ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಗಳು ಶೀಘ್ರ ಗುಂಡಿ ಮುಕ್ತ, ಜನಸ್ನೇಹಿ ಆಡಳಿತ: ಕೂರ್ಮಾರಾವ್‌

ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳ ಸುರಿ ‘ಮಳೆ’
Last Updated 5 ಆಗಸ್ಟ್ 2022, 14:49 IST
ಅಕ್ಷರ ಗಾತ್ರ

ಉಡು‍ಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡಗಳನ್ನು ಮುಚ್ಚಿಸಿ, ಸರ್ವೀಸ್‌ ರಸ್ತೆ ನಿರ್ಮಿಸಿ, ಶೀಘ್ರ ಬೆಳೆ ಹಾನಿ‌ ಪರಿಹಾರ ವಿತರಿಸಿ, ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಬಗೆಹರಿಸಿ, ಆಗುಂಬೆ ಘಾಟಿ ಸುರಕ್ಷತೆಗೆ ಕ್ರಮ ಕೈಗೊಳ್ಳಿ, ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸಿ, ಪಹಣಿ ದೋಷ ಸರಿಪಡಿಸಿ, ಸಿಂಗಲ್‌ ಲೇ ಔಟ್‌ ಸಮಸ್ಯೆ ಬಗೆಹರಿಸಿ, ಸರ್ಕಾರಿ ಕಾಲೇಜಿನಲ್ಲಿ ಸೀಟು ಬೇಕು, ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಿ...

ಶುಕ್ರವಾರ ಉಡುಪಿಯ ತಾಲ್ಲೂಕು ಆಡಳಿತದ ಕಚೇರಿಯಲ್ಲಿ ‘ಪ್ರಜಾವಾಣಿ’ಯ ಫೋನ್‌ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರ ಬಳಿ ದೂರಿನ ಸುರಿಮಳೆ ಸುರಿಸಿದರು. ನಾಗರಿಕರ ದೂರು ದುಮ್ಮಾನಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಉಡುಪಿ ತಹಶೀಲ್ದಾರ್‌ ಪ್ರದೀಪ್ ಕುರ್ಡೆಕರ್‌, ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ ಸಾರ್ವಜನಿಕರ ದೂರುಗಳನ್ನು ಲಿಖಿತವಾಗಿ ದಾಖಲು ಮಾಡಿಕೊಂಡರು.

ಶೀಘ್ರ ನೆರೆ ಪರಿಹಾರ ವಿತರಣೆ:ಜಿಲ್ಲೆಯಲ್ಲಿ ಈಚೆಗೆ ಸುರಿದ ಭಾರಿ ಮಳೆಗೆ ಹೆಚ್ಚು ಹಾನಿ ಸಂಭವಿಸಿದೆ. ಬೆಳೆ ಹಾಗೂ ಮನೆ ಹಾನಿಯ ಪರಿಶೀಲನೆ ಬಹುತೇಕ ಮುಕ್ತಾಯವಾಗಿದ್ದು ಸರ್ಕಾರಕ್ಕೆ ವರದಿ ಹೋಗಿದ್ದು, ಶೀಘ್ರ ಫಲಾನುಭವಿಗಳ ಖಾತೆಗೆ ಪರಿಹಾರ ಧನ ಜಮೆಯಾಗಲಿದೆ. ಮನೆ ಕಳೆದುಕೊಂಡವರಿಗೆ ಪ್ರಾಥಮಿಕ ಹಂತದಲ್ಲಿ ಪರಿಹಾರ ವಿತರಿಸಲಾಗಿದೆ. ಹಂತ ಹಂತವಾಗಿ ಪರಿಹಾರ ಬಿಡುಗಡೆಯಾಗಲಿದೆ ಎಂದರು.

ಹೆದ್ದಾರಿ ಗುಂಡಿ ಮುಚ್ಚಿಸಲು ಕ್ರಮ:ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದು ಕಾಲಮಿತಿಯಲ್ಲಿ ಮುಚ್ಚಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಎ ವ್ಯಾಪ್ತಿಯಲ್ಲಿ ಬ್ಲಾಕ್‌ಸ್ಪಾಟ್‌ಗಳ ಪಟ್ಟಿ ಪಡೆಯಲಾಗಿದ್ದು ತುರ್ತು ಕ್ರಮಕ್ಕೆ ಹೆದ್ದಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲನೆ ಮಾಡುವಂತೆ ಕುಂದಾಪುರ ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಲಾಗಿದೆ. ಶೀಘ್ರ ಹೆದ್ದಾರಿಗಳು ಹೊಂಡ ಮುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ:ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ಹತ್ತಿರದ ಗ್ರಾಮ ಒನ್ ಸೆಂಟರ್‌, ಅಟಲ್‌ ಜೀ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಗದಿತ ಅವಧಿಯೊಳಗೆ ಕಿರಿಕಿರಿ ಇಲ್ಲದೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸರ್ಕಾರದ ಕಚೇರಿಗಳಿಗೆ ಸುತ್ತಿದರೆ ಸಮಯ ಹಾಗೂ ಹಣ ವ್ಯರ್ಥವಾಗಲಿದೆ. ಅಗತ್ಯವಿದ್ದರೆ ಮಾತ್ರ ಕಚೇರಿಗಳಿಗೆ ಬನ್ನಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಾರ್ವಜನಿಕರ ಅಹವಾಲುಗಳು ಐಪಿಜಿಆರ್‌ಎಸ್‌ ವ್ಯವಸ್ಥೆಯಡಿ ನೋಂದಣಿಯಾಗಲಿದ್ದು ವಿಲೇವಾರಿಯಾಗುವವರೆಗೂ ನಿಗಾ ಇರಿಸಲಾಗುವುದು. ಕೆಳ ಹಂತದ ಅಧಿಕಾರಿಗಳು ದೂರು ಇತ್ಯರ್ಥ ಮಾಡಲು ವಿಳಂಬ ಮಾಡಿದರೆ, ಮೇಲಧಿಕಾರಿಗಳಿಗೆ ಅರ್ಜಿ ರವಾನೆಯಾಗಿ ಕ್ರಮ ಕೈಗೊಳ್ಳಲಿದ್ದಾರೆ. ಜತೆಗೆ, ತುರ್ತು ಸೇವೆಗಳನ್ನು ಪಡೆಯಲು 1077ಗೆ ಕರೆ ಮಾಡಬಹುದು. 0820–2574802 ಹಾಗೂ ವಾಟ್ಸ್‌ ಆ್ಯಪ್‌ 98808 31516 ನಂಬರ್‌ಗೂ ದೂರು ಹಾಗೂ ಫೋಟೊಗಳನ್ನು ಕಳಿಸಬಹುದು ಎಂದು ಡಿಸಿ ತಿಳಿಸಿದರು.

ಪ್ರಶ್ನೆ: ಗಣೇಶ್ ಕಾಮತ್, ಸಂತೆಕಟ್ಟೆ–ಬ್ರಹ್ಮಾವರ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಕೊಡಬೇಡಿ

ಜಿಲ್ಲಾಧಿಕಾರಿ: ಲಿಖಿತವಾಗಿ ದೂರು ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಗಣಿಗಾರಿಕೆಗೆ ಪರವಾನಗಿ ನೀಡಲು ಹಲವು ನಿಯಮಗಳಿದ್ದು, ಉಲ್ಲಂಘನೆ ಮಾಡುವಂತಿಲ್ಲ.

ಪ್ರಶ್ನೆ: ಶ್ರೀಧರ ಶೆಟ್ಟಿ, ಚಾರ ಹೆಬ್ರಿ– ಹೆಬ್ರಿಯ ವರಂಗ, ಚಾರ ಸೇರಿದಂತೆ ಹಲವು ಕಡೆ ಮಳೆಗೆ ಅಡಿಕೆ ಬೆಳೆ ನಾಶವಾಗಿದೆ. ಯಾವಾಗ ಪರಿಹಾರ ಸಿಗಬಹುದು ?

ಜಿಲ್ಲಾಧಿಕಾರಿ– ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿದ್ದು ಶೀಘ್ರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಬರಲಿದೆ. ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಫ್‌ ನಿಗದಿ ಮಾಡಿರುವುದಕ್ಕಿಂತ ಹೆಚ್ಚುವರಿ ಪರಿಹಾರವನ್ನು ಸರ್ಕಾರ ನೀಡುತ್ತಿದೆ. ಡೀಮ್ಡ್‌ ಫಾರೆಸ್ಟ್ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ.

ಪ್ರಶ್ನೆ: ಹರಿಪ್ರಸಾದ್, ಬೆಳ್ಮಣ್ಣು–ಬೆಳ್ಮಣ್ಣುವಿನಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿ ತುಂಬ ಹಂಪ್ಸ್‌ಗಳಿದ್ದು ಸವಾರರಿಗೆ ಸಮಸ್ಯೆಯಾಗಿದೆ.

ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ ತೆರವುಗೊಳಿಸಲಾಗುತ್ತಿದೆ. ಕಾರ್ಕಳ ಪಡುಬಿದ್ರಿ ರಸ್ತೆಯ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು.

ಪ್ರಶ್ನೆ: ಮಲ್ಲಿ ಪೂಜಾರ್ತಿ, ಬೈಂದೂರು, ಬಿಜೂರು: 18 ಸೆಂಟ್ಸ್‌ನಲ್ಲಿ ಮನೆ ಕಟ್ಟಿಕೊಂಡಿದ್ದು, ಆರ್‌ಟಿಸಿಯಲ್ಲಿ ಏಳುವರೆ ಸೆಂಟ್ಸ್ ಕಡಿಮೆ ಮಾಡಲಾಗಿದೆ.

ಜಿಲ್ಲಾಧಿಕಾರಿ: ಕೆಲವು ಬಾರಿ ಆರ್‌ಟಿಸಿ ತಿದ್ದುಪಡಿಯಾಗಿರಬಹುದು. ಭಯ ಪಡುವ ಅಗತ್ಯವಿಲ್ಲ. ಈ ಬಗ್ಗೆ ಪರಿಶೀಲಿಸಿ ಸರಿಪಡಿಸಲಾಗುವುದು.

ಪ್ರಶ್ನೆ: ಗಿರೀಶ್‌, ಬೈಂದೂರು– ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಸರ್ಕಾರಿ ತೋಡು ಮುಚ್ಚಲಾಗಿದೆ.

ಲಿಖಿತವಾಗಿ ದೂರು ನೀಡಿದರೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುವುದು. ಸರ್ಕಾರಿ ತೋಡು ಒತ್ತುವರಿಯಾಗಿದ್ದರೆ ತಹಶೀಲ್ದಾರ್ ಮೂಲಕ ತೆರವುಗೊಳಿಸಲಾಗುವುದು.

ಪ್ರಶ್ನೆ: ರಾಘವೇಂದ್ರ ಸಾಲಿಗ್ರಾಮ: ಡಿವೈನ್‌ ಪಾರ್ಕ್‌ನಿಂದ ನೀರು ಹೋಗುವ ಜಾಗ ಮುಚ್ಚಲಾಗಿದ್ದು ಸ್ವಂತ ಜಾಗಕ್ಕೆ ನುಗ್ಗುತ್ತಿದೆ.

ಜಿಲ್ಲಾಧಿಕಾರಿ: ನಿಮ್ಮ ಜಾಗಕ್ಕೆ ನೀರು ಹೋಗುತ್ತಿದ್ದರೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಿಂದ ಪರಿಶೀಲಿಸಿ, ವೈಜ್ಞಾನಿಕವಾಗಿ ಮಳೆ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಗುವುದು.

ಪ್ರಶ್ನೆ: ವಿಕ್ರಮ್ ಶೆಟ್ಟಿ ಕೊರ್ಗಿ ಕುಂಭಾಶಿ: ಕುಂಭಾಶಿಯಲ್ಲಿ ಸರ್ವೀಸ್ ರಸ್ತೆ ಇಲ್ಲದ ಕಾರಣ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಜನರ ಜೀವ ಉಳಿಸಿ.

ಜಿಲ್ಲಾಧಿಕಾರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವೀಸ್‌ ರಸ್ತೆ ಇಲ್ಲದಿರುವ ಬಗ್ಗೆ ವ್ಯಾಪಕ ದೂರುಗಳಿದ್ದು ಎನ್‌ಎಚ್‌ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗುವುದು.

ಪ್ರಶ್ನೆ: ಸುಬ್ರಹ್ಮಣ್ಯ ಬಿಜೂರು ಬೈಂದೂರು–ಜಿಲ್ಲೆಯಾದ್ಯಂತ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಸರ್ಕಾರಿ ಸೇವೆಗಳನ್ನು ಪಡೆಯಲು ಅಡ್ಡಿಯಾಗಿದೆ.

ಜಿಲ್ಲಾಧಿಕಾರಿ–ಎಲ್ಲ ಕಚೇರಿಗಳಿಗೆ ಸಿಸಿಟಿವಿ ಕ್ಯಾಮೆರಾ ಹಾಕುವಂತೆ ನಿರ್ದೇಶನ ನೀಡಲಾಗಿದೆ. ಸರ್ಕಾರಿ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಪಡೆದುಕೊಳ್ಳಲು ಸಾರ್ವಜನಿಕರು ಆಸಕ್ತಿ ತೋರಬೇಕು. ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಲಾಗುವುದು.

ಪ್ರಶ್ನೆ: ರಮೇಶ್‌ ಉಡುಪಿ–ಮಣಿಪಾಲದ ಮಂಚಿಯಲ್ಲಿ ಖಾಸಗಿ ಅಪಾರ್ಟ್‌ಮೆಂಟ್‌ನ ಒಳ ಚರಂಡಿ ನೀರು ಕೃಷಿ ಭೂಮಿಗೆ ಬಿಡಲಾಗುತ್ತಿದೆ.

ಜಿಲ್ಲಾಧಿಕಾರಿ: ಅಪಾರ್ಟ್‌ಮೆಂಟ್ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು.

ಪ್ರಶ್ನೆ: ರಾಜೇಶ್‌ ಕೊಲ್ಲೂರು–ತ್ರಾಸಿ, ಮರವಂತೆಯ ಸಮುದ್ರಗಳಿಗೆ ಶಿಲೆಕಲ್ಲು ಹಾಕಲಾಗಿದ್ದು ಇದಕ್ಕೆಲ್ಲ ಲೆಕ್ಕ ಇದೆಯೇ

ಜಿಲ್ಲಾಧಿಕಾರಿ: ಖಂಡಿತ ಇರುತ್ತದೆ. ಬಂದರು ಇಲಾಖೆ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತದೆ. ನಿರ್ಧಿಷ್ಟವಾಗಿ ಅವ್ಯವಹಾರ ನಡೆದ ಬಗ್ಗೆ ದೂರು ನೀಡಿದರೆ ತನಿಖೆ ನಡೆಸಲಾಗುವುದು.

ಪ್ರಶ್ನೆ: ಚಂದ್ರ ಕಿರಿಮಂಜೇಶ್ವರ– ನಾಗೂರು ಕೊಡೇರಿ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ.

ಜಿಲ್ಲಾಧಿಕಾರಿ: ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT