ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಶಾಮಕ ಆರೈಕೆ ಸಾಮಾನ್ಯರ ತಲುಪಲಿ

ಮಣಿಪಾಲ ಕೆಎಂಸಿಯಲ್ಲಿ ವಿಶ್ವ ವಿಶ್ರಾಂತಿ, ಪ್ರಶಾಮಕ ಆರೈಕೆ ದಿನಾಚರಣೆಯಲ್ಲಿ ಡಾ.ಡೇಜ್ ಅಹಮದ್
Last Updated 9 ಅಕ್ಟೋಬರ್ 2022, 12:59 IST
ಅಕ್ಷರ ಗಾತ್ರ

ಉಡುಪಿ: ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ಉಪಶಾಮಕ ಆರೈಕೆ ಸಾಮಾನ್ಯ ಜನರಿಗೂ ತಲುಪಬೇಕು ಎಂದು ತಮಿಳುನಾಡಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತ ಡಾ.ಡೇಜ್ ಅಹಮದ್ ಅಭಿಪ್ರಾಯಪಟ್ಟರು.

ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನದ ಅಂಗವಾಗಿ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಬ್ಲೂ ಮ್ಯಾಪಲ್‌ನ 2ನೇ ಆವೃತ್ತಿಯ ‘ಚಿಕಿತ್ಸೆಯ ಮಿತಿ ಮತ್ತು ಜೀವನ ಅಂತ್ಯದ ಆರೈಕೆ’ ಕುರಿತಾದ ಕಿರುಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಭಾರತದಲ್ಲಿ ಉಪಶಾಮಕ ಆರೈಕೆಗೆ ಹೆಚ್ಚಿನ ಬೇಡಿಕೆಯಿದ್ದು, ಅರಿವು ಮತ್ತು ಜಾಗೃತಿ ಕೊರತೆಯಿಂದಾಗಿ ಪ್ರಶಾಮಕ ಆರೈಕೆ ಸಮುದಾಯಗಳನ್ನು ತಲುಪಲು ವಿಫಲವಾಗಿದೆ. ಉಪ ಶಾಮಕ ಆರೈಕೆ ಜನರಿಗೆ ಸುಲಭವಾಗಿ ಸಿಗಲು ಜಿಲ್ಲಾಡಳಿತ ಮತ್ತು ಆಸ್ಪತ್ರೆಗಳು ಸಹಕರಿಸಬೇಕು ಎಂದರು.

ಕೆಎಂಸಿ ಮಂಗಳೂರಿನ ಅಸೋಸಿಯೇಟ್ ಡೀನ್ ಡಾ.ಬಿ.ಸುರೇಶ್ ಕುಮಾರ್ ಶೆಟ್ಟಿ ಮಾತನಾಡಿ ‘ಮಣಿಪಾಲ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್‌ನ ಪ್ರಯೋಜನ ಬಹಳಷ್ಟು ರೋಗಿಗಳಿಗೆ ಸಿಕ್ಕಿದ್ದು ಎತ್ತರಕ್ಕೆ ಬೆಳೆದಿದೆ. ಸಮಗ್ರ ವ್ಯಕ್ತಿ-ಕೇಂದ್ರಿತ ಆರೈಕೆಗೆ ಆದ್ಯತೆ ನೀಡಿರುವ ಕೇಂದ್ರದಲ್ಲಿ ವಿಶೇಷ ತರಬೇತಿ ಪಡೆದ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಇದ್ದಾರೆ ಎಂದರು.

ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ‘ದಾದಿಯರ ಉತ್ತಮ ಶುಶ್ರೂಷೆ ಹಾಗೂ ಆರೈಕೆ ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ. ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯುವ ದಾದಿಯರು ಕಾಯಿಲೆಗಳು ಗುಣವಾಗಲು ಹೆಚ್ಚು ಶ್ರಮ ಹಾಕುತ್ತಾರೆ ಎಂದು ಶ್ಲಾಘಿಸಿದ ಅವರು, ಉಪಶಾಮಕ ಆರೈಕೆ ಸೇವೆಯ ಅರಿವು ರಾಜ್ಯ ಮತ್ತು ದೇಶದಲ್ಲಿ ಹೆಚ್ಚಬೇಕು ಎಂದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಮುಖ್ಯಸ್ಥ ಡಾ.ನವೀನ್ ಎಸ್.ಸಾಲಿನ್ಸ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.‌

ಅಕ್ಟೋಬರ್ ಎರಡನೇ ಶನಿವಾರ ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನ ಆಚರಿಸಲಾಗುತ್ತದೆ. ಪ್ರಶಾಮಕ ಆರೈಕೆ ಅಗತ್ಯಗಳನ್ನು ಪರಿಹರಿಸುವುದು ಮತ್ತು ಅವಶ್ಯವಿರುವ ರೋಗಿಗಳಿಗೆ ಪ್ರಶಾಮಕ ಆರೈಕೆಯ ಅರಿವು ಹೆಚ್ಚಿಸುವುದು ಇದರ ಉದ್ದೇಶ.

ರೋಗಿಗಳ ಕುಟುಂಬ ಸದಸ್ಯರು ಉಪಶಾಮಕ ಆರೈಕೆಯ ಅನುಭವ ಹಂಚಿಕೊಂಡರು. ಡಾ. ಕೃತಿಕಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT