ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ತಾಸಿನಲ್ಲಿ 178 ಪ್ರಶ್ನೆಗಳಿಗೆ ಉತ್ತರ

ಶಿಕ್ಷಣ ಇಲಾಖೆಯ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ
Last Updated 16 ಜನವರಿ 2021, 3:49 IST
ಅಕ್ಷರ ಗಾತ್ರ

ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಬಲವರ್ಧನೆಗೆ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುತ್ತಿರುವ ಫೋನ್‌ ಇನ್‌ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿದ ಗೊಂದಲಗಳನ್ನು ಶಿಕ್ಷಕರು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

2 ಗಂಟೆಯಲ್ಲಿ 178 ಪ್ರಶ್ನೆಗಳಿಗೆ ಉತ್ತರ

ಶುಕ್ರವಾರ ಸಂಜೆ 5 ರಿಂದ 7ರವರೆಗೆ ಉಡುಪಿಯ ಬೋರ್ಡ್‌ ಹೈಸ್ಕೂಲ್‌ನಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 178 ಪ್ರಶ್ನೆಗಳನ್ನು ಕೇಳಿದ್ದು ವಿಶೇಷವಾಗಿತ್ತು.

2 ತಾಸು ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನಿರಂತರವಾಗಿ ಕರೆಗಳು ಬಂದವು. ರಾಸಾಯನಿಕ ಸಮೀಕರಣ ಸರಿದೂಗಿಸುವುದು ಹೇಗೆ, ವಕ್ರೀಭವನ ಸೂಚ್ಯಂಕ ಎಂದರೇನು, ನ್ಯೂಲ್ಯಾಂಡ್‌ನ ಅಷ್ಟಕದ ನಿಯಮದ ವಿವರಣೆ ತಿಳಿಸಿ, ಹೈಡ್ರೋಜನ್ ಕಾರ್ಬೋನೇಟ್ ವರ್ತನೆ ಹೇಗೆ, ಪರೀಕ್ಷೆಯ ಸಿಲೆಬಸ್‌ ಅಂತಿಮವಾಗಿದೆಯೇ, ಓದಿದ್ದು ಹೆಚ್ಚುಕಾಲ ಮನಸ್ಸಿನಲ್ಲಿ ಉಳಿಯುತ್ತಿಲ್ಲ, ಪರೀಕ್ಷೆ ಯಾವಾಗ ಆರಂಭ ಆಗುತ್ತದೆ ಹೀಗೆ ವಿದ್ಯಾರ್ಥಿಗಳು ಪ್ರಶ್ನೆಗಳ ಸುರಿಮಳೆಗೈದರು.

ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ ಶಿಕ್ಷಕರು ಪಠ್ಯದ ಗೊಂದಲಗಳನ್ನು ನಿವಾರಿಸುವುದರ ಜತೆಗೆ, ಪರೀಕ್ಷಾ ಭಯ ಹೋಗಲಾಡಿಸುವ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಪರೀಕ್ಷಾ ಭಯಬಿಟ್ಟು ಓದಿದರೆ ಉತ್ತಮ ಅಂಕಗಳು ಖಚಿತವಾಗಿ ಸಿಗುತ್ತವೆ ಎಂದು ಸಾಂತ್ವನ ಹೇಳಿದರು.

ಡಿಸಿ, ಸಿಇಒ ಕಿವಿಮಾತು

ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್ ಭಾಗವಹಿಸಿ ಮಕ್ಕಳದೊಂಗಿಗೆ ಮಾತನಾಡಿ ಕಲಿಕೆಗೆ ಸಲಹೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಜಗದೀಶ್‌ ಫೋನ್‌ ಇನ್ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಮಕ್ಕಳು ಯಾವುದೇ ಸಮಯದಲ್ಲಿ ಕಲಿಕಾ ವಿಷಯಗಳ ಕುರಿತು ಅರಿಯಲು ಕರೆ ಮಾಡಿದರೆ ಶಿಕ್ಷಕರು ಮಾಹಿತಿ ನೀಡಬೇಕು. ಎಲ್ಲ ಮಕ್ಕಳು ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಶಿಕ್ಷಕರ ಮೊಬೈಲ್ ನಂಬರ್‌ಗಳನ್ನು ತಲುಪಿಸಿ. ಪರೀಕ್ಷೆ ಹತ್ತಿರ ಬಂದಾಗ ವಾರದಲ್ಲಿ 2 ಬಾರಿಫೋನ್‌ ಇನ್‌ ಕಾರ್ಯಕ್ರಮದ ವ್ಯವಸ್ಥೆ ಮಾಡಿ. ಫಲಿತಾಂಶದಲ್ಲಿ ಕಡಿಮೆ ಸಾಧನೆ ಮಾಡುತ್ತಿರುವ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಎಲ್‌.ಎಚ್.ನಾಗೂರ ಅವರಿಗೆ ಸಲಹೆ ನೀಡಿದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಶಿಕ್ಷಕರಿಯರಾದ ದೀಪಾ ಹೆಜಮಾಡಿ, ರಜನಿ ಉಡುಪ, ವಿನೋದಾ , ನವ್ಯಾ ನಾಗೇಂದ್ರ ಪೈ, ಮಿಲ್ಟನ್ ಕ್ರಾಸ್ಟಾ ,ನಯನಾ ಭಾಗವಹಿಸಿದ್ದರು. ಬೋರ್ಡ್‌ ಹೈಸ್ಕೂಲ್ ಮುಖ್ಯಶಿಕ್ಷಕ ಸುರೇಶ್ ಭಟ್‌ ಉಪಸ್ಥಿತರಿದ್ದರು.

ಡಿಡಿಪಿಐ ಎನ್.ಎಚ್.ನಾಗೂರ, ಡಯಟ್ ಪ್ರಾಂಶುಪಾಲ ವೇದಮೂರ್ತಿ, ಶಿಕ್ಷಣಾಧಿಕಾರಿ ಜಾಹ್ನವಿ, ರವಿ, ನಾಗೇಂದ್ರಪ್ಪ, ಅಶೋಕ ಕಾಮತ್‌, ಉಡುಪಿ ಬಿಇಒ ಕೆ. ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT