ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಂಡೆ, ಬೆಂಡೆ ತುಟ್ಟಿ; ಕ್ಯಾರೆಟ್ ಅಗ್ಗ

ಕ್ರಿಸ್‌ಮಸ್‌, ಹೊಸ ವರ್ಷ ಮುಗಿದರೂ ಇಳಿಕೆಯಾಗದ ಮೊಟ್ಟೆ ದರ
Last Updated 5 ಜನವರಿ 2023, 15:48 IST
ಅಕ್ಷರ ಗಾತ್ರ

ಉಡುಪಿ: ತರಕಾರಿ ಮಾರುಕಟ್ಟೆಯಲ್ಲಿ ತೊಂಡೆಕಾಯಿ, ಬೆಂಡೆಕಾಯಿ, ಹೀರೇಕಾಯಿ ದರ ಗಗನಕ್ಕೇರುತ್ತಿದ್ದರೆ ಕ್ಯಾರೆಟ್‌, ಬೀನ್ಸ್‌, ಬದನೆಕಾಯಿ ದರ ಇಳಿಕೆ ಕಂಡಿದೆ.

ಕಳೆದವಾರ ಕೆ.ಜಿಗೆ ₹ 80ಕ್ಕೆ ಮಾರಾಟವಾಗಿದ್ದ ತೊಂಡೆಕಾಯಿ ಪ್ರಸ್ತುತ ಶತಕ ಬಾರಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 100ಕ್ಕೆ ಖರೀದಿ ಮಾಡಲಾಗುತ್ತಿದೆ. ಬೆಂಡೆಕಾಯಿ ದರ ಕೂಡ ₹50 ರಿಂದ ₹70ಕ್ಕೆ ಜಿಗಿದಿದೆ. ಕರಾವಳಿಯಲ್ಲಿ ಬೆಳೆಯುವ ಊರಿನ ಬಿಳಿ ಬೆಂಡೆಯ ದರ ಕೆ.ಜಿಗೆ 100 ದಾಟಿದೆ.

ಈರೇಕಾಯಿ ದರ ಕೂಡ ಇಳಿಕೆಯಾಗಿಲ್ಲ. ಕೆ.ಜಿಗೆ ₹60ರಿಂದ ₹70 ದರ ಇತ್ತು. ಕ್ಯಾಪ್ಸಿಕಂ ಬೆಲೆಯೂ ಹೆಚ್ಚಾಗಿದ್ದು ಕಳೆದವಾರ ₹60ಕ್ಕೆ ಸಿಗುತ್ತಿದ್ದ ದಪ್ಪ ಮೆಣಸಿನಕಾಯಿ ₹100ಕ್ಕೆ ಮುಟ್ಟಿದೆ.

ಚಳಿಗಾಲದಲ್ಲಿ ಹೆಚ್ಚಾಗಿ ಬೆಳೆಯುವ ಕ್ಯಾರೆಟ್‌ ಬೆಲೆ ಕುಸಿದಿದೆ. ಕಳೆದವಾರ ₹50 ಇದ್ದ ದರ ಪ್ರಸ್ತುತ ₹40 ರಿಂದ ₹30ಕ್ಕೆ ಇಳಿದಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್‌ ಮಾರುಕಟ್ಟೆಗೆ ಬರುತ್ತಿರುವ ಕಾರಣ ಕ್ಯಾರೆಟ್‌ ಅಗ್ಗವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

2 ತಿಂಗಳ ಹಿಂದೆ ಕ್ಯಾರೆಟ್‌ ₹100ರ ಗಡಿ ದಾಟಿ ಗ್ರಾಹಕರ ಜೇಬಿಗೆ ಬಾರವಾಗಿತ್ತು. ಸದ್ಯ ಬೆಲೆ ಕಡಿಮೆಯಾಗಿರುವ ಕಾರಣ ಕ್ಯಾರೆಟ್‌ ಹಲ್ವ, ಕ್ಯಾರೆಟ್‌ ಜ್ಯೂಸ್‌, ಪಲ್ಯ ಹಾಗೂ ಕ್ಯಾರೆಟ್‌ನಿಂದ ಇತರೆ ಖಾದ್ಯಗಳನ್ನು ತಯಾರಿಸಲು ಗ್ರಾಹಕರು ಕೊಂಚ ಹೆಚ್ಚಾಗಿಯೇ ಖರೀದಿ ಮಾಡುತ್ತಿದ್ದಾರೆ.

ಟೊಮೆಟೊ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು ಕೆ.ಜಿಗೆ ₹20 ರಿಂದ ₹30ದರ ಇತ್ತು. ಈರುಳ್ಳಿ ದರ ₹ 30 ರಿಂದ ₹ 40 ಇತ್ತು. ಎಲೆಕೋಸು ಕೆ.ಜಿಗೆ ₹15 ರಿಂದ ₹20, ಹೂಕೋಸಿನ ದರ ಕೆ.ಜಿಗೆ ₹40 ರಿಂದ ₹50, ಬೂದು ಗುಂಬಳ ₹40, ಸಿಹಿ ಕುಂಬಳಕಾಯಿ ₹30, ಬೆಳ್ಳುಳ್ಳಿ ₹60, ಶುಂಠಿ ₹60, ಹಸಿ ಮೆಣಸಿನಕಾಯಿ ₹ 60, ನುಗ್ಗೆಕಾಯಿ₹ 140, ಬದನೆ ಹಸಿರು ಉದ್ದ ₹40, ಬದನೆ ನೇರಳೆ ಬಣ್ಣದ್ದು ₹35, ಸಾಂಬಾರ್ ಸೌತೆ ₹35 ರಿಂದ ₹40, ಈರೇಕಾಯಿ ₹70, ಪಡುವಲಕಾಯಿ ₹30, ಹಾಗಲಕಾಯಿ₹ 50, ಬೀನ್ಸ್‌ ₹45 ರಿಂದ ₹50, ಆಲೂಗಡ್ಡೆ ₹45 ದರ ಇತ್ತು.

ಸೊಪ್ಪು ದಂಟು ದೊಡ್ಡ ಕಟ್ಟಿಗೆ ₹ 10 ರಿಂದ ₹15, ಕೊತ್ತಮರಿ ₹ 5, ಕರಿಬೇವು ₹ 5, ಪುದಿನ ₹5, ಸಬ್ಬಸ್ಸಿಗೆ ₹5, ಮೆಂತೆ ₹ 6, ಪಾಲಕ್‌ ₹5 ದರ ಇತ್ತು. ಮೂಲಂಗಿ ₹ 40, ಹಸಿರು ಬಟಾಣಿ ಸಿಪ್ಪೆ ಸಹಿತ ₹ 50, ಗೆಣಸು ₹ 40, ತೆಂಗಿನ ಕಾಯಿಗೆ ₹ 25 ದರ ಇತ್ತು.

ಹಣ್ಣುಗಳ ದರ:

ಚಳಿಗಾಲವಾದ ಕಾರಣ ಹುಳಿ ಪ್ರಧಾನವಾಗಿರುವ ಹಣ್ಣುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು ಕಿತ್ತಳೆ ಕೆ.ಜಿಗೆ ₹70, ಮೋಸಂಬಿ ₹80, ದ್ರಾಕ್ಷಿ ಹಸಿರು ₹120, ದ್ರಾಕ್ಷಿ ಕಪ್ಪು ₹160 ದರ ಇತ್ತು. ಸೇಬಿಗೆ ಗುಣಮಟ್ಟದ ಆಧಾರದಲ್ಲಿ ಬೆಲೆ ನಿಗಧಿಪಡಿಸಲಾಗಿದ್ದು, ಸೇಬು (ಕಿನ್ನೂರು) ಕೆ.ಜಿಗೆ ₹ 125, ರಾಯಲ್ ಗಾಲಾ ₹ 250, ರೆಡ್ ಡಿಲಿಷಿಯಸ್‌ ₹240, ಫುಜಿ ₹ 250 ದರ ಇತ್ತು.

ಸಪೋಟ ₹50, ಸೀಬೆಹಣ್ಣು ₹80, ಮಸ್ಕ್ ಮೆಲನ್ ₹ 40, ದಾಳಿಂಬೆ ₹ 200, ಪೈನಾಪಲ್‌ 30, ಪಪ್ಪಾಯ ₹40, ವಾಟರ್ ಮೆಲನ್ ₹ 15ರಿಂದ ₹20, ಬಾಳೆಹಣ್ಣು ಏಲಕ್ಕಿ ₹ 65, ಪಚ್ಚಬಾಳೆ ₹ 30 ಬೆಲೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT