ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮತ ಬೇಟೆಗಾಗಿ ‘ಉತ್ಸವಗಳ ಪಾಲಿಟಿಕ್ಸ್‌’

ಉಡುಪಿ ಜಿಲ್ಲೆಯಲ್ಲಿ ಸಾಲು ಸಾಲು ಉತ್ಸವ, ಅಭಿನಂದನಾ ಸಮಾರಂಭಗಳು
Last Updated 7 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಉಡುಪಿ: ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಗೂ ಮುನ್ನವೇ ಜಿಲ್ಲೆಯಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಅಖಾಡಕ್ಕಿಳಿಯಲು ಸಜ್ಜಾಗಿರುವ ಅಭ್ಯರ್ಥಿಗಳು ‘ಉತ್ಸವಗಳ ಪಾಲಿಟಿಕ್ಸ್‌’ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಮತದಾರರಿಗೆ ಹತ್ತಿರವಾಗಲು, ಹೈಕಮಾಂಡ್‌ಗೆ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂಬ ಸ್ಪಷ್ಟ ಸಂದೇಶ ರವಾನಿಸಲು ಸಾಲು ಸಾಲು ಉತ್ಸವ, ಅಭಿನಂದನಾ ಸಮಾರಂಭ, ಕಂಬಳ, ಕ್ರಿಕೆಟ್‌ ಟೂರ್ನಿಗಳನ್ನು ಆಯೋಜಿಸುತ್ತಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಕೃಷ್ಣಮೂರ್ತಿ ಆಚಾರ್ಯ ಈಚೆಗೆ ನಗರದ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ‘ಪುನೀತ ಪರ್ವ’ ಕಾರ್ಯಕ್ರಮ ಆಯೋಜಿಸಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂಬ ಸಂದೇಶವನ್ನು ನೀಡಿದ್ದಾರೆ.

ಹಾಲಿ ಶಾಸಕ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿಯೂ ಆಗಿರುವ ಕೆ.ರಘುಪತಿ ಭಟ್‌ ಸಾಲು ಸಾಲು ಉತ್ಸವಗಳಲ್ಲಿ ಭಾಗವಹಿಸಿ ಮತದಾರರಿಗೆ ಮತ್ತಷ್ಟು ಹತ್ತಿರವಾಗುವ ಯತ್ನ ಮಾಡಿದ್ದಾರೆ.

ಎಂಜಿಎಂ ಕಾಲೇಜು ಮೈದಾನದಲ್ಲಿ ಈಚೆಗೆ ಅಟಲ್ ಉತ್ಸವದ ಭಾಗವಾಗಿ ನಡೆದ ಬೂತ್ ಸಂಗಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್‌ ತಂಡದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿ ಮತದಾರರ ಗಮನ ಸೆಳೆದಿದ್ದಾರೆ. ಬೂತ್ ಸಂಗಮ ಬಿಜೆಪಿ ಪಕ್ಷದ ಅಧಿಕೃತ ಕಾರ್ಯಕ್ರಮವಾದರೂ ಸಾರ್ವಜನಿಕರನ್ನು ಸೆಳೆಯುವಂತಹ ಸಂಗೀತ ಸಂಜೆ, ಪ್ರೊ ಕಬ್ಬಡ್ಡಿಯಂತಹ ಕಾರ್ಯಕ್ರಮಗಳ ನೇತೃತ್ವ ವಹಿಸುವ ಮೂಲಕ ರಾಜಕೀಯ ಮೈಲೇಜ್ ಹೆಚ್ಚಿಸಿಕೊಂಡಿದ್ದಾರೆ ರಘುಪತಿ ಭಟ್‌.

ಉಡುಪಿ ರಜತ ಉತ್ಸವದ ಭಾಗವಾಗಿ ಮಲ್ಪೆಯಲ್ಲಿ ನಡೆದ ಬೀಚ್‌ ಉತ್ಸವದ ನೇತೃತ್ವ ಕೂಡ ಶಾಸಕ ರಘುಪತಿ ಭಟ್ ವಹಿಸಿದ್ದರು. ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಉತ್ಸವ ಆಯೋಜಿಸಲಾಗಿತ್ತಾದರೂ ಉಸ್ತುವಾರಿ ಮಾತ್ರ ಶಾಸಕರದ್ದು ಎನ್ನುತ್ತಾರೆ ಅಧಿಕಾರಿಗಳು. ಹಲವು ಹೊಸತನಗಳೊಂದಿಗೆ ಮೂರು ದಿನ ನಡೆದ ಬೀಚ್ ಉತ್ಸವ ಕೂಡ ಸಹಸ್ರಾರು ಮಂದಿಯನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಕಾರ್ಕಳ ಶಾಸಕ ಹಾಗೂ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್‌ ಕೂಡ ಉತ್ಸವ ಪಾಲಿಟಿಕ್ಸ್‌ನಲ್ಲಿ ಹಿಂದೆ ಬಿದ್ದಿಲ್ಲ. ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಒಳಗೊಂಡ ಆಕರ್ಷಕ ಪರಶುರಾಮ ಥೀಂ ಪಾರ್ಕ್‌ ಲೋಕಾರ್ಪಣೆ ಕಾರ್ಯಕ್ರಮದ ನೇತೃತ್ವ ವಹಿಸಿದವರು ವಿ.ಸುನೀಲ್ ಕುಮಾರ್.

ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿ ಕಾರ್ಕಳ ಕ್ಷೇತ್ರದ ಮತದಾರರ ಗಮನ ಸೆಳೆಯುವ ಯತ್ನ ಮಾಡಿದ್ದಾರೆ. ‘ಉತ್ಸವಗಳ’ ಆಯೋಜನೆ ಹಿಂದೆ ರಾಜಕೀಯ ಪ್ರತಿಫಲಾಪೇಕ್ಷೆ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದರೂ ‘ಕಾರ್ಕಳ ಉತ್ಸವ, ಪರಶುರಾಮನ ಉತ್ಸವದಂತಹ ವಿಭಿನ್ನ ಕಾರ್ಯಕ್ರಮಗಳನ್ನು ಜನರು ಮೆಚ್ಚಿ ಚುನಾವಣೆಯಲ್ಲಿ ಹರಸಲಿದ್ದಾರೆ ಎಂಬ ವಿಶ್ವಾಸ ಅವರದ್ದು.

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿ ಯಶ್‌ಪಾಲ್ ಸುವರ್ಣ ಅವರಿಗೆ ಅವರ ಅಭಿಮಾನಿಗಳು ಉಚ್ಚಿಲದಲ್ಲಿ ‘ಯಶೋಭಿನಂದನ’ ಹೆಸರಿನಲ್ಲಿ ಅದ್ಧೂರಿ ಅಭಿನಂದನಾ ಸಮಾರಂಭ ಆಯೋಜಿಸಿದ್ದರು.

ಸ್ವಾಮೀಜಿಗಳು, ಸಚಿವರು, ಶಾಸಕರು, ಮತ್ಸ್ಯೋದ್ಯಮಿಗಳು, ಸಹಕಾರ ಕ್ಷೇತ್ರದ ಧುರೀಣರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶ್‌ಪಾಲ್ ರಾಜಕೀಯ ಭವಿಷ್ಯಕ್ಕೆ ಶುಭ ಹಾರೈಸಿದರು.

ಉತ್ಸವ, ಅಭಿನಂದನಾ ಸಮಾರಂಭಗಳಲ್ಲಿ ಭಾಗವಹಿಸುತ್ತಿರುವ ಜನಸ್ತೋಮದಿಂದ ಪ್ರೇರೇಪಿತಗೊಂಡು ಉಳಿದವರು ಕೂಡ ಉತ್ಸವಗಳ ಆಯೋಜನೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಮತದಾರರ ಸೆಳೆಯಲು ಉತ್ಸವಗಳು ವೇದಿಕೆ’

ಮತದಾರರನ್ನು ಸೆಳೆಯಲು ಉತ್ಸವಗಳು ಬಹಳ ಪ್ರಮುಖವಾದ ವೇದಿಕೆ. ಚುನಾವಣೆ ಹತ್ತಿರ ಬರುವಾಗ ಉತ್ಸವಗಳ ಆಯೋಜನೆ ಸಹಜ. ರಾಜಕೀಯ ನಾಯಕರು ವೈಯಕ್ತಿಕವಾಗಿ, ಪಕ್ಷದ ವತಿಯಿಂದ ಉತ್ಸವಗಳನ್ನು ಆಯೋಜಿಸಲು ಯಾರ ಆಕ್ಷೇಪ ಇರುವುದಿಲ್ಲ. ಆದರೆ, ಸರ್ಕಾರದ ಕಾರ್ಯಕ್ರಮ ಹಾಗೂ ಉತ್ಸವಗಳಲ್ಲಿ ಅಧಿಕಾರಿಗಳ ಮುಂದಾಳತ್ವ ಇರಬೇಕು.

–ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ, ರಾಜಕೀಯ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT