ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರಕ್ಕೆ ಸಹಕಾರ, ಸಹಭಾಗಿತ್ವ ನೀಡಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಪರಿಶಿಷ್ಟರ ಕಾಲೋನಿಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ
Last Updated 20 ಡಿಸೆಂಬರ್ 2020, 13:18 IST
ಅಕ್ಷರ ಗಾತ್ರ

ಉಡುಪಿ: ಪರಿಶಿಷ್ಟ ವರ್ಗದವರು ಹೆಚ್ಚಾಗಿರುವ ಕೊಡವೂರು ಗ್ರಾಮದ ಪಾಳೆಕಟ್ಟೆಗೆ ಭಾನುವಾರ ಭೇಟಿನೀಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಗ್ರಾಮಸ್ಥರ ಮನೆಗಳಲ್ಲಿ ರಾಮದೀಪಗಳನ್ನು ಹಚ್ಚಿ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ಕೋರಿದರು.

ಈ ಸಂದರ್ಭ ಮಾತನಾಡಿದ ಶ್ರೀಗಳು, ‘ರಾಮಮಂದಿರ ನಿರ್ಮಾಣಕ್ಕೆ ಸಮಸ್ತ ಹಿಂದೂ ಸಮಾಜ ಸಹಕಾರ ಹಾಗೂ ಸಹಭಾಗಿತ್ವ ನೀಡಬೇಕು ಎಂಬ ಅಪೇಕ್ಷೆಯಿಂದ ನಾಡಿನಾದ್ಯಂತ ಸಂಚರಿಸುತ್ತಿದ್ದು, ಸಮಾಜದ ಎಲ್ಲ ವರ್ಗದವರನ್ನು ಭೇಟಿ ಮಾಡಲಾಗುತ್ತಿದೆ. ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲು ಪ್ರತಿ ಮನೆಯಲ್ಲಿ ರಾಮದೀಪಗಳು ಪ್ರಜ್ವಲಿಸಬೇಕು. ರಾಮಮಂತ್ರ ಜಪಿಸಬೇಕು’ ಎಂದು ಶ್ರೀಗಳು ಸಲಹೆ ನೀಡಿದರು.

ರಾಮಜನ್ಮಭೂಮಿಯನ್ನು ಸುಪ್ರೀಂಕೋರ್ಟ್‌ ಮತ್ತೆ ಹಿಂದೂ ಸಮಾಜಕ್ಕೆ ಒಪ್ಪಿಸಿದ್ದು, ಮಂದಿರ ನಿರ್ಮಾಣಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಾಮಮಂದಿರ ಹಿಂದೂ ಧರ್ಮದ ಪುನರುತ್ಥಾನದ ಸಂಕೇತವಾಗಲಿದೆ. ಈ ಹೊತ್ತಿನಲ್ಲಿ ಹಿಂದೂ ಸಮಾಜ ಮತ್ತಷ್ಟು ಸಂಘಟನಾತ್ಮಕ, ಸಶಕ್ತ ಹಾಗೂ ಸದೃಢವಾಗಬೇಕು ಎಂದು ಆಶಿಸಿದರು.

ಶ್ರೀಗಳ ಸ್ವಾಗತಕ್ಕೆ ದಲಿತ ಕಾಲೋನಿಯನ್ನು ರಂಗೋಲಿಯಿಂದ ಸಿಂಗರಿಸಲಾಗಿತ್ತು. ಸಾಮೂಹಿಕ ಭಜನೆಯೊಂದಿಗೆ ಸ್ವಾಗತ ಕೋರಲಾಯಿತು. ಮೂರು ಮನೆಗಳಿಗೆ ಭೇಟಿ ನೀಡಿ ಸಾಂಕೇತಿಕವಾಗಿ ರಾಮದೀಪಗಳನ್ನು ಬೆಳಗಿಸಿದ ಶ್ರೀಗಳು, ಕುಟುಂಬ ಸದಸ್ಯರೊಂದಿಗೆ ಕುಶಲೋಪರಿ ನಡೆಸಿದರು. ಪೇಜಾವರ ಮಠದಿಂದ ಬಡಾವಣೆಯ ಎಲ್ಲ ಮನೆಗಳಲ್ಲಿ ರಾಮದೀಪ ಬೆಳಗಿಸಲಾಯಿತು.

ಬಳಿಕ, ಶ್ರೀಮೂಕಾಂಬಿಕಾ ಭಜನಾ ಮಂದಿರಕ್ಕೆ ಭೇಟಿನೀಡಿದ ಶ್ರೀಗಳು ದೇವರ ಮುಂಭಾಗ ದೀಪಹಚ್ಚಿ ಮಂಗಳಾರತಿ ಬೆಳಗಿದರು. ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಮಠದ ಅಧೀನದಲ್ಲಿರುವ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದವನ್ನು ಗ್ರಾಮಸ್ಥರಿಗೆ ಹಂಚಲಾಯಿತು.

ಮುಖಂಡ ವಿಜಯ್‌ ಕೊಡವೂರು ಮಾತನಾಡಿ, ವಿಶ್ವೇಶ ತೀರ್ಥ ಶ್ರೀಗಳು ವಿಧಿವಶರಾಗಿ ವರ್ಷ ತುಂಬುವುದರೊಳಗೆ ಶ್ರೀಮಠದ ಎಲ್ಲ ಜವಾಬ್ದಾರಿಗಳಿಗೆ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೆಗಲು ಕೊಟ್ಟಿದ್ದು, ಹಿರಿಯ ಗುರುಗಳ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುವ ಸಂಕಲ್ಪ ಮಾಡಿರುವುದು ಶ್ಲಾಘನೀಯ ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ವಾಸುದೇವ ಭಟ್‌ ಪೆರಂಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT