ಪಂಚಾಯಿತಿ ವಿರುದ್ಧ ಮೀನುಗಾರರ ಆಕ್ರೋಶ

7
ಮರವಂತೆ ಗ್ರಾಮ ಪಂಚಾಯಿತಿ ಗ್ರಾಮಸಭೆ

ಪಂಚಾಯಿತಿ ವಿರುದ್ಧ ಮೀನುಗಾರರ ಆಕ್ರೋಶ

Published:
Updated:
Deccan Herald

ಬೈಂದೂರು: ಕಡಲ್ಕೊರೆತದಿಂದ ಮನೆಗೆ ಹಾನಿಯಾಗಿ ಸದ್ಯ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಆರು ಮೀನುಗಾರರಿಗೆ ನಿವೇಶನ ಮತ್ತು ಮನೆ ಒದಗಿಸಬೇಕು. ಕಡಿದುಹೋದ ಕರಾವಳಿ ರಸ್ತೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ ಮರವಂತೆ ಮೀನುಗಾರರು ಗ್ರಾಮ ಪಂಚಾಯಿತಿಯ ಕೆಲವು ಕ್ರಮಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸನ್ನಿವೇಶ ಸೋಮವಾರ ನಡೆದ ಮರವಂತೆ ಗ್ರಾಮಸಭೆಯಲ್ಲಿ ಕಂಡುಬಂತು.

ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ನಿರ್ದೇಶನದಂತೆ ನಿವೇಶನಕ್ಕೆ ಸ್ಥಳ ಲಭ್ಯತೆಯ ಬಗ್ಗೆ ಜಮೀನು ಅಳತೆ ಮಾಡಲು ಬಂದಿದ್ದ ಸರ್ವೇ ಅಧಿಕಾರಿಗೆ ತಡೆಯೊಡ್ಡಿ ಹಿಂದಕ್ಕೆ ಕಳುಹಿಸಿದ ಗ್ರಾಮ ಪಂಚಾಯಿತಿಯ ನಡೆ ಮತ್ತು ಜಮೀನು ಸರ್ವೇ ಸಂಬಂಧದ ವಾದವಿವಾದ ಸಭೆಯ ಬಹುಭಾಗವನ್ನು ಕಬಳಿಸಿತು.

ಅವರನ್ನು ಸಮಾಧಾನಪಡಿಸಲು ಯತ್ನಿಸಿದ ಅಧ್ಯಕ್ಷೆ ಅನಿತಾ ಆರ್.ಕೆ., ಅಭಿವೃದ್ಧಿ ಅಧಿಕಾರಿ ವೀರಶೇಖರ ಮತ್ತು ಕಾರ್ಯದರ್ಶಿ ದಿನೇಶ ಶೇರೆಗಾರ್ ಸಂಬಂಧಿಸಿದ ಜಮೀನನ್ನು ಜಿಲ್ಲಾಧಿಕಾರಿಗಳು ಕೆಲವು ಷರತ್ತು ವಿಧಿಸಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ನಿರ್ವಹಣಾ ಘಟಕ ಉದ್ದೇಶಕ್ಕೆ ನೀಡಿದ್ದಾರೆ. ಆ ಸ್ಥಳದ ಉಳಿಕೆ ಭಾಗವನ್ನು ರಸ್ತೆಗೆ ಮೀಸಲಿಡಲಾಗಿದೆ. ಅಲ್ಲಿ ಮನೆ ನಿವೇಶನ ನೀಡಲು ಸ್ಥಳವಿಲ್ಲ. ಗ್ರಾಮ ಪಂಚಾಯಿತಿಗೆ ಸೂಕ್ತ ತಿಳಿವಳಿಕೆ ನೀಡದೆ ಅಳತೆಗೆ ಮುಂದಾದ ಕಾರಣ ಅದಕ್ಕೆ ಆಕ್ಷೇಪ ವ್ಯಕ್ತ ಪಡಿಸಲಾಗಿತ್ತು ಎಂದರು.

ಅವರ ವಿವರಣೆ ವಿಷಯ ಪ್ರಸ್ತಾಪಿಸಿ ವಾದಿಸಿದ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಮೋಹನ ಖಾರ್ವಿ, ಮಾಜಿ ಅಧ್ಯಕ್ಷ ಸೋಮಯ್ಯ ಖಾರ್ವಿ ಮತ್ತಿತರರನ್ನು ತೃಪ್ತಿಪಡಿಸಲಿಲ್ಲ. ಸೂಕ್ತ ಸಮಯದೊಳಗೆ ಸಂತ್ರಸ್ಥರಿಗೆ ಮನೆ ಒದಗಿಸದಿದ್ದಲ್ಲಿ ಅವರ ಮನೆ ಬಾಡಿಗೆಯನ್ನು ಪಂಚಾಯಿತಿಯೇ ಭರಿಸಬೇಕೆಂಬ ಒತ್ತಾಯವೂ ಕೇಳಿಬಂತು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಹಳೆಯ ವಾಣಿಜ್ಯ ಕಟ್ಟಡದ ಸ್ಥಾನದಲ್ಲಿ ಕಟ್ಟಲಾದ ಹೊಸ ಕಟ್ಟಡಕ್ಕೆ ಬಾರ್ ಸ್ಥಳಾಂತರಿಸಲು ನಿರಾಕ್ಷೇಪಣಾ ಪತ್ರ ನೀಡಿದುದನ್ನೂ ಮೀನುಗಾರ ಮುಖಂಡರು ಆಕ್ಷೇಪಿಸಿದರು. ಅದನ್ನು ಮಾನವೀಯ ನೆಲೆಯಲ್ಲಿ ಮಾಡಲಾಗಿದೆ ಎಂಬ ಉತ್ತರ ಪಂಚಾಯಿತಿಯಿಂದ ಬಂದಾಗ ಮೀನುಗಾರರು ಆ ಪ್ರದೇಶದಲ್ಲಿ ನಿರ್ಮಿಸುವ ಕಟ್ಟಡಗಳಿಗೂ ಅದೇ ಮಾನದಂಡ ಅನ್ವಯಿಸಬೇಕು ಎಂಬ ಅವರ ಒತ್ತಾಯಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

ವಿಜಯ ಕ್ರಾಸ್ತಾ ಗುಂಡಿಗಳು ಬಿದ್ದು ಸಂಚಾರಕ್ಕೆ ತೊಡಕಾಗಿರುವ ಹೊಳೆಬಾಗಿಲು ನಾಗಪ್ಪಯ್ಯ ಮಾರ್ಗದ ದುರಸ್ತಿಗೆ, ನದಿತೀರಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗವನ್ನು ಗದ್ದೆಗಳ ನಡುವಿನಿಂದ ರಸ್ತೆಗೆ ವರ್ಗಾವಣೆಗೆ ಒತ್ತಾಯಿಸಿದರು. ರೇಖಾ ದೇವಾಡಿಗ ಕರಾವಳಿ ಅಂಗನವಾಡಿ ಕಟ್ಟಡ ಆ ಉದ್ದೇಶಕ್ಕೆ ಬಳಸಲಾಗದ ಸ್ಥಿತಿಯಲ್ಲಿರುವುದರಿಂದ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಕೆಲವೇ ತಿಂಗಳ ಹಿಂದೆ ಮರು ಡಾಂಬರೀಕರಣಗೊಂಡ ಮಹಾತ್ಮ ಗಾಂಧಿ ಮಾರ್ಗ ನಶಿಸುತ್ತಿದೆ. ಹರಿಶ್ಚಂದ್ರ ಮಾರ್ಗಕ್ಕೆ ಫಿಲಿಫ್ಸ್ ಇಂಡಿಯ ನೆರವಿನೊಂದಿಗೆ ಅಳವಡಿಸಿದ ಹೊಸ ತಂತ್ರಜ್ಞಾನದ ಕೇಂದ್ರೀಕೃತ ಸೋಲಾರ್ ಬೀದಿದೀಪ ವ್ಯವಸ್ಥೆಯನ್ನು ಪಂಚಾಯಿತಿ ನಿರ್ಲಕ್ಷಿಸುತ್ತಿದೆ ಎಂಬ ಟೀಕೆಯೂ ಕೇಳಿಬಂತು.

ಅನಿತಾ ಆರ್.ಕೆ. ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಶಂಕರ ಶೆಟ್ಟಿ ಸಭೆಯನ್ನು ಸೌಹಾರ್ದದಿಂದ ನಡೆಸಿದ ಬಗ್ಗೆ ಎಲ್ಲರನ್ನೂ ಅಭಿನಂದಿಸಿದರು. ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿದರು. ಹಿಂದಿನ ಗ್ರಾಮಸಭೆಯ ನಡಾವಳಿಗಳನ್ನು ಕಾರ್ಯದರ್ಶಿ ಓದಿದರು. ಕರಸಂಗ್ರಾಹಕ ಶೇಖರ್ ವಾರ್ಡ್‌ ಸಭೆಗಳ ವರದಿ, ಕಳೆದ ವರ್ಷ ಕೈಗೊಂಡ ಕಾಮಗಾರಿ, ಖರ್ಚುವೆಚ್ಚಗಳ ವಿವರ ನೀಡಿದರು. ಮೆಸ್ಕಾಂ ಶಾಖಾಧಿಕಾರಿ ವಿಜೇಂದ್ರ, ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ, ಪಶು ವೈದ್ಯ ಡಾ. ಅರುಣ್, ಸಹಾಯಕ ಕೃಷಿ ಅಧಿಕಾರಿ ಪರಶುರಾಮ, ಉಪ ವಲಯ ಅರಣ್ಯಾಧಿಕಾರಿ ಸದಾಶಿವ, ಗ್ರಾಮ ಲೆಕ್ಕಿಗ ಮಹಾಂತೇಶ ಕೋಣೆನವರ್, ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ ಇಲಾಖಾ ಮಾಹಿತಿ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !