ಬುಧವಾರ, ನವೆಂಬರ್ 20, 2019
26 °C
ಭಯಬೇಡ, ಕಾರ್ಯಾಚರಣೆಗೆ ಸಹಕರಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್‌

ಸಾಗರ ಕವಚ ಅಣಕು ಕಾರ್ಯಾಚರಣೆ ಇಂದಿನಿಂದ

Published:
Updated:
Prajavani

ಉಡುಪಿ: ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಹಾಗೂ ಭದ್ರತಾ ದೃಷ್ಟಿಯಿಂದ ಪ್ರಸ್ತುತ ಇರುವ ರಕ್ಷಣಾ ಕ್ರಮಗಳು ಎಷ್ಟು ಸಮರ್ಥವಾಗಿವೆ ಎಂಬುದನ್ನು ಮೌಲ್ಯಮಾಪನ ಮಾಡಲು ನ.6ರಿಂದ 7ರ ವರೆಗೆ ಜಿಲ್ಲೆಯಾದ್ಯಂತ ಸಾಗರ ಕವಚ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಣಕು ಕಾರ್ಯಾಚರಣೆಯ ಮುಖ್ಯ ಉದ್ದೇಶ ರಕ್ಷಣಾ ಸಾಮರ್ಥ್ಯವನ್ನು ಸನ್ನದ್ಧಗೊಳಿಸುವುದು. ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ನಡುವಿನ ಸಾಮರಸ್ಯ ವೃದ್ಧಿಸಿ ಸಾಮರ್ಥ್ಯವನ್ನು ಉನ್ನತೀಕರಣಗೊಳಿಸುವುದು ಎಂದರು.

ಜಿಲ್ಲೆಯ ಪ್ರವಾಸಿ ತಾಣಗಳು, ಬೀಚ್‌ಗಳು, ದೇವಸ್ಥಾನ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಪ್ರಮುಖ ವಾಣಿಜ್ಯ ಸಂಕೀರ್ಣ, ಸರ್ಕಾರಿ ಕಟ್ಟಡಗಳು, ಕೈಗಾರಿಕೆಗಳ ಬಳಿ ವ್ಯಾಪಕ ತಪಾಸಣೆ ನಡೆಯಲಿದೆ.  ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.

ಪ್ರಮುಖ ಮಾಲ್‌ಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ, ದೇವಾಲಯ, ಬಂದರು ಹಾಗೂ ಕೈಗಾರಿಕೆಗಳ ಮೇಲ್ವಿಚಾರಣೆಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಣಕು ಕಾರ್ಯಾಚರಣೆ ಸಂದರ್ಭ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದಿಂದ ಹಾಗೂ ಲೋಪಗಳಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಕಾರ್ಯಾಚರಣೆ ವೇಳೆ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು. ಭಯಭೀತರಾಗದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಾಚರಣೆಗೆ ಚೆಕ್ ಪೋಸ್ಟ್‌ಗಳನ್ನು ತೆರೆಯಲಿದ್ದು, ಜಿಲ್ಲೆಯಲ್ಲಿ ವಾಹನಗಳ ವ್ಯಾಪಕ ತಪಾಸಣೆ ನಡೆಯಲಿದೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಮೀನುಗಾರರು, ಗುರುತಿನ ಚೀಟಿ ಮತ್ತು ಅಗತ್ಯ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳಬೇಕು. ಸಮುದ್ರದಲ್ಲಿ ಅಪರಿಚಿತ ದೋಣಿಗಳು ಹಾಗೂ ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದು ಎಸ್‌ಪಿ ನಿಶಾ ಜೇಮ್ಸ್ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)