ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರೂರು ಮೂಲಮಠದಲ್ಲಿ ಸಂಭ್ರಮದ ರಾಮನವಮಿ ಉತ್ಸವ

ಸಂಪೂರ್ಣ ನವೀಕರಣಗೊಂಡ ಶಿರೂರು ಮೂಲ ಮಠ
Last Updated 11 ಏಪ್ರಿಲ್ 2019, 2:57 IST
ಅಕ್ಷರ ಗಾತ್ರ

ಹಿರಿಯಡಕ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಮೂಲ ಮಠ ಹಿರಿಯಡಕ ಸಮೀಪದ ಶಿರೂರಿನಲ್ಲಿ ರಾಮನವಮಿ ಮಹೋತ್ಸವವು ಶಿರೂರು ಮಠದ ದ್ವಂದ್ವಮಠವಾದ ಸೋದೆ ವಾದಿರಾಜ ಮಠಾಧೀಶರಾದ ವಿಶ್ವವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಲಿದೆ.

ರಾಮನವಮಿ ಮಹೋತ್ಸವದ ಅಂಗವಾಗಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದೇ 12ರರಂದು ಬೆಳಿಗ್ಗೆ ಗಣಹೋಮ, ಸೋದೆ ಹಾಗೂ ಶಿರೂರ ಮಠ ಸಂಸ್ಥಾನಗಳ ದೇವರ ಪೂಜೆ, ವೇದವ್ಯಾಸ ದೇವರ ಪೂಜೆ, ಪ್ರಾಣದೇವರ ಪೂಜೆ, ವಾದಿರಾಜರ ಪೂಜೆ ನಡೆಯಲಿದೆ. ಸಂಜೆ ಕಟ್ಟೆ ಪೂಜೆ, ಶ್ರೀ ಪ್ರಾಣದೇವರ ರಂಗಪೂಜೆ, ಭೂತರಾಜರ ಪೂಜೆ ನಡೆಯಲಿದೆ.

13ರಂದು ರಾಮನವಮಿಯಂದು ಬೆಳಿಗ್ಗೆ ಪಂಚಾಮೃತ ಮಹಾಭಿಷೇಕ ಸಹಿತ ವಿಶೇಷ ಪೂಜೆ, ಮನ್ಯುಸೂಕ್ತ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಪ್ರಾಣದೇವರ ವಿಶೇಷ ರಂಗಪೂಜೆ, ರಥೋತ್ಸವ, ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ ನಡೆಯಲಿದೆ. 14ರಂದು ಬೆಳಿಗ್ಗೆ ಅವಭೃತೋತ್ಸವ ನಡೆಯಲಿದೆ.

ಮಠದ ರಾಜಾಂಗಣದ ನೋಟ
ಮಠದ ರಾಜಾಂಗಣದ ನೋಟ

ಸಂಪೂರ್ಣ ನವೀಕರಣ: ಸೋದೆ ಶ್ರೀಪಾದರ ನೇತೃತ್ವದಲ್ಲಿ ಶೀರೂರು ಮೂಲಮಠವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಶಿರೂರು ಮಠದ ಯತಿಗಳಾಗಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರು ಜೀರ್ಣಗೊಂಡಿದ್ದ ಇಡೀ ಮಠವನ್ನೇ ಸಂಪೂರ್ಣವಾಗಿ ನವೀಕರಿಸುವ ಯೋಜನೆ ಕೈಗೊಂಡಿದ್ದರು. ಆದರೆ ಕಳೆದ ಜುಲೈನಲ್ಲಿ ಶ್ರೀಗಳ ಅಕಾಲಿಕ ನಿಧನದಿಂದಾಗಿ ಈ ಕೆಲಸ ನಿಂತು ಹೋಗಿತ್ತು. ಶ್ರೀಗಳ ಸಾವಿನ ಬಳಿಕ ಸುಮಾರು 2 ತಿಂಗಳುಗಳ ಕಾಲ ಮಠವನ್ನು ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ತನಿಖೆ ಪೂರ್ಣಗೊಂಡ ಬಳಿಕ ಮಠವನ್ನು ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠಕ್ಕೆ ಹಸ್ತಾಂತರಿಸಲಾಗಿತ್ತು.

ಇದೀಗ ಸೋದೆ ಶ್ರೀಗಳ ನೇತೃತ್ವದಲ್ಲಿ ಮಠದ ಮ್ಯಾನೇಜರ್ ಸುಬ್ರಮಣ್ಯ ಭಟ್ ಇವರ ಮೇಲ್ವಿಚಾರಣೆಯಲ್ಲಿ ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಮಠವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಮಠದ ಗರ್ಭಗುಡಿಯ ಸುತ್ತ ನೆಲಕ್ಕೆ ಗ್ರಾನೈಟ್ ಹಾಕಲಾಗಿದೆ. ಮಠದ ಹೆಂಚುಗಳನ್ನು ದುರಸ್ತಿಗೊಳಿಸಿ ಬಣ್ಣ ನೀಡಲಾಗಿದೆ. ಇಡೀ ಮಠಕ್ಕೆ ಬಣ್ಣ ನೀಡಲಾಗಿದೆ. ಮಠದ ಸಿಬ್ಬಂದಿಗೆ ಹಾಗೂ ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಮಠದ ಸಮೀಪದಲ್ಲಿಯೇ ಇರುವ ಸ್ವರ್ಣ ನದಿಗೆ ಇಳಿಯುವ ಮೆಟ್ಟಿಲುಗಳನ್ನು ದುರಸ್ತಿಪಡಿಸಲಾಗಿದೆ. ಮಠದ ಆವರಣದ ಒಳಗೆ ವಾಹನಗಳು ಬಾರದಂತೆ ಗೇಟ್ ನಿರ್ಮಿಸಲಾಗಿದೆ.

ಶ್ರೀಗಳು ಕುಳಿತುಕೊಳ್ಳುವ ಕೊಠಡಿಯನ್ನು ಗಾಳಿ ಬೆಳಕು ಬರುವಂತೆ ನವೀಕರಿಸಲಾಗಿದೆ. ಉತ್ಸವದ ಸಂದರ್ಭದಲ್ಲಿ ಓಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆ ನಡೆಯುತ್ತಿದ್ದ ರಾಜಾಂಗಣವನ್ನು ನವೀಕರಿಸಿ ನೆಲಕ್ಕೆ ಇಂಟರ್‌ಲಾಕ್ ಅಳವಡಿಲಾಗಿದೆ. ಅಡುಗೆ ಮಾಡುವ ಸ್ಥಳಕ್ಕೆ ಕಲ್ಲು ಹಾಸಲಾಗಿದೆ. ಇಡೀ ಮಠಕ್ಕೆ ಸಿಸಿ ಟಿವಿ, ಕ್ಯಾಮೆರಾ ಅಳವಡಿಸಲಾಗಿದ್ದು ವಿದ್ಯುತ್ ವ್ಯವಸ್ಥೆಯನ್ನು ದುರಸ್ತಿಗೊಳಿಸಲಾಗಿದೆ.

ಮಠದ ಮುಂಭಾಗದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಮಠದ ರಾಜಾಂಗಣದ ಎಡಭಾಗದಲ್ಲಿ ಹಿಂದಿನ ಕಾಲದಲ್ಲಿ ಭತ್ತವನ್ನು ಶೇಖರಿಸಿ ಇಡಲು ನಿರ್ಮಿಸಿದ್ದ ಸಂಪೂರ್ಣವಾಗಿ ಮರದಿಂದ ನಿರ್ಮಾಣ ಮಾಡಲಾದ 43.5 ಅಡಿ ಉದ್ದ 11.5 ಅಡಿ ಅಗಲದ ಪಣಜ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಇದಕ್ಕೆ ಅಡ್ಡಲಾಗಿದ್ದ ಗೋಡೆಯನ್ನು ತೆಗೆಯಲಾಗಿದೆ. ಹಳೆಯ ಮಠಗಳಂತೆ ಮರದ ಮುಚ್ಚಿಗೆಗಳು, ಸುಂದರ ಕೆತ್ತನೆಗಳನ್ನು ಒಳಗೊಂಡ ಕಂಬಗಳಿಗೆ ಎಣ್ಣೆ ಹಚ್ಚಿ ಸುಂದರಗೊಳಿಸಲಾಗಿದೆ.

ಮೂಲಮಠದಲ್ಲಿ ಇರುವ ಮುಖ್ಯಪ್ರಾಣ ದೇವರಿಗೆ ಏಕಾದಶಿ ಹೊರತುಪಡಿಸಿ ಪ್ರತಿ ಶನಿವಾರ ವಿಶೇಷ ರಂಗಪೂಜೆ ನಡೆಯುತ್ತಿದ್ದು, ಈ ಪೂಜೆಯಲ್ಲಿ ನೂರಾರು ಭಕ್ತರು ದೇವರ ಪ್ರಸಾದ ಸ್ವೀಕರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT