ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಡ ಮುಚ್ಚಲು ನೋಟಿಸ್: ನಿರ್ಣಯ

ಬಿ.ಆರ್‌.ಶೆಟ್ಟಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಸ್ಥಗಿತ: ಕೃತಕ ಕೆರೆ ಸೃಷ್ಟಿಯಿಂದ ಆತಂಕ
Last Updated 31 ಜುಲೈ 2021, 16:23 IST
ಅಕ್ಷರ ಗಾತ್ರ

ಉಡುಪಿ: ಬಿ.ಆರ್‌.ಶೆಟ್ಟಿ ಸಮೂಹ ಸಂಸ್ಥೆಯಿಂದ ನಗರಸಭೆಯ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಬೃಹತ್ ಗುಂಡಿ ನಿರ್ಮಾಣವಾಗಿ ನೀರು ತುಂಬಿಕೊಂಡಿದ್ದು ಆತಂಕ ಎದುರಾಗಿದೆ. ಕೂಡಲೇ ಗುಂಡಿ ಮುಚ್ಚಿಸಲು ಸಂಸ್ಥೆಗೆ ನೋಟಿಸ್‌ ನೀಡಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಆಸ್ಪತ್ರೆ ನಿರ್ಮಾಣಕ್ಕಾಗಿ ತೋಡಿರುವ 40 ಅಡಿ ಗುಂಡಿಯನ್ನು 15 ದಿನದೊಳಗೆ ಮುಚ್ಚಬೇಕು. ಇಲ್ಲವಾದರೆ ಗುಂಡಿ ಮುಚ್ಚುವ ಖರ್ಚನ್ನು ಸಂಸ್ಥೆ ನಗರಸಭೆಗೆ ಭರಿಸಬೇಕು ಎಂದು ತೀರ್ಮಾನಿಸಲಾಯಿತು.

ಇದಕ್ಕೂ ಮುನ್ನ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ವಿಷಯ ಪ್ರಸ್ತಾಪಿಸಿ, ಹಿಂದೆ, ಹಾಜಿ ಅಬ್ದುಲ್ಲಾ ಅವರು ದಾನವಾಗಿ ನೀಡಿರುವ ಜಾಗವನ್ನು ಹಿಂದಿನ ಸರ್ಕಾರ ಬಿ.ಆರ್‌.ಶೆಟ್ಟಿ ಅವರ ಸಂಸ್ಥೆಗೆ ನೀಡಿದೆ. ಕಾಮಗಾರಿ ಅರ್ಧಕ್ಕೆ ನಿಂತು ಕೃತಕ ಕೆರೆ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ಕಟ್ಟಡಗಳಿಗೆ ಆತಂಕ ಸೃಷ್ಟಿಯಾಗಿದೆ ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ನಗರಸಭೆಯಿಂದ ಅನುಮತಿ ಪಡೆಯದೆ ಮೂರು ತಳ ಅಂತಸ್ತು ನಿರ್ಮಿಸಲು ಸಂಸ್ಥೆ ಮುಂದಾಗಿದ್ದು, ಕಾನೂನು ಬಾಹಿರ ಕಾರಣಕ್ಕೆ ಕಾಮಗಾರಿಗೆ ತಡೆನೀಡಲಾಗಿದೆ. ಈಗ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, 15 ದಿನದೊಳಗೆ ಮುಚ್ಚಬೇಕು. ಇಲ್ಲದಿದ್ದರೆ ₹ 65 ಲಕ್ಷವನ್ನು ನಗರಸಭೆಗೆ ಪಾವತಿಸಬೇಕು ಎಂದು ನೋಟಿಸ್‌ ಜಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೂಡಂಗಡಿಗಳ ತೆರವು ಸಂಬಂಧ ಮಾತನಾಡಿದ ಅಮೃತಾ ಕೃಷ್ಣಮೂರ್ತಿ ‘ಬ್ರಹ್ಮಗಿರಿ ಮಾದರಿಯಲ್ಲಿ ನಗರ ಬೇರೆಡೆ ಇರುವ ಗೂಡಂಗಡಿಗಳನ್ನು ತೆರವುಗೊಳಿಸಬೇಕು' ಎಂದು ಅಮೃತಾ ಕೃಷ್ಣಮೂರ್ತಿ ಹಾಗೂ ರಮೇಶ್ ಕಾಂಚನ್ ಆಗ್ರಹಿಸಿದರು.

ಸದಸ್ಯ ವಿಜಯ ಕೊಡವೂರು ಮಾತನಾಡಿ, ‘ನಗರ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿರುವ ಹಣ್ಣು, ತರಕಾರಿ ಹಾಗೂ ಫಾಸ್ಟ್‌ಫುಡ್‌ಗಳಲ್ಲಿ ರಾಸಾಯನಿಕ ಮಿಶ್ರಣ ಬಳಕೆ ದೂರುಗಳಿದ್ದು, ಸೂಕ್ರ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ನಗರಸಭೆ ಪರಿಸರ ಎಂಜಿನಿಯರ್ ಆಹಾರ ಸರಬರಾಜು ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಲಿದ್ದು, ನಗರಸಭೆಯಿಂದಲೂ ಪರಿಶೀಲಿಸಲಾಗುವುದು ಎಂದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ.ಉದಯ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT