ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಮಾದರಿಯಲ್ಲಿ ಹಾಲಿಗೆ ಕನಿಷ್ಠ ಬೆಲೆ ನಿಗದಿ

ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ರವಿರಾಜ್‌ ಹೆಗ್ಡೆ
Last Updated 6 ಜುಲೈ 2018, 13:08 IST
ಅಕ್ಷರ ಗಾತ್ರ

ಉಡುಪಿ: ‘ಗುಜರಾತ್‌ ಮಾದರಿಯಲ್ಲಿ ಹಾಲಿಗೆ ಕನಿಷ್ಠ ಬೆಲೆ ನಿಗದಿ ಪಡಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ತಿಳಿಸಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಸಹಯೋಗದಲ್ಲಿ ಶುಕ್ರವಾರ ಕಿದಿಯೂರು ಮಾಧವ ಕೃಷ್ಣ ಸಭಾಭವನದಲ್ಲಿ ಆಯೋಜಿಸಿದ್ದ ‘ತಾಲ್ಲೂಕಿನ ಹಾಲು ಉತ್ಪಾದಕರ ಸಹಾಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾಲೋಚನಾ ಸಭೆ’ಯಲ್ಲಿ ಮಾತನಾಡಿದರು.

‘ಪ್ರಸ್ತುತ ರಾಜ್ಯದಲ್ಲಿ 84 ಲಕ್ಷ ಲೀಟರ್‌ ಹಾಲು ಸಾಮರ್ಥ್ಯ ಸಾಧಿಸಿರುವ ಒಕ್ಕೂಟವು ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿದೆ. 40 ಲಕ್ಷ ಲೀಟರ್‌ ಹಾಲಿನಪುಡಿ ಉತ್ಪಾದನೆ ಮಾಡುತ್ತಿದೆ. ಇದರಿಂದ ಒಕ್ಕೂಟಕ್ಕೆ ಸುಮಾರು ₹3ರಿಂದ ₹4 ಕೋಟಿ ಹೆಚ್ಚುವರಿ ಹೊರೆಯಾಗಿದೆ. ಗುಜರಾತ್‌ನಲ್ಲಿ ಹಾಲಿಗೆ ಕನಿಷ್ಠ ದರ ನಿಗದಿಪಡಿಸಿದಂತೆ, ಕರ್ನಾಟಕದಲ್ಲೂ ಹಾಲಿಗೆ ಕನಿಷ್ಠ ಬೆಲೆ ನಿಗದಿ ಪಡಿಸಿ ಲಾಭಾಂಶಕ್ಕೆ ಅನುಗುಣವಾಗಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಚಿಂತನೆ ಇದೆ. ಒಂದು ವೇಳೆ ಸಂಸ್ಥೆಗೆ ಆರ್ಥಿಕ ಸಮಸ್ಯೆ ಉಂಟಾದಾಗ ಕಡಿತಗೊಳಿಸಲಾಗುತ್ತದೆ. ಇದಕ್ಕೆ ಸಹಕಾರಿ ಸಂಘದ ಸದಸ್ಯರ ಸಹಭಾಗಿತ್ವ ಅಗತ್ಯವಾಗಿದೆ’ ಎಂದರು.

‘ಕಳೆದ ಸಾಲಿನಲ್ಲಿ ಒಕ್ಕೂಟವು ₹800 ಕೋಟಿ ವ್ಯವಹಾರ ನಡೆಸಿದ್ದು, ₹4.83 ಕೋಟಿ ನಿವ್ವಳ ಲಾಭಗಳಿಸಿದೆ. 1986ರಲ್ಲಿ ಒಕ್ಕೂಟ ಆರಂಭಗೊಂಡಿದ್ದು, ಹಂತಹಂತವಾಗಿ ಬೆಳೆದು 1996ರಲ್ಲಿ ಗರಿಷ್ಠ 50 ಸಾವಿರ ಲೀಟರ್‌ ಹಾಲು ಸಂಗ್ರಹ ಗುರಿ ತಲುಪಿತ್ತು. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ 4.82 ಲಕ್ಷ ಲೀಟರ್‌ ಹಾಲನ್ನು ಉತ್ಪಾದನೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಹಾಲಿಗೆ ಅತಿ ಹೆಚ್ಚಿನ ದರ ಕೊಡುವ ಕೀರ್ತಿ ಒಕ್ಕೂಟಕ್ಕೆ ಸಲ್ಲುತ್ತದೆ. ರೈತರಿಗೆ ಕೆಎಂಎಫ್‌ ಕಲ್ಪಿಸಿದ ಉತ್ತಮ ಸೌಲಭ್ಯ ಮತ್ತು ಖಾಸಗಿ ಕಂಪನಿಗಳು ಹಾಲು ಖರೀದಿ ದರ ಇಳಿಕೆ ಮಾಡಿರುವುದರಿಂದ ಕೆಎಂಎಫ್‌ಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚಳವಾಗಿದೆ. ಉತ್ತಮ ಗುಣಮಟ್ಟದ ಹಾಲಿನ ಪ್ರತಿ ಲೀಟರ್‌ಗೆ ₹31.45 ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಹೆಚ್ಚುವರಿ ಹಾಲಿನಿಂದ ಒಕ್ಕೂಟಕ್ಕೆ ಆಗುವ ನಷ್ಟವನ್ನು ಭರಿಸಲು ಹೆಚ್ಚುದಿನ ಇಡಲು ಸಾಧ್ಯವಾಗುವ ‘ತೃಪ್ತಿ’ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಕೇರಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ 35 ಲಕ್ಷ ಲೀಟರ್ ಹಾಲು ಕಳುಹಿಸಲಾಗುತ್ತಿದೆ. ಶೀಘ್ರದಲ್ಲಿ ‘ಜೀರಾ ಮಜ್ಜಿಗೆ’ ಮಾರುಕಟ್ಟೆಗೆ ತರಲಾಗುತ್ತದೆ’ ಎಂದರು.

‌‌ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಟಿ.ಸೂರ್ಯ ಶೆಟ್ಟಿ, ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ, ಜಾನಕಿ ಹಂದೆ, ನವೀನ್‌ ಚಂದ್ರ ಜೈನ್‌, ಡಾ.ಬಿ.ವಿ ಸತ್ಯನಾರಾಯಣ, ಡಾ. ನಿತ್ಯಾನಂದ ಭಕ್ತ, ಶಿವ ಶಂಕರ ಸ್ವಾಮಿ ಉಪಸ್ಥಿತರಿದ್ದರು.

ದಿನಕರ್‌ ಶೆಟ್ಟಿ ಸ್ವಾಗತಿಸಿದರು, ಅಶೋಕ್‌ ಕುಮಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT