ಗುರುವಾರ , ಜೂನ್ 24, 2021
29 °C
ಅಧಿಕಾರಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ

ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಮಲ್ಪೆ, ಮೊಳಕಾಲ್ಮೂರು 169 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಈ ಸಮಯಕ್ಕೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿರಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ಪೂರ್ಣ ಗೊಂಡಿಲ್ಲ. ಪರಿಣಾಮ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಆದ್ಯತೆ ಮೇರೆಗೆ ಕಾಮಗಾರಿ ಮುಗಿಸಿ ಎಂದು ಸೂಚನೆ ನೀಡಿದರು.

ಕಳೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ಏಪ್ರಿಲ್ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು ಆದರೆ, ಪೂರ್ಣಗೊಂಡಿಲ್ಲ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್‌ನಿಂದ ಕಾರ್ಮಿಕರು ಸ್ವಗ್ರಾಮಗಳಿಗೆ ಮರಳಿದ್ದು ಕಾಮಗಾರಿ ಹಿನ್ನಡೆಯಾಗಿದೆ. ಮುಂದಿನ ಡಿಸೆಂಬರ್‌ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಕುಂದಾಪುರದ ವಿನಾಯಕ ಟಾಕಿಸ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿರುವ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಈ ಬಗ್ಗೆ ಹೆದ್ದಾರಿ ಎಂಜಿನಿಯರ್ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ಹೆದ್ದಾರಿ ಕಾಮಗಾರಿ ಸಂದರ್ಭ ಧಾರ್ಮಿಕ ಸ್ಥಳಗಳಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್‌ಗಳಲ್ಲಿ ಆಬುಲೆನ್ಸ್‌ ಹಾಗೂ ವಿಐಪಿಗಳ ವಾಹನ ಸಂಚರಿಸಲು ಪ್ರತ್ಯೇಕ ಮಾರ್ಗ ಕಾಯ್ದಿರಿಸಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು. ಕರಾವಳಿ ಬೈಪಾಸ್ ಹಾಗೂ ಪರ್ಕಳದ ಹೆದ್ದಾರಿಯಲ್ಲಿ ಮಳೆಯಿಂದ ಗುಂಡಿಗಳಾಗಿದ್ದು, ದುರಸ್ತಿ ನಡೆಸಬೇಕು. ಅಪಘಾತಗಳಾಗದಂತೆ ಎಚ್ಚರ ವಹಿಸಬೇಕು ಎಂದರು.

ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯ ಅಂಡರ್ ಪಾಸ್, ಕಟಪಾಡಿ ಅಂಡರ್‌ ಪಾಸ್ ನಿರ್ಮಾಣ, ಅಂಬಲಪಾಡಿ ಜಂಕ್ಷನ್ ಬಳಿಯ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಕೋವಿಡ್ ಮಾಹಿತಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮರಣಗಳು ಸಂಭವಿಸಿಲ್ಲ. ಸೋಂಕಿನ ಜತೆಗೆ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಹಾಗೂ ಇತರೆ ಖಾಯಿಲೆಗಳಿಂದ ಬಳುತ್ತಿದ್ದವರಿಗೆ ಸೋಂಕು ತಗುಲಿ ಮರಣ ಸಂಭವಿಸಿದೆ. ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಫೀವರ್ ಕ್ಲಿನಿಕ್‌ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.