ಗೌರವಧನ ದ್ವಿಗುಣಕ್ಕೆ ಒತ್ತಾಯ: ಧರಣಿ 2ರಂದು
ಉಡುಪಿ: ರಾಜ್ಯದ ವಿಶೇಷ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಗೌರವಧನ ದ್ವಿಗುಣಕ್ಕೆ ಒತ್ತಾಯಿಸಿ ಡಿ.2ರಂದು ಎಲ್ಲ ಜಿಲ್ಲೆಗಳ ಡಿಸಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ವಿಶ್ವ ಅಂಗವಿಕಲರ ದಿನಾಚರಣೆಯನ್ನೂ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ ಸಂಘದ ಅಧ್ಯಕ್ಷೆ ಡಾ. ಕಾಂತಿ ಹರೀಶ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013- 14ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಶಿಕ್ಷಕರಿಗೆ ₹ 13,500, ಶಿಕ್ಷಕೇತರ ಸಿಬ್ಬಂದಿಗೆ ₹ 8ರಿಂದ ₹9ಸಾವಿರ ಗೌರವಧನ ಜಾರಿಗೊಳಿಸಿದ್ದು, ಶಿಶು ಕೇಂದ್ರಿಕೃತ ಸಹಾಯಧನ ಯೋಜನೆಯಡಿ 141 ವಿಶೇಷ ಶಾಲೆಗಳು ಅನುದಾನ ಬಿಡುಗಡೆಯಾಗುತ್ತಿದೆ. ಬಳಿಕ ಗೌರವ ಧನ ಏರಿಕೆಯಾಗಿಲ್ಲ. ಕನಿಷ್ಠ ವೇತನವೂ ಸಿಗದೆ ಜೀವನ ನಿರ್ವಹಣೆಗೆ ಶಿಕ್ಷಕರಿಗೆ ಕಷ್ಟವಾಗಿದೆ ಎಂದರು.
ರಾಜ್ಯ ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟದ ಕರೆಯಂತೆ ಡಿ. 3ರಂದು ಸಾರ್ವತ್ರಿಕ ರಜೆಯಾಗಿದ್ದು, ಡಿ.2ರಂದು ವಿಶೇಷ ಶಾಲೆಗಳ ಎಲ್ಲ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಅಥವಾ ಅಂಗವಿಕಲರ ಸಬಲೀಕರಣ ಅಧಿಕಾರಿ ಕಚೇರಿ ಎದುರು ಸಾಂಕೇತಿಕ ಮುಷ್ಕರ ನಡೆಸ ಲಿದ್ದಾರೆ. ಬೇಡಿಕೆಗಳಿಗೆ ಸ್ಪಂದನ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕಾಂತಿ ಹರೀಶ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾ ಕಾರ್ಯದರ್ಶಿ ಜಯ ವಿಜಯ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ರೇಷ್ಮಾ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.