ್ಲರೊಂದಿಗೆ ಬೆರೆಯುತ್ತಿದ್ದ ‘ಬಿಂದಾಸ್’ ಸ್ವಾಮೀಜಿ
‘ಎಲೆಕ್ಷನ್‌ಗೆ ನಿಲ್ಲುವುದು ಖಚಿತ, ಗೆಲ್ಲುತ್ತೇನೆ, ಗೆದ್ದ ನಂತರ ನಿಮ್ಮೆಲ್ಲರಿಗೂ ಪಾರ್ಟಿ ಕೊಡ್ತೇನೆ’ ಹೀಗೆಂದು ಹೇಳಿದ್ದು ಯಾವುದೇ ವೃತ್ತಿಪರ ರಾಜಕಾರಣಿ ಅಲ್ಲ, ಉಡುಪಿಯ ಅಷ್ಟ ಮಠಾಧೀಶರಲ್ಲಿ ಒಬ್ಬರಾಗಿದ್ದ ಶೀರೂರು ಮಠದ ಲಕ್ಷ್ಮಿವರತೀರ್ಥ ಸ್ವಾಮೀಜಿ. ಈ ಮೂಲಕ ಅವರು ಎಲ್ಲರೊಂದಿಗೆ ಬೆರಯುವ ಸ್ವಭಾವವನ್ನು ಹೊಂದಿದ್ದರು.

ಲಕ್ಷ್ಮೀವರ ತೀರ್ಥ ಸ್ವಾಮೀಜಿ
ಲಕ್ಷ್ಮೀವರ ತೀರ್ಥ ಸ್ವಾಮೀಜಿ

ವಿಠಲನಿಗಾಗಿ ಬದುಕನ್ನೇ ಮೀಸಲಿಟ್ಟ ಯತಿ
ಹೆಬ್ರಿ ಸಮೀಪದ ಮಡಮಕ್ಕಿಯಲ್ಲಿ ವಿಠಲ ಆಚಾರ್ಯ ಹಾಗೂ ಕುಸುಮ ದಂಪತಿಯ ಪುತ್ರನಾಗಿ 1964ರ ಜೂನ್ 8 ರಂದು ಜನಿಸಿದವರು ಶಿರೂರು ಶ್ರೀಗಳು, ಅವರ ಮೂಲ ನಾಮಧೇಯ ಹರೀಶ್‌ ಆಚಾರ್ಯ. ಪಣಿಯಾಡಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಗ ಅವರಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಲು ಕರೆ ಬಂದಿತ್ತು. ಅದರಂತೆ 1971, ಜುಲೈ 2ರಂದು ಸೋದೆ ಮಠದ ವಿಶ್ವೋತ್ತಮ ತೀರ್ಥರಿಂದ ಶಿರೂರು ಲಕ್ಷ್ಮೀವರ ತೀರ್ಥರಾಗಿ ಸನ್ಯಾಸ ದೀಕ್ಷೆ ಪಡೆದರು.

ನಂತರ ಸೋದೆ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳ ಬಳಿ ಶಾಸ್ತ್ರಾಧ್ಯಯನ ಕೈಗೊಂಡರು.‌ ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥ ಸ್ವಾಮೀಜಿ ಬಳಿ ಸುಧಾಪಾಠ ಅಭ್ಯಾಸ ಮಾಡಿದರು.

ಶೀರೂರು ಸ್ವಾಮೀಜಿ ಏಕೆ ವಿರೋಧ ಕಟ್ಟಿಕೊಂಡಿದ್ದರು?
ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಉಡುಪಿಯ ಅಷ್ಟಮಠಗಳಲ್ಲೇ ವಿಶಿಷ್ಟವಾಗಿ ಗುರುತಿಸಿಕೊಂಡ ಯತಿ, ಬೆರೆಯುವುದು, ನಲಿಯುವುದು ಹಾಗೂ ಮೀರುವುದು ಅವರ ಗುರುತು.

ಅನಿಸಿದ್ದನ್ನು ಸೋಸದೆ ಹೇಳುವುದು, ಉದ್ವೇಗಕ್ಕೆ ಒಳಗಾಗುವುದು ಅವರ ವ್ಯಕ್ತಿತ್ವ. ಇದೇ ಕಾರಣಕ್ಕೆ ಜನ ಸಾಮಾನ್ಯರ ಸ್ವಾಮೀಜಿ ಎಂದೇ ಜನಜನಿತರಾಗಿದ್ದರು. ಅಷ್ಟಮಠದ ಕೆಲವು ಸ್ವಾಮೀಜಿಗಳ ಕೆಂಗಣ್ಣಿಗೆ ಗುರಿಯಾಗಲು ಸಹ ಅದೇ ಕಾರಣವಾಗಿತ್ತು.

ಶೀರೂರು ಮಠದ ಲಕ್ಷ್ಮೀವರ ತೀರ್ಥರ ಬದುಕಿನ ಹಾದಿ...
ಇನ್ನು, ಸ್ವಾಮೀಜಿ ಅವರ ಆರೋಗ್ಯ ಗಟ್ಟಿಮುಟ್ಟಾಗಿತ್ತು ಎಂದು ಹಲವು ಭಕ್ತರು ಹೇಳಿದ್ದಾರೆ. ಶ್ರೀಗಳು ಸಂಗೀತ, ಕ್ರೀಡೆ ಮುಂತಾದ ವಿಷಯಗಳ ಬಗ್ಗೆ ಅಪಾರ ಆಸಕ್ತಿಯನ್ನೂ ಹೊಂದಿದ್ದರು. ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಚೆಗೆ ಪಟ್ಟದ ದೇವರ ವಿಷಯವಾಗಿ ಸುದ್ದಿಯಲ್ಲಿದ್ದ ಶ್ರೀಗಳು ಇಂದು ಇಲ್ಲವಾಗಿದ್ದಾರೆ. ಶ್ರೀಗಳು ನಡೆದುಬಂದ ದಾರಿಯ ಒಂದು ನೋಟ...

ಶ್ರೀಗಳ ದೇಹದಲ್ಲಿ ವಿಷ ಹೇಗೆ ಬಂತು: ಈಶ ವಿಠಲದಾಸ ಸ್ವಾಮೀಜಿ ಪ್ರಶ್ನೆ
ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಿಧನ ದಿಗ್ಭ್ರಮೆ ಉಂಟು ಮಾಡಿದೆ. ಶ್ರೀಗಳ ದೇಹದಲ್ಲಿ ವಿಷ ಹೇಗೆ ಬಂತು? ಎಂಬ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಶೀರೂರು ಶ್ರೀಗಳ ಉತ್ತರಾಧಿಕಾರಿ ನೇಮಕಕ್ಕೆ ರಹಸ್ಯ ಸಭೆ
ಶೀರೂರು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಉತ್ತರಾಧಿಕಾರಿ ನೇಮಕ ಮಾಡುವ ವಿಚಾರವಾಗಿ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಸೇರಿದಂತೆ ಇತರ ಸ್ವಾಮೀಜಿಗಳು ರಹಸ್ಯ ಸಭೆ ನಡೆಸಿದ್ದಾರೆ.

ಸನ್ಯಾಸ ದೀಕ್ಷೆ ಪದ್ಧತಿ ಸುಧಾರಣೆಗೆ ನಾಂದಿ
ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಜೀವನ ಶೈಲಿ ಮತ್ತು ಅವರ ಸಾವು ಸನ್ಯಾಸ ದೀಕ್ಷೆಯ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿದೆ. ಲೌಕಿಕ ಅಥವಾ ಅಧ್ಯಾತ್ಮದ ಅರಿವೇ ಇಲ್ಲದ ‌ಬಾಲ್ಯದಲ್ಲಿಯೇ ಸನ್ಯಾಸ ದೀಕ್ಷೆ ಪಡೆಯುವುದು ಎಷ್ಟು ಸರಿ ಎಂಬ ಪ್ರಶ್ನೆ ವ್ಯಾಪಕ ಚರ್ಚೆಗೊಳಗಾಗಿತ್ತು.

ಸಾಲ ಹಿಂಪಡೆಯಲು ದೈವಕ್ಕೆ ಮೊರೆ ಹೋಗಿದ್ದ ಶಿರೂರು ಶ್ರೀ
ಲಕ್ಷ್ಮೀವರ ತೀರ್ಥ ಶ್ರೀಗಳು ಮುಂಬೈ ಮೂಲದ ಇಬ್ಬರು ವ್ಯಕ್ತಿಗಳಿಗೆ ನೀಡಿದ್ದ ಕೋಟ್ಯಂತರ ರೂಪಾಯಿ ಸಾಲವನ್ನು ಮರುಪಾವತಿ ಮಾಡಿಕೊಡುವಂತೆ ದೈವಕ್ಕೆ ಮೊರೆ ಹೋಗಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.

ಪ್ರಶ್ನೆಗಳನ್ನುಳಿಸಿದ ಭಿನ್ನ ಹಾದಿಯ ಪಯಣಿಗ
ವೇದವಾಙ್ಮಯ, ಸರ್ವಮೂಲಗ್ರಂಥಗಳು, ವ್ಯಾಸಸಾಹಿತ್ಯವನ್ನೇ ಆಧಾರವಾಗಿರಿಸಿಕೊಂಡ ಮಾಧ್ವಪರಂಪರೆಯ ಮಠಗಳಲ್ಲಿ ಹೊಸತನದ ತುಡಿತ, ಬಂಡುಕೋರತನ, ಪ್ರಶ್ನಿಸುವ ಮನಃಸ್ಥಿತಿಗಳೂ ಸಾಧ್ಯ ಎಂದು ತೋರಿಸಿಕೊಟ್ಟವರು ಮಠದ ಲಕ್ಷ್ಮೀವರ ತೀರ್ಥರು.

ಮಡಿವಂತಿಕೆ, ಮೌಢ್ಯ ಮೀರಿನಿಂತ ಸ‌ಂತ
ಯತಿಗಳು ಹೀಗೆಯೇ ಬದುಕುಬೇಕು ಎಂಬ ಧಾರ್ಮಿಕ ಚೌಕಟ್ಟನ್ನು ಮೀರಿದವರು ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ. ಪೂಜೆ, ಧ್ಯಾನ, ಪ್ರವಚನಕ್ಕಿಂತ ಹೆಚ್ಚಾಗಿ, ಭಕ್ತರ ಜತೆಗಿನ ಅವರ ಒಡನಾಟ, ಆಪ್ತತೆ, ಜಾತ್ಯತೀತ ನಿಲುವುಗಳು ಅಷ್ಟಮಠಗಳ ಇತರ ಯತಿಗಳ ಪೈಕಿ ಶಿರೂರು ಶ್ರೀಗಳು ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT