ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಇಲ್ಲ: ಗಡಿ ಸೀಲ್‌ಡೌನ್‌

ಬುಧವಾರ ರಾತ್ರಿ 8ರಿಂದಲೇ ಜಾರಿ: ಸಾರ್ವಜನಿಕ ಸಾರಿಗೆಯೂ ಇಲ್ಲ: ಜಿಲ್ಲಾಧಿಕಾರಿ ಜಿ.ಜಗದೀಶ್‌
Last Updated 14 ಜುಲೈ 2020, 16:58 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ತಡೆಗೆ ಲಾಕ್‌ಡೌನ್ ಬದಲಾಗಿ ಸೀಲ್‌ಡೌನ್‌ ಮಾಡಲು ನಿರ್ಧರಿಸಲಾಗಿದ್ದು, ಜುಲೈ 15 ರಿಂದ 29ರವರೆಗೆ 14 ದಿನ ಜಿಲ್ಲಾ ಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಮಂಗಳವಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸೋಮವಾರ ಜಿಲ್ಲಾ ವೈದ್ಯಕೀಯ ತಜ್ಞರ ಸಮಿತಿಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದ್ದು, ಲಾಕ್‌ಡೌನ್ ಬದಲಾಗಿ ಸೀಲ್‌ಡೌನ್‌ ಮಾಡಿದರೆ ಉತ್ತಮ ಎಂದು ಬಹುತೇಕರು ಅಭಿಪ್ರಾಯ ಮಂಡಿಸಿದರು. ಮಂಗಳವಾರ ಶಾಸಕರ ಜತೆ ಚರ್ಚಿಸಿ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು.

ಸೀಲ್‌ ಡೌನ್ ಅವಧಿಯಲ್ಲಿ ಅಂತರ ರಾಜ್ಯ, ಅಂತರ ಜಿಲ್ಲಾ ಸರಕು ಸಾಗಾಣಿಕೆಗೆ ನಿರ್ಬಂಧಗಳಿಲ್ಲ. ಆದರೆ, ಜಿಲ್ಲೆಯಿಂದ ಸಾರ್ವಜನಿಕರು ಹೊರ ಜಿಲ್ಲೆಗಳಿಗೆ ಹೋಗುವಂತಿಲ್ಲ, ಹೊರಗಿನವರು ಒಳ ಬರುವಂತಿಲ್ಲ. (ವೈದ್ಯಕೀಯ ತುರ್ತು ಹೊರತುಪಡಿಸಿ) ಹೋಗುವವರು ಬರುವವರಿಗೆ ಬುಧವಾರ ರಾತ್ರಿ 8ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದರು.

ಬಸ್‌ಗಳಲ್ಲಿ ಅಂತರ ಕಾಯ್ದುಕೊಳ್ಳದೆ ಸೋಂಕು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿಸಲಾಗಿದೆ. ಜತೆಗೆ, ಸಂತೆಗಳು ಇರುವುದಿಲ್ಲ. ರಾಜಕೀಯ ಧಾರ್ಮಿಕ, ಸಾಮಾಜಿಕ ಸಭೆ ಸಮಾರಂಭಗಳು, ಹಬ್ಬ ಆಚರಣೆಗಳು ಇರುವುದಿಲ್ಲ.

ಪೂರ್ವ ನಿರ್ಧರಿತ ಮದುವೆಗಳಿಗೆ 50 ಜನ, ಅಂತ್ಯ ಸಂಸ್ಕಾರಕ್ಕೆ 20 ಜನ ಮಾತ್ರ ಭಾಗವಹಿಸಬಹುದು. ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ವಿಶೇಷ ಪೂಜೆ ಇರುವುದಿಲ್ಲ. ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರೆ ಅಭ್ಯಂತರವಿಲ್ಲ ಎಂದರು.

ತುರ್ತು ಸಂದರ್ಭಗಳಲ್ಲಿ ಜಿಲ್ಲೆಯಿಂದ ಹೊರ ಹೋಗಲು ಮತ್ತು ನಿತ್ಯದ ಕೆಲಸಗಳಿಗೆ ಜಿಲ್ಲೆಗೆ ಬರುವವರು ಪಾಸ್ ಪಡೆದುಕೊಳ್ಳಬೇಕು.ಭಾನುವಾರ ಎಂದಿನಂತೆ ಸಂಪೂರ್ಣ ಲಾಕ್‌ಡೌನ್ ಇರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೀಲ್ ಡೌನ್ ಏಕೆ:

ಹೊರ ಜಿಲ್ಲೆಗಳ ಪ್ರಯಾಣ ಹಿನ್ನೆಲೆ ಇರುವ ಶೇ 8.86 ಮಂದಿಯಲ್ಲಿ ಹಾಗೂ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಶೇ 14.2 ಜನರಲ್ಲಿ ಸೋಂಕು ಇರುವುದು ಕಂಡುಬಂದಿದೆ. ಹೊರಗಿನಿಂದ ಬಂದವರಿಂದಲೇ ಹೆಚ್ಚು ಸೋಂಕು ಹರಡುತ್ತಿರುವುದಿರಂದ ಸೀಲ್‌ಡೌನ್ ಅನಿವಾರ್ಯವಾಯಿತು ಎಂದು ಡಿಸಿ ಸಮಜಾಯಿಷಿ ನೀಡಿದರು.

ಜಿಲ್ಲೆಯಲ್ಲಿ 5,166 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದ್ದು, ರಾಜ್ಯದ ಸರಾಸರಿಗಿಂತ ಹೆಚ್ಚಿದೆ. ಉಡುಪಿಯಲ್ಲಿ ಕೋವಿಡ್ ಪ್ರಕರಣಗಳು 39 ದಿನಗಳಲ್ಲಿ ದುಪ್ಪಟ್ಟಾಗುತ್ತಿದ್ದರೆ, ನೆರೆಯ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯದಲ್ಲಿ 10 ದಿನಗಳಲ್ಲಿ ದ್ವಿಗುಣವಾಗುತ್ತಿವೆ. ಸಾವಿನ ಪ್ರಮಾಣ ಕೂಡ ರಾಜ್ಯದಲ್ಲಿ ಶೇ 1.80, ದಕ್ಷಿಣ ಕನ್ನಡದಲ್ಲಿ 1.70 ಇದ್ದರೆ, ಜಿಲ್ಲೆಯಲ್ಲಿ ಕೇವಲ ಶೇ 0.20 ಇದೆ.

ಜತೆಗೆ, ಜಿಲ್ಲೆಯಲ್ಲಿ 390 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ ಮಂಗಳವಾರ 80 ಮಂದಿ ಬಿಡುಗಡೆಯಾಗಿದ್ದಾರೆ. ಹಾಗಾಗಿ, ಪರಿಸ್ಥಿತಿ ಕೈಮೀರಿಲ್ಲವಾದ್ದರಿಂದ ಲಾಕ್‌ಡೌನ್‌ ಮಾಡದೆ, ಸೀಲ್‌ಡೌನ್‌ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅಂಕಿ ಅಂಶಗಳ ಸಮೇತ ಜಿಲ್ಲಾಧಿಕಾರಿ ವಿವರ ನೀಡಿದರು.

ಬೆಡ್‌ಗಳ ಸಮಸ್ಯೆ ಇಲ್ಲ:

ಜಿಲ್ಲೆಯಲ್ಲಿ 1,100 ಬೆಡ್‌ಗಳು ಸೋಂಕಿತರ ಚಿಕಿತ್ಸೆಗೆ ಲಭ್ಯವಿದ್ದು, ಕೋವಿಡ್ ಕೇರ್ ಕೇಂದ್ರಗಳಿಗೆ 1,800 ಬೆಡ್ ಗುರುತಿಸಲಾಗಿದೆ. 21 ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಬೆಡ್‌ಗಳನ್ನು ಚಿಕಿತ್ಸೆಗೆ ಮೀಸಲಿಡಲಾಗಿದೆ. ಸದ್ಯ ಕೇವಲ 400ರ ಆಸುಪಾಸಿನಲ್ಲಿ ಬೆಡ್‌ಗಳು ಮಾತ್ರ ಬಳಕೆಯಾಗಿವೆ. ಹಾಗಾಗಿ ಹಾಸಿಗೆಗಳ ಸಮಸ್ಯೆ ಇಲ್ಲ ಎಂದರು.

ಹೋಂ ಐಸೊಲೇಷನ್‌:

10 ವರ್ಷದಿಂದ 50 ವರ್ಷದೊಳಗಿನ 20 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಮನೆಯಲ್ಲಿ ಸೋಂಕಿತರು ಇರಲು ಪ್ರತ್ಯೇಕ ಕೊಠಡಿ, ಅಗತ್ಯ ವ್ಯವಸ್ಥೆ ಇದ್ದರೆ ಮಾತ್ರ ಅಧಿಕಾರಿಗಳು ಪರಿಶೀಲಿಸಿ ಹೋಂ ಐಸೋಲೇಷನ್‌ಗೆ ಅನುಮತಿ ನೀಡಲಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT