ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅಭಿಯಾನದ ಮೊದಲ ದಿನವೇ 4 ಸಾವಿರ ಪಾದರಕ್ಷೆ ಸಂಗ್ರಹ

ನಡಿಗೆ ಅಭಿಯಾನಕ್ಕೆ ಉತ್ತಮ ಸ್ಪಂದನ
Published 30 ನವೆಂಬರ್ 2023, 15:57 IST
Last Updated 30 ನವೆಂಬರ್ 2023, 15:57 IST
ಅಕ್ಷರ ಗಾತ್ರ

ಉಡುಪಿ: ಬಡ ಮಕ್ಕಳಿಗೆ ಉಚಿತವಾಗಿ ಪಾದರಕ್ಷೆಗಳನ್ನು ಹಂಚುವ ಸಲುವಾಗಿ ಸಾರ್ವಜನಿಕರಿಂದ ಪಾದರಕ್ಷೆಗಳನ್ನು ಸಂಗ್ರಹಿಸುವ ನಡಿಗೆ ಅಭಿಯಾನಕ್ಕೆ ಮೊದಲ ದಿನವೇ ನಿರೀಕ್ಷೆಗೂ ಮೀರಿ ಸ್ಪಂದನ ವ್ಯಕ್ತವಾಗಿದೆ.

ನಗರದ ಎಂಜಿಎಂ ಕಾಲೇಜು ಆವರಣದಲ್ಲಿ ಆರಂಭವಾಗಿರುವ ಅಭಿಯಾನಕ್ಕೆ 4000ಕ್ಕೂ ಹೆಚ್ಚು ಪಾದರಕ್ಷೆಗಳು ಸಾರ್ವಜನಿಕರಿಂದ ದಾನವಾಗಿ ಬಂದಿವೆ. ಕುಂದಾಪುರ ತಾಲ್ಲೂಕಿನ ‘ಫ್ರೆಂಡ್ಸ್‌ ವಡ್ಡರ್ಸೆ’ ಸಂಘಟನೆಯೊಂದೇ ಸುಮಾರು 2600ಕ್ಕೂ ಹೆಚ್ಚು ಚಪ್ಪಲಿಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ನೀಡಿದೆ.

ವಿಶಿಷ್ಟ ಪೂರ್ಣವಾದ ನಡಿಗೆ ಅಭಿಯಾನಕ್ಕೆ ಗುರುವಾರ ಪರಿಸರವಾದಿ ದಿನೇಶ್ ಹೊಳ್ಳ ಚಾಲನೆ ನೀಡಿದರು. ಬಳಿಕ ಮಾತನಾಡಿ ಬಡ ಮಕ್ಕಳ ಕಾಲಿಗೆ ಪಾದರಕ್ಷೆ ನೀಡುವ ಈ ಅಭಿಯಾನ ಮಾದರಿಯಾಗಿದ್ದು ಕಾಡು ಮೇಡು ಅಲೆಯುವ ಆದಿವಾಸಿ ಸಮುದಾಯದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ.

ಚಪ್ಪಲಿಯನ್ನು ಪರಿಸರಕ್ಕೆ ಎಸೆಯದೆ ಮರು ಬಳಕೆಗೆ ನೀಡುವುದರಿಂದ ಪ್ರಕೃತಿ ರಕ್ಷಣೆಗೂ ಕೊಡುಗೆ ಕೊಟ್ಟಂತಾಗಲಿದೆ. ಅಭಿಯಾನ ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸಿದರು.‌

ನಡಿಗೆ ಅಭಿಯಾನದ ರೂವಾರಿ ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು. ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವಥ್ ಎಸ್.ಎಲ್, ಗಿರಿಜಾ ಗ್ರೂಪ್‌ನ ಪ್ರವರ್ತಕ ರವೀಂದ್ರ ಶೆಟ್ಟಿ, ಹೋಪ್ ಇಂಡಿಯಾ ಫೌಂಡೇಶನ್‌ ಸ್ಥಾಪಕ ಅನ್ಸಾರ್ ಅಹಮದ್, ಮಣಿಪಾಲ ಮಹಿಳಾ ಸಮಾಜ ಅಧ್ಯಕ್ಷೆ ಡಾ.ಸುಲತಾ ಭಂಡಾರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿ ನಾರಾಯಣ ಕಾರಂತ, ವಿಷನ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥಾಪಕ ಅಡಾಲ್ಫ್ ಶೆರ್ವಿನ್ ಅಮ್ಮನ್ನ ಇದ್ದರು.

ಅಭಿಗೈಲ್ ಎಸ್.ಅಂಚನ್ ವಂದಿಸಿದರು. ಉಪನ್ಯಾಸ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಡಿ.3ರಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು ಗ್ರೀನ್ ಸೋಲ್ ಫೌಂಡೇಷನ್ ಸಂಸ್ಥಾಪಕರಾದ ನಡಿಗೆ ಅಭಿಯಾನದ ರೂವಾರಿಗಳಾದ ರಮೇಶ್ ದಾಮಿ ಹಾಗೂ ಶ್ರೇಯಾಂಶ್ ಭಂಡಾರಿ ಭಾಗವಹಿಸಲಿದ್ದಾರೆ. ಡಿ.4ರಂದು ಸಂಜೆ 4.30ಕ್ಕೆ ಜಗನ್ನಾಥ ಸಭಾಭವನದಲ್ಲಿ ಶ್ರೇಯಾಂಶ್‌ ಭಂಡಾರಿ ಹಾಗೂ ರಮೇಶ್ ಧಾಮಿ ಜತೆ ಪ್ರೇರಣಾ ಮಾತುಕತೆ ಕಾರ್ಯಕ್ರಮ ನಡೆಯಲಿದೆ.

ಮೊದಲ ದಿನ 4 ಸಾವಿರ ಚಪ್ಪಲಿ ಸಂಗ್ರಹ ಸಾರ್ವಜನಿಕರಿಂದ ಪಾದರಕ್ಷೆಗಳ ದಾನ ‘ಸುಸ್ಥಿತಿಯಲ್ಲಿರುವ ಚಪ್ಪಲಿಗಳ ದಾನಕ್ಕೆ ಯೋಗ್ಯ’

ಮೂರು ದಿನಗಳ ಅಭಿಯಾನ ನ.30ರಿಂದ ಡಿ.2ರವರೆಗೆ ಉಡುಪಿಯ ಎಂಜಿಎಂ ಕಾಲೇಜು ಆವರಣದಲ್ಲಿ ‘ನಡಿಗೆ’ ಬೃಹತ್ ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನ ನಡೆಯುತ್ತಿದ್ದು ಸಾರ್ವಜನಿಕರು ಬಳಸದ ಸುಸ್ಥಿತಿಯಲ್ಲಿರುವ ಚಪ್ಪಲಿಗಳನ್ನು ಅಭಿಯಾನಕ್ಕೆ ನೀಡಬಹುದು. ಇಲ್ಲಿ ಸಂಗ್ರಹವಾದ ಪಾದರಕ್ಷೆಗಳನ್ನು ಕಚ್ಛಾವಸ್ತುಗಳ ರೂಪದಲ್ಲಿ ಗ್ರೀನ್‌ಸೋಲ್ ಫೌಂಡೇಷನ್‌ಗೆ ಹಸ್ತಾಂತರ ಮಾಡಲಾಗುವುದು. ಅಲ್ಲಿ ಹೊಸ ಪಾದರಕ್ಷೆಗಳ ತಯಾರಿಸಿ ಬಡ ಮಕ್ಕಳಿಗೆ ಸಂಸ್ಥೆ ಹಂಚಲಿದೆ. ಡಿ.3ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿಯ 75 ಮಕ್ಕಳಿಗೆ ಹೊಸ ಚಪ್ಪಲಿ ಹಾಗೂ ಹಳೆಯ ಬಟ್ಟೆಗಳಿಂದ ತಯಾರಿಸಲಾದ ಬ್ಯಾಗ್ ಮ್ಯಾಟ್‌ ವಿತರಿಸಲಾಗುವುದು.

‘ಯಾವುದು ಬೇಕು ಯಾವುದು ಬೇಡ’ ಫಾರ್ಮಲ್ ಶೂ ಸ್ಪೋರ್ಟ್ಸ್‌ ಶೂ ಫೋಮ್ ಶೂ ರಬ್ಬರ್ ಶೂ ಸೇರಿದಂತೆ ಉತ್ತಮ ಸೋಲ್ ಇರುವ ಚಪ್ಪಲಿಗಳನ್ನು ನೀಡಬಹುದು. ಹೈಹೀಲ್ಡ್‌ ಪಾಯಿಂಟೆಡ್‌ ಚಪ್ಪಲಿ ಹಾಗೂ 10 ವರ್ಷದೊಳಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸುವುದಿಲ್ಲ. ಉಡುಪಿ ಹಾಗೂ ಕುಂದಾಪುರದಲ್ಲಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT