ಶಿರೂರು ಸ್ವಾಮೀಜಿಯ ಸಾವು: ಮರಣೋತ್ತರ ಪರೀಕ್ಷಾ ವರದಿಯೇ ಅಂತಿಮವಲ್ಲ

7
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ

ಶಿರೂರು ಸ್ವಾಮೀಜಿಯ ಸಾವು: ಮರಣೋತ್ತರ ಪರೀಕ್ಷಾ ವರದಿಯೇ ಅಂತಿಮವಲ್ಲ

Published:
Updated:

ಉಡುಪಿ: ಶಿರೂರು ಲಕ್ಷ್ಮೀವರ ಸ್ವಾಮೀಜಿಯ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿಯು ಪ್ರಾಥಮಿಕ ಹಂತದ್ದಾಗಿದ್ದು, ಸಾವಿಗೆ ನಿಖರ ಕಾರಣ ತಿಳಿಯಬೇಕಾದರೆ ಎಸ್‌ಎಫ್‌ಎಲ್‌ ವರದಿ ಬರುವವರೆಗೂ ಕಾಯಲೇಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಶುಕ್ರವಾರ ಕಚೇರಿಯಲ್ಲಿ ಮಾತನಾಡಿದ ಅವರು, ವಿಧಿ ವಿಜ್ಞಾನ ಪ್ರಯೋಗಾಲಯವು ಎಫ್‌ಎಸ್‌ಎಲ್ ವರದಿಯನ್ನು ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ಕೆಎಂಸಿ ವೈದ್ಯರಿಗೆ ಒಪ್ಪಿಸಲಿದೆ, ನಂತರ ವೈದ್ಯರು ಈ ಎರಡು ವರದಿಗಳನ್ನು ತಾಳೆ ಮಾಡಿ ಅಂತಿಮ ಅಭಿಪ್ರಾಯವನ್ನು ಪ್ರಕಟಿಸಲಿದ್ದಾರೆ. ನಂತರ ಪೊಲೀಸ್ ಇಲಾಖೆಗೆ ಅಂತಮ ವರದಿಯನ್ನು ಆಸ್ಪತ್ರೆ ನೀಡಲಿದೆ ಎಂದರು.

ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಮಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕಚೇರಿ ಒಳಪಡುತ್ತದೆ. ಈ ಭಾಗದಲ್ಲಿರುವುದು ಒಂದೇ ಕೇಂದ್ರವಾಗಿರುವುದರಿಂದ ಇಲ್ಲಿಗೆ ಬರುವ ಪ್ರಕರಣಗಳು ಹೆಚ್ಚಿವೆ. ಹಾಗಾಗಿ, ಶಿರೂರು ಸ್ವಾಮೀಜಿಯ ಸಾವಿನ ಎಫ್‌ಎಸ್‌ಎಲ್ ವರದಿಯು ಕೈಸೇರುವುದು ವಿಳಂಬವಾಗುತ್ತಿದೆ ಎಂದರು.

ಮಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ ಪ್ರಾದೇಶಿಕ ಕಚೇರಿಯು ಆದ್ಯತೆ ಮೇರೆಗೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತದೆ. ಪರಿಹಾರಕ್ಕೆ ಅರ್ಹವಾದ ಆತ್ಮಹತ್ಯೆ ಪ್ರಕರಣಗಳ ವರದಿಯನ್ನು ತಕ್ಷಣದಲ್ಲಿ ನೀಡಲಾಗುತ್ತದೆ. ಡಿಎನ್‌ಎ ಪರೀಕ್ಷೆ ನಡೆಸಬೇಕಾದ ಪ್ರಕರಣಗಳಲ್ಲಿ ಎಫ್‌ಎಸ್‌ಎಲ್ ವರದಿಯನ್ನು ತಕ್ಷಣವೇ ನೀಡಿ, ಆ ವರದಿ ಯನ್ನು ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಸಹಿ ನಕಲು ಪ್ರಕರಣಗಳಿಗೆ ಸಂಬಂಧಿಸಿದ ವರದಿ ಪಡೆಯಲು 2 ವರ್ಷಗಳು ಕಾದಿರುವ ನಿದರ್ಶನಗಳಿವೆ ಎಂದರು.

ತನಿಖೆಯ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಶಿರೂರು ಮೂಲಮಠ ಹಾಗೂ ಉಡುಪಿ ಮಠಗಳು ಪೊಲೀಸ್‌ ಇಲಾಖೆಯ ವಶದಲ್ಲಿ ಇರಲಿದೆ. ನಂತರ ಮಠವನ್ನು ಸಂಬಂಧಪಟ್ಟವರ ಸುಪರ್ದಿಗೆ ಒಪ್ಪಿಸಲಾಗುವುದು ಎಂದರು.

ಶಿರೂರು ಮೂಲಮಠದಲ್ಲಿದ್ದ ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ಸ್ವತ್ತುಗಳು ಮತ್ತು ದೇವರ ಪೂಜಾ ಸಾಮಾಗ್ರಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಒಪ್ಪಿಸಲಾಗಿದೆ. ಉಡುಪಿಯ ಶಿರೂರು ಮಠದ ಲಾಕರ್‌ನಲ್ಲಿ ಸ್ವತ್ತುಗಳನ್ನು ಇಡಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಡಿವಿಆರ್‌ ಬೆಂಗಳೂರಿಗೆ
ಶಿರೂರು ಮಠದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್‌ಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಇನ್ನಷ್ಟೆ ಬರಬೇಕಾಗಿದೆ ಎಂದು ಲಕ್ಷ್ಮಣ ನಿಂಬರಗಿ ಹೇಳಿದರು.

ಡಿವಿಆರ್ ನೀರಿಗೆ ಎಸೆದಿರುವುದರಿಂದ ಅದರಲ್ಲಿರುವ ದೃಶ್ಯಾವಳಿಯನ್ನು ಮರಳಿ ಪಡೆಯಲು ಸಾಧ್ಯವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಎಸ್‌ಪಿ ನಿರಾಕರಿಸಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !