ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌ ಪರೀಕ್ಷೆ: 311 ವಿದ್ಯಾರ್ಥಿಗಳು ಗೈರು

2,673 ಮಂದಿ ಹಾಜರು, 5 ಕೇಂದ್ರಗಳಲ್ಲಿ ಪರೀಕ್ಷೆ:
Last Updated 5 ಮೇ 2019, 19:46 IST
ಅಕ್ಷರ ಗಾತ್ರ

ಉಡುಪಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಜಿಲ್ಲೆಯ 5 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ವಿದ್ಯಾರ್ಥಿಗಳು ‘ನೀಟ್‌’ ಪರೀಕ್ಷೆ ಬರೆದರು.

ಬ್ರಹ್ಮಾವರದ ಲಿಟಲ್‌ ರಾಕ್‌ ಇಂಡಿಯನ್‌ ಶಾಲೆ, ಉಡುಪಿಯ ಸೇಂಟ್‌ ಮೇರಿಸ್‌ ಶಾಲೆ, ಜಿ.ಎಂ ವಿದ್ಯಾನಿಕೇತನ, ಮಾಧವ ಕೃಪ ಹಾಗೂ ಪಿಪಿಸಿ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.

311 ಮಂದಿ ಗೈರು

ಜಿಲ್ಲೆಯಲ್ಲಿ ಒಟ್ಟು 2,984 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಅವರಲ್ಲಿ 2,673 ಮಂದಿ ಪರೀಕ್ಷೆಗೆ ಹಾಜರಾದರೆ, 311 ಮಂದಿ ಗೈರಾಗಿದ್ದರು. ಮಧ್ಯಾಹ್ನ 1.30ಕ್ಕೆ ಪರೀಕ್ಷಾ ಕೇಂದ್ರಗಳ ಗೇಟ್ ಮುಚ್ಚಲಾಯಿತು.ಮಧ್ಯಾಹ್ನ 2ಕ್ಕೆ ಆರಂಭವಾದ ಪರೀಕ್ಷೆ ಸಂಜೆ 5ರವರೆಗೆ ನಡೆಯಿತು.

ಗುರುತಿನ ಚೀಟಿ ತಂದಿರಲಿಲ್ಲ:

ಅಡ್ಮಿಟ್‌ ಕಾರ್ಟ್‌, ಪಾಸ್‌ ಪೋರ್ಟ್ ಅಳತೆಯ ಮೂರು ಫೋಟೊ ಹಾಗೂ ಆಧಾರ್ ಕಾರ್ಡ್‌ ಅಥವಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಕೆಲವರು ಒರಿಜಿನಲ್‌ ಆಧಾರ್ ಕಾರ್ಡ್‌ ತಂದಿರಲಿಲ್ಲ. ಇದರಿಂದ ಸೇಂಟ್ ಮೇರಿಸ್ ಶಾಲೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು.

ತಕ್ಷಣ ಮೇಲಧಿಕಾರಿಗಳಿಂದ ಅನುಮತಿ ಪಡೆದು ಒರಿಜಿನಲ್‌ ಆಧಾರ್ ಕಾರ್ಡ್‌ ಇಲ್ಲದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಕೆಲವು ವಿದ್ಯಾರ್ಥಿನಿಯರಿಗೆ ಮೂಗುತಿ ಬಿಚ್ಚಲು ಸಾಧ್ಯವಾಗಿರಲಿಲ್ಲ. ಪರಿಶೀಲಿಸಿ ಅಂಥವರಿಗೂ ಪರೀಕ್ಷೆ ಬರೆಯಲು ಅನುಮತಿ ನೀಡಲಾಯಿತು ಎಂದು ಪರೀಕ್ಷೆಯ ನಗರ ಕೋಆರ್ಡಿನೇಟರ್‌ ತಿಳಿಸಿದರು.

ಟ್ರಾಫಿಕ್‌ ಜಾಮ್‌:

ಭಾನುವಾರ ಪರೀಕ್ಷೆ ಇದ್ದಿದ್ದರಿಂದ ಮಕ್ಕಳ ಜತೆಯಲ್ಲಿ ಪೋಷಕರು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಕನ್ನಾರ್ಪಾಡಿಯ ಸೇಂಟ್‌ ಮೇರಿಸ್‌ ಶಾಲೆ ರಸ್ತೆಯ ಇಕ್ಕೆಗಳಲ್ಲಿ ನೂರಾರು ಕಾರುಗಳು ಜಮಾಯಿಸಿದ್ದವು. ಮಕ್ಕಳು ಪರೀಕ್ಷೆ ಬರೆದು ಬರುವವರೆಗೂ ಪೋಷಕರು ಕಾರಿನಲ್ಲೇ ಕಾಯುತ್ತಿದ್ದ ದೃಶ್ಯ ಕಂಡುಬಂತು. ಪರೀಕ್ಷೆ ಮುಗಿದ ಬಳಿಕ ಟ್ರಾಫಿಕ್‌ ಜಾಮ್ ಉಂಟಾಗಿ ಕೆಲಕಾಲ ಸಮಸ್ಯೆಯಾಯಿತು.

ಕುಡಿಯಲು ನೀರಿನ ವ್ಯವಸ್ಥೆ:

ಪರೀಕ್ಷಾ ಕೇಂದ್ರದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ, ವಿದ್ಯಾರ್ಥಿಗಳಿಗೆ ನೆರವಾಗುವಂತೆ ನಗರದ ಪ್ರಮುಖ ವೃತ್ತಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹೋಗುವ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT