ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆ: ಕರ್ನಾಟಕ ಮುಂಚೂಣಿ ಸಂಕಲ್ಪ: ಸಚಿವ ಎಸ್‌.ಅಂಗಾರ

ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ
Last Updated 26 ಜನವರಿ 2023, 12:40 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಗುರುವಾರ ಗಣ ರಾಜ್ಯೋತ್ಸವ ಸಂಭ್ರಮ ಮನೆಮಾಡಿತ್ತು. ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಧ್ವಜಾರೋಹಣ ನೆರವೇರಿಸಿದರು. ಶಿಸ್ತುಬದ್ಧ ಪಥ ಸಂಚಲನ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಗಣರಾಜ್ಯೋತ್ಸವ ಸಂದೇಶ ನೀಡಿದ ಸಚಿವ ಎಸ್‌.ಅಂಗಾರ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಹಾಗೂ ವೈಜ್ಞಾನಿಕ ಕ್ರೀಡಾ ತರಬೇತಿ ನೀಡುವ ನಿಟ್ಟಿನಲ್ಲಿ ₹ 2 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಆರಂಭಿಸಲಾಗಿದೆ.

ಮೀನು ಉತ್ಪಾದನೆಯಲ್ಲಿ ಕರ್ನಾಟಕ ಮಂಚೂಣಿಯಲ್ಲಿರಬೇಕು ಎಂಬ ಉದ್ದೇಶದಿಂದ ಮೀನು ಕೃಷಿಗೆ ಉತ್ತೇಜನ, ಮೀನು ರಫ್ತಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಮೀನುಗಾರಿಕಾ ಅಭಿವೃದ್ಧಿ ನಿಗಮವು ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಜನರ ಮನೆ ಬಾಗಿಲಿಗೆ ತಾಜಾ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ತಲುಪಿಸುವ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಲಿದೆ.

ಮೀನುಗಾರಿಕಾ ಕ್ಷೇತ್ರದ ‌ಅಭಿವೃದ್ಧಿಗೆ ಬಜೆಟ್‌ನಲ್ಲಿ ₹ 279.91 ಕೋಟಿ ನಿಗದಿ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 559 ಫಲಾನುಭವಿಗಳಿಗೆ ₹ 27.58 ಕೋಟಿ ಸಹಾಯಧನ, 3,329 ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ ರಾಜ್ಯದ ಮಾರಾಟ ಕರ ರಹಿತ ಡೀಸೆಲ್, 78,983 ಮೀನುಗಾರರಿಗೆ ಸಾಮೂಹಿಕ ಅಪಘಾತ ವಿಮೆ ಜಾರಿಗೊಳಿಸಲಾಗಿದೆ.

ಮತ್ಸ್ಯ ಸಿರಿ ಯೋಜನೆಯಡಿ 100 ಆಳ ಸಮುದ್ರ ಮೀನುಗಾರಿಕಾ ದೋಣಿ ನೀಡಲು ₹ 120 ಕೋಟಿ ವೆಚ್ಚದ ಕ್ರಿಯಾಯೋಜನೆಗೆ ಕೇಂದ್ರ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮತ್ಸಾಶ್ರಯ ಯೋಜನೆಯಡಿ 5,000 ವಸತಿ ರಹಿತ ಮೀನುಗಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಿಸಲಾಗುವುದು.

ಮಲ್ಪೆ ಬಂದರು ಸೇರಿ 5 ಮೀನುಗಾರಿಕಾ ಬಂದರುಗಳನ್ನು ₹ 20 ಕೋಟಿ ವೆಚ್ಚದಲ್ಲಿ ಹೂಳೆತ್ತಲು ಅನುಮೋದನೆ ನೀಡಲಾಗಿದೆ. 5,650 ಗ್ರಾಮ ಪಂಚಾಯಿತಿಯ ಕೆರೆಗಳಲ್ಲಿ ಮೀನು ಕೃಷಿಗೆ ಒತ್ತು ನೀಡಲಾಗುವುದು ಎಂದರು.

ಪಶ್ಚಿಮವಾಹಿನಿ ಯೋಜನೆಯಡಿ ₹ 107 ಕೋಟಿ ಮೊತ್ತದಲ್ಲಿ 81 ಕಿಂಡಿ ಅಣೆಕಟ್ಟು, 1,241 ಹೆಕ್ಟೇರ್ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ, ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗೆ ₹38.96 ಕೋಟಿ ವೆಚ್ಚದಲ್ಲಿ 8.56 ಕಿ.ಮೀ ಉದ್ದಕ್ಕೆ ನದಿದಂಡೆ ಸಂರಕ್ಷಣಾ ಕಾಮಗಾರಿ ನಡೆಯಲಿದೆ.

ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ₹ 1,600 ಕೋಟಿ ವೆಚ್ಚದಲ್ಲಿ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲ್ಲೂಕುಗಳ 122 ಗ್ರಾಮಗಳಿಗೆ ಹಾಗೂ ಬೈಂದೂರು ವ್ಯಾಪ್ತಿಯಲ್ಲಿ 59 ಗ್ರಾಮಗಳಿಗೆ ₹ 585 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ವಾರಾಹಿ ಏತ ನೀರಾವರಿ ಯೋಜನೆಯಡಿ ನಾಲಾ ಕಾಮಗಾರಿ, ಎಣ್ಣೆಹೊಳೆ ಹಾಗೂ ಸೌಕೂರು ಏತ ನೀರಾವರಿ ಯೋಜನೆಗಳನ್ನು ₹14 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ನರೇಗಾ ಅಡಿ 7.23 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ₹188.73 ವಚ್ಚದಲ್ಲಿ ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣ ನಡೆಯುತ್ತಿದೆ. ಬೈಂದೂರಿನ ಮರವಂತೆಯಲ್ಲಿ ₹85 ಕೋಟಿ ವೆಚ್ಚದಲ್ಲಿ 2ನೇ ಹಂತದ ಹೊರ ಬಂದರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಸಾಗರಮಾಲಾ ಯೋಜನೆಯಡಿಯಲ್ಲಿ ಹಂಗಾರಕಟ್ಟೆಯಿಂದ ಮಣಿಪಾಲದವರೆಗೆ 25 ಕೋಟಿ ವೆಚ್ಚದಲ್ಲಿ ಜಲಮಾರ್ಗ ಕಾಮಗಾರಿಗೆ ತಾತ್ವಿಕ ಅನುಮೋದನೆ ದೊರಕಿದೆ. ಜಿಲ್ಲೆ ರಚನೆಯಾಗಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ರಜತ ಉತ್ಸವ ನಡೆಯುತ್ತಿದೆ. ಮುಂದಿನ 25 ವರ್ಷಗಳಲ್ಲಿ ಆಗಬೇಕಾದ ಅಭಿವೃದ್ಧಿಗಳ ಚಿಂತನೆ ನಡೆದಿದೆ. 27ರಂದು ಪರಶುರಾಮ ಥೀಂ ಪಾರ್ಕ್‌ನಲ್ಲಿ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಪಡೆದ ಎಂ.ಕೂರ್ಮಾರಾವ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ರಾಜ್ಯಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ

–ಸತೀಶ್ ಹೆಗ್ಡೆ ಅಮಾಸೆಬೈಲು

–ಉಪೇಂದ್ರ ನಾಯಕ್‌ ಮರ್ಣೆ

––––––––––––––

ಆತ್ಮ ಯೋಜನೆ ಶ್ರೇಷ್ಠ ಕೃಷಿಕ ಪ್ರಶಸ್ತಿ

–ಸದಾನಂದ ನಾಯಕ್‌–ಸಮಗ್ರ ಬೆಳೆ ಪದ್ಧತಿ

–ಚಂದ್ರಕಾಂತ್ ರಾವ್‌–ತೋಟಗಾರಿಕೆ

–ಚೈತ್ರಾ ವಿ ಅಡಪ–ಹೈನುಗಾರಿಕೆ

–ಲಕ್ಷ್ಮೀ– ವೈಜ್ಞಾನಿಕ ಯಂತ್ರೋಪಕರಣ

–ಮಾಕ್ಸಿಂ ಡಿಸೋಜಾ–ಹಂದಿ ಸಾಕಣೆ

–ಸುಪ್ರಿಯಾ–ಕೋಳಿ ಸಾಕಣೆ

–ದಿನೇಶ್ ಪೂಜಾರಿ–ಸೀಗಡಿ ಕೃಷಿ

–ಕಸ್ತೂರಿ ಶೇಡ್ತಿ–ಸಮಗ್ರ ನೀರು ನಿರ್ವಹಣೆ

–ಶಶಿಧರ ನಾಯಕ್‌–ಕೃಷಿ ಸಂಸ್ಕರಣೆ

–ರಮೇಶ್ ನಾಯಕ್‌–ತೋಟಗಾರಿಕೆ

––––––––––––––––––––––––

ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ

–ನಾಗರಾಜ

–ಲವ ಶೆಟ್ಟಿ

–ಭಾರತಿ

–ಭಾಸ್ಕರ ಪೂಜಾರಿ

–ಅರುಣ್ ಕುಮಾರ್

––––––––––––––––––––––––

ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತರು

–ಸಣ್ಣಮ್ಮ

–ರಮೇಶ್ ನಾಯ್ಕ

–ಪುಷ್ಪಲತಾ

––––––––––––––––––––––––

ತಾಲ್ಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತರು

–ಭಾಸ್ಕರ ಶೆಟ್ಟಿ

–ರಾಘವೇಂದ್ರ ನಾಯಕ್‌

–ರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT