ಶನಿವಾರ, ಅಕ್ಟೋಬರ್ 19, 2019
27 °C
ಯುವಜನಾಂಗದ ಸಬಲೀಕರಣಕ್ಕೆ 15 ದಿನಗಳ ತರಬೇತಿ

‘ರಾಷ್ಟ್ರೀಯ ಯುವ ಕಾರ್ಯಕರ್ತರ ಶಿಬಿರ’

Published:
Updated:
Prajavani

ಉಡುಪಿ: ಯುವ ಜನಾಂಗ ನಿಸ್ವಾರ್ಥ ಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ 15 ದಿನಗಳ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೆಹರೂ ಯುವಕೇಂದ್ರದ ಜಿಲ್ಲಾ ಸಮನ್ವಯದಾಧಿಕಾರಿ ವಿಲ್ಫ್ರೆಡ್ ಡಿಸೋಜ ತಿಳಿಸಿದರು.‌

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.10ರಿಂದ 24ರವರೆಗೆ ಬ್ರಹ್ಮಗಿರಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಎಸ್‌ಎಚ್‌ಜಿ ಕೇಂದ್ರದಲ್ಲಿ ವಸತಿ ಸಹಿತ ತರಬೇತಿ ಶಿಬಿರ ನೀಡಲಾಗುವುದು. ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಿಂದ 108 ಯುವ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ತರಬೇತಿ ಅವಧಿಯಲ್ಲಿ ನುರಿತ ತಜ್ಞರು ರಾಷ್ಟ್ರೀಯ ಹಿತಾಸಕ್ತಿ, ಸಮಾಜ ಸೇವೆ ಕುರಿತು ಉಪನ್ಯಾಸ ನೀಡಲಿದ್ದಾರೆ. ನಾಯಕತ್ವ, ವ್ಯಕ್ತಿತ್ವ ವಿಕಸನ, ಧನಾತ್ಮಕ ಚಿಂತನೆ, ಜಲಶಕ್ತಿ ಅಭಿಯಾನ, ಮಳೆ ನೀರು ಸಂಗ್ರಹದ ಮಹತ್ವ, ಸಂವಹನ ಕೌಶಲ, ಭಾಷಣ ಕಲೆ, ಭ್ರಷ್ಟಾಚಾರ ನಿರ್ಮೂಲನೆ, ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಭಕ್ತಿ, ಸಂಸ್ಕೃತಿ, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮ, ಸ್ವ ಉದ್ಯೋಗ, ಸರ್ಕಾರದ ಯೋಜನೆಗಳ ಕುರಿತು ಶಿಬಿರದಲ್ಲಿ ಯುವಜನಾಂಗಕ್ಕೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಜತೆಗೆ, 5 ದಿನಗಳ ಕ್ಷೇತ್ರಭೇಟಿಯಲ್ಲಿ ಗ್ರಾಮ ಪಂಚಾಯ್ತಿಗಳ, ಎಸ್‌ಎಲ್‌ಆರ್‌ಎಂ ಘಟಕಗಳ ಕಾರ್ಯ ನಿರ್ವಹಣೆ, ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ, ಮಿಯಾರಿನಲ್ಲಿರುವ ಸ್ವ ಉದ್ಯೋಗ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಜತೆ ಸಂವಾದ ನಡೆಸಲಾಗುವುದು ಎಂದರು.

ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಅ.11ರಂದು ಬೆಳಿಗ್ಗೆ 11ಕ್ಕೆ ಬ್ರಹ್ಮಗಿರಿಯ ಎನ್‌ಐಎಸ್‌ಟಿ ಕೇಂದ್ರದಲ್ಲಿ ನಡೆಯಲಿದೆ. ಶಾಸಕ ರಘುಪತಿ ಭಟ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಪಂಚಾಯ್ತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ನಿಶಾ ಜೇಮ್ಸ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಇದ್ದರು.

Post Comments (+)