ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಭೂಮಿ ಮೇಲೆ ಅರಣ್ಯ ಇಲಾಖೆಗೆ ಹಕ್ಕಿಲ್ಲ

ಸರ್ಕಾರದ ಭೂಮಿಯಲ್ಲಿರುವ ಮರಗಳ ತೆರವಿಗೆ ಅನುಮತಿ ಕೊಡಿ: ಸಚಿವ ದೇಶಪಾಂಡೆ ಸೂಚನೆ
Last Updated 18 ಜೂನ್ 2019, 15:45 IST
ಅಕ್ಷರ ಗಾತ್ರ

ಉಡುಪಿ: ಕಂದಾಯ ಇಲಾಖೆಯ ಭೂಮಿಯಲ್ಲಿ ಮರ ಬೆಳೆಸುವ ಅಧಿಕಾರ ಅರಣ್ಯ ಇಲಾಖೆಗೆ ಇಲ್ಲ. ಒಂದುವೇಳೆ ಅನುಮತಿ ಪಡೆದು ಮರ ಬೆಳೆಸಿದರೂ, ಜನಪರ ಉದ್ದೇಶಕ್ಕೆ ಮರಗಳ ಕಟಾವಿಗೆ ಅನುಮತಿ ಕೇಳಿದಾಗ ಕೊಡಬೇಕು ಎಂದು ಸಚಿವ ಆರ್‌.ವಿ.ದೇಶಪಾಂಡೆ ಅರಣ್ಯಾಧಿಕಾರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಾಸಕ ರಘುಪತಿ ಭಟ್‌, ಉಪ್ಪೂರು ಗ್ರಾಮದಲ್ಲಿ ನಿವೇಶನ ಹಂಚಿಕೆಗೆ ಮೀಸಲಿಟ್ವ ಕಂದಾಯ ಭೂಮಿಯಲ್ಲಿ ಅಕೇಶಿಯಾ ಮರಗಳಿದ್ದು, ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂಬ ದೂರಿಗೆ ಸಚಿವರು ಸ್ಪಂದಿಸಿದರು.

ಪಂಚಾಯತ್ ಮಾಲೀಕತ್ವದ ಭೂಮಿಯಲ್ಲಿ ಬೆಳೆದ ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆಗೆ ಮನವಿ ಬಂದರೆ ಪರಿಗಣಿಸಬೇಕು ಎಂಬ ಕಾನೂನು ಇದೆ. ಕಟಾವು ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡಿ, ವೆಚ್ಚ ಕಳೆದು ಉಳಿಕೆ ಹಣವನ್ನು ಸ್ಥಳೀಯ ಆಡಳಿತಕ್ಕೆ ನೀಡಬೇಕು ಎಂಬ ನಿಯಮವೂ ಇದೆ ಎಂದು ತಿಳಿಸಿದರು.

ಅರಣ್ಯ ರಕ್ಷಣೆಗೆ ಒತ್ತು ಕೊಟ್ಟು, ಕಾಡು ಒತ್ತುವರಿಯಾಗದಂತೆ ಕಾಪಾಡಿ. ಮರಗಳ್ಳತನಕ್ಕೆ ಕಡಿವಾಣ ಹಾಕಿ. ಅರಣ್ಯ ಭೂಮಿಯಲ್ಲಿ ಎಷ್ಟು ಬೇಕಾದರೂ ಗಿಡ ನೆಡಿ. ಆದರೆ, ಕಂದಾಯ ಭೂಮಿಯಲ್ಲಿ ಗಿಡ ನೆಟ್ಟು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಕಿರುಕುಳ ನೀಡಬೇಡಿ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಪ್ರಭಾಕರನ್‌, ‘12 ಎಕರೆಗೆ ಒಪ್ಪಿಗೆ ನೀಡಲಾಗಿದೆ. 8 ಎಕರೆ ಮಾತ್ರ ಬಾಕಿ ಇದ್ದು ಕೂಡಲೇ ಅನುಮತಿ ನೀಡುವುದಾಗಿ’ ತಿಳಿಸಿದರು.

ಕರಾವಳಿಯಲ್ಲಿ ತುಂಡು ಭೂಮಿ ಹೊಂದಿರುವವರ ಸಂಖ್ಯೆ ಹೆಚ್ಚು. 15 ರಿಂದ 20 ಸೆಂಟ್ಸ್‌ ಭೂ ಪರಿವರ್ತನೆಗೆ 11 ‘ಇ’ ಕಡ್ಡಾಯಮಾಡಲಾಗಿದ್ದು, ತುಂಬಾ ಸಮಸ್ಯೆಯಾಗಿದೆ. ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಶಾಸಕ ರಘುಪತಿ ಭಟ್‌ ಮನವಿ ಮಾಡಿದರು.

ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಉಪ ವಿಭಾಗ ಮಾತ್ರ ವಿದ್ದು, ಕಾರ್ಯದೊತ್ತಡ ಹೆಚ್ಚಾಗಿದೆ. ಉಡುಪಿ ಉಪ ವಿಭಾಗ ರಚನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

ಅನಧಿಕೃತ ಸಾಗುವಳಿ ಸಕ್ರಮೀಕರಣದ 94 ಎ, 94 ಬಿ, 94 ಸಿ, 94 ಸಿಸಿ ಬಾಕಿ ಅರ್ಜಿ, ಭೂ ಪರಿವರ್ತನೆ ಹಾಗೂ ಡೀಮ್ಡ್‌ ಭೂಮಿ ಪರಿವರ್ತನೆಯ ಅರ್ಜಿ, ಕರ್ನಾಟಕ ಭೂ ಸುಧಾರಣಾ ಕಾಯ್ದೆಯಡಿ 1961 ಕಲಂ 79 ಎ, 79 ಬಿ ಪ್ರಕರಣ, ಭೂಮಿ ತಂತ್ರಾಂಶದಲ್ಲಿ ಬಾಕಿ ಅರ್ಜಿಗಳನ್ನು 60 ದಿನಗಳ ಒಳಗೆ ವಿಲೇವಾರಿಗೆ ಕ್ರಮಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ಪಿಂಚಣಿ ಕೊಡಿ:

ಪಿಂಚಣಿ ಪಡೆಯುತ್ತಿರುವವರು ಬಡವರಾಗಿದ್ದು, ಅವರಿಗೆ ತೊಂದರೆ ಕೊಡಬೇಡಿ. 10 ದಿನಗಳೊಳಗೆ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.

‘ಪ್ರಭಾವಿಗಳ ಒತ್ತುವರಿ ತೆರವುಗೊಳಿಸಿ’

ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ನಿಧಾನಗತಿಯಲ್ಲಿ ಸಾಗಿದ್ದು, ವೇಗ ನೀಡಬೇಕು. ನಗರಸಭೆ ಹಾಗೂ ಸ್ಥಳೀಯ ಆಡಳಿತಗಳಿಗೆ ಸೇರಿದ ಜಾಗಕ್ಕೆ ಬೇಲಿ ಹಾಕಿ, ಫಲಕಗಳನ್ನು ಅಳವಡಿಸಿ. ಜಿಲ್ಲೆಯಲ್ಲಿ 3,868 ಎಕರೆ ಸರ್ಕಾರಿ ಭೂಮಿ ಒತ್ತುವರಿ ಗಂಭೀರ ವಿಚಾರ. ಹಣವಂತರು, ಪ್ರಭಾವಿಗಳು ಮಾಡಿಕೊಂಡಿರುವ ಒತ್ತುವರಿಯನ್ನು ಮೊದಲು ತೆರವುಗೊಳಿಸಿ. ಬಳಿಕ ಉಳಿದವರ ಒತ್ತುವರಿ ತೆರವಿಗೆ ಗಮನಕೊಡಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT