ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗೋಡೆ ಕಲ್ಲುಗಳು ಸಮುದ್ರ ಪಾಲು

Last Updated 7 ಜುಲೈ 2022, 4:18 IST
ಅಕ್ಷರ ಗಾತ್ರ

ಕುಂದಾಪುರ: ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಗಾಳಿಯಿಂದಾಗಿ ಸಮುದ್ರದಲ್ಲಿ ಏಳುತ್ತಿರುವ ಭಾರಿ ಅಲೆಗಳು ಸಮುದ್ರ ತೀರ ಪ್ರದೇಶಗಳನ್ನು ಅಹುತಿ ತೆಗೆದುಕೊಳ್ಳುತ್ತಿದೆ. ನಿರಂತರವಾಗಿ ಕಡಲ ತೀರದ ಭೂ ಪ್ರದೇಶಗಳನ್ನು ನುಂಗುತ್ತಿರುವ ಕಡಲ್ಕೊರೆತದಿಂದ ತೀರ ಪ್ರದೇಶದ ನಿವಾಸಿಗಳ ಆತಂಕ ಹೆಚ್ಚಾಗುತ್ತಿದೆ.

ಕುಂದಾಪುರ ಹಾಗೂ ಬೈಂದೂರು ಕರಾವಳಿ ತೀರ ಪ್ರದೇಶಗಳಾದ ಕೋಟೇಶ್ವರ, ಬೀಜಾಡಿ, ಗೋಪಾಡಿ, ಕೊರವಡಿ, ಮರವಂತೆ ಭಾಗದ ಕಡಲ ತೀರ ಪ್ರದೇಶಗಳಲ್ಲಿ ಕಡಲ ಕೊರೆತ ಕಾಣಿಸಿಕೊಳ್ಳುತ್ತಿದೆ. ಹಳೆ ಅಳಿವೆ ಸಮೀಪದ ಕಿನಾರ ಬೀಚ್‌ ರೆಸ್ಟೋರೆಂಟ್ ಬಳಿಯ ಗುಡಿಸಲುಗಳು ಅಪಾಯದಂಚಿನಲ್ಲಿದೆ. ಹಳೆಅಳಿವೆ ಕಡಲ ತೀರದಲ್ಲಿ ತಡೆಗೋಡೆಗಳಿಗೆ ಹಾಕಲಾದ ಕಲ್ಲುಗಳು ಕಡಲ್ಕೊರೆತದ ಪರಿಣಾಮದಿಂದ ಸಮುದ್ರ ಪಾಲಾಗಿವೆ. ಗಾಳಿ ಮಳೆಯಿಂದ ಸಮೀಪದಲ್ಲಿರುವ ಗೂಡಂಗಡಿಗಳಿಗೆ ಕಡಲಿನ ಅಲೆಗಳ ನೀರು ಹೊಡೆಯುತ್ತಿದ್ದು ತಮ್ಮ ವ್ಯಾಪಾರ ವಹಿವಾಟಿಗೆ ತಡೆಯುಂಟಾಗಿದೆ.

ಮರವಂತೆಯ ತೀರ ಪ್ರದೇಶದಲ್ಲಿ ಕಡಲ್ಕೊರೆತದ ಕಾರಣದಿಂದಾಗಿ ತೆಂಗಿನ ಮರಗಳು, ರಸ್ತೆ ನೀರು ಪಾಲಾಗಿದೆ. ಮನೆಗಳಿಗೂ ಅಪಾಯವಾಗಬಹುದು ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಕಳೆದ ಹಲವು ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ಇಲ್ಲಿನ ಸಮಸ್ಯೆಗೆ ಶಾಶ್ವತ ತಡೆಗೋಡೆ ರಚಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೂ ಅದಕ್ಕೆ ಸೂಕ್ತ ಸ್ಪಂದನ ದೊರಕುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕಾಳಾವರ: ರಸ್ತೆಗೆ ಉರುಳಿದ ಮರಗಳು

ಕುಂದಾಪುರ: ಕೋಟೇಶ್ವರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಕಾಳಾವರ ಶಾಲೆಯ ಸಮೀಪದ ಬಸ್ಸು ತಂಗುದಾಣದ ಬಳಿ ಬೃಹತ್ ಗಾತ್ರದ ಗಾಳಿ ಮತ್ತು ಮಾವಿನ ಮರಗಳು ರಸ್ತೆಗೆ ಉರುಳಿ ಬಿದ್ದ ಕಾರಣ ರಾಜ್ಯ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ವ್ಯವಸ್ಥೆಗೆ ತೊಡಕಾಗಿತ್ತು. ಮರಗಳ ಗೆಲ್ಲು ತಂಗುದಾಣದ ಬಳಿಯ ಟ್ರಾನ್ಸ್‌ಫಾರ್ಮರ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ, ತಂತಿ ಹಾಗೂ ಟ್ರಾನ್ಸ್‌ಫಾರ್ಮರ್ ಹಾನಿಯಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಳಾವರ ವಲಯದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ರಾಜಶೇಖರ್ ಇವರ ನೇತೃತ್ವದಲ್ಲಿ ಸ್ವಯಂ ಸೇವಕರಾದ ಸುಜಿತ್ ಕುಮಾರ್ ಶೆಟ್ಟಿ, ಸುಧೀರ್, ಚಂದ್ರ ಆಚಾರ್, ಸುನೀಲ್ ಕುಮಾರ್ ಶೆಟ್ಟಿ ಸಹಕಾರದಿಂದ ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ರಸ್ತೆ ಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಘಟನೆ ನಡೆದ ಸ್ಥಳದ ಸಮೀಪದಲ್ಲಿ ಇರುವ ಶಿಥಿಲಾವಸ್ಥೆ ತಲುಪಿರುವ ಬಸ್ಸು ತಂಗುದಾಣದಲ್ಲಿ ಸದಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ಸಿಗಾಗಿ ಕಾಯುತ್ತಿರುವುದು ಮಾಮೂಲಿಯಾಗಿತ್ತು. ಮಂಗಳವಾರ ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದರಿಂದ ತಂಗುದಾಣದಲ್ಲಿ ಯಾರು ಇಲ್ಲದೆ ಇರುವುದರಿಂದಾಗಿ ಭಾರಿ ಅನಾಹುತ ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT