ಬುಧವಾರ, ಮೇ 18, 2022
23 °C
ಶೀಘ್ರ ಸಾರ್ವಜನಿಕರಿಗೆ ಡ್ರೈವಿಂಗ್ ಟ್ರಾಕ್‌ ಸೇವೆ ಮುಕ್ತ: ಆರ್‌ಟಿಒ ಜೆ.ಪಿ.ಗಂಗಾಧರ್‌

ಅಲೆವೂರಿನಲ್ಲಿ ಗಣಕೀಕೃತ ಚಾಲನಾ ಪಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಪಘಾತಕ್ಕೆ ತುತ್ತಾದ ವಾಹನವನ್ನು ಟೋಟಲ್ ಲಾಸ್ ಎಂದು ಘೋಷಿಸಿದ ಬಳಿಕ ನೋಂದಣಿ ರದ್ದಾಗಿ ನಿರುಪಯುಕ್ತವಾಗುತ್ತದೆ. ಯಾವುದೇ ಕಾರಣಕ್ಕೂ ಆ ವಾಹನವನ್ನು ಮರು ನೋಂದಣಿ ಮಾಡಿಸಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಇದರ ಬಗ್ಗೆ ಅರಿವಿರಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್‌ ತಿಳಿಸಿದರು.

ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಇನ್‌ಶೂರೆನ್ಸ್‌ ಕಂಪೆನಿ ಪ್ರತಿನಿಧಿಗಳು ಹಾಗೂ ವಾಹನಗಳ ಡೀಲರ್‌ಗಳು ಟೋಟಲ್‌ ಲಾಸ್‌ ಆದ ವಾಹನವನ್ನು ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿರುವ ಪ್ರಕರಣಗಳು ಅಲ್ಲಲ್ಲಿ ನಡೆದಿವೆ.

ಮೋಟಾರು ವಾಹನಗಳ ಕಾಯ್ದೆಯ ಪ್ರಕಾರ ಟೋಟಲ್ ಲಾಸ್ ಎಂದು ಘೋಷಿಸಿದ ಮೇಲೆ ವಾಹನವನ್ನು ಗುಜರಿಗೆ ಹಾಕಬೇಕು. ಮರು ನೋಂದಣಿ ಮಾಡಿಸಲು ಸಾಧ್ಯವಿಲ್ಲ. ವಾಹನ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಈ ನಿಯಮದ ಬಗ್ಗೆ ಅರಿವು ಅಗತ್ಯ ಎಂದರು.

ಉಡುಪಿಯ ಅಲೆವೂರಿನಲ್ಲಿ 5 ಎಕರೆ ಪ್ರದೇಶದಲ್ಲಿ ಗಣಕೀಕೃತ ಚಾಲನಾ ಪಥ (ಡ್ರೈವಿಂಗ್ ಟ್ರಾಕ್‌) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಕಂಪೌಂಡ್ ಹಾಗೂ ತಂತಿಬೇಲಿ ಹಾಕಲಾಗಿದೆ. ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ನಿವಾರಣೆಯ ಸಂಬಂಧ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಡ್ರೈವಿಂಗ್ ಟ್ರಾಕ್ ನಿರ್ಮಾಣವಾದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಆರ್‌ಟಿಒ ಜೆ.ಪಿ.ಗಂಗಾಧರ್ ಹೇಳಿದರು.

ಈಚೆಗೆ ಅಸಂಘಟಿತ ಕಾರ್ಮಿಕರಿಗೆ ಇ–ಶ್ರಮ್ ಯೋಜನೆಯಡಿ ನೋಂದಣಿ ಮಾಡಿಸಲಾಗಿದ್ದು, ಫಲಾನುಭವಿಗಳಿಗೆ ಅಪಘಾತಗಳಾದರೆ ₹ 2 ಲಕ್ಷದವರೆಗೂ ಪರಿಹಾರ ಸಿಗಲಿದೆ. ಮನ್‌ಧನ್ ಯೋಜನೆಯಡಿ 60 ವರ್ಷದೊಳಗಿನವರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಫಲಾನುಭವಿಗಳು ತಿಂಗಳಿಗೆ ₹ 55 ಪಾವತಿಸಿದರೆ 40 ವರ್ಷ ಪಾವತಿಸಿದ ಬಳಿಕ ಪ್ರತಿ ತಿಂಗಳು ₹ 3,000 ಪಿಂಚಣಿ ಸಿಗಲಿದೆ ಎಂದು ಮಾಹಿತಿ ನೀಡಿದರು.

ರಸ್ತೆ ಸುರಕ್ಷತೆ ಸಂಬಂಧ ಪ್ರೌಢ ಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ಅಪ್ರಾಪ್ತರು ವಾಹನಗಳನ್ನು ಓಡಿಸಿ ಅಪಘಾತಗಳಾದರೆ ಎದುರಾಗುವ ಕಾನೂನು ತೊಂದರೆಗಳನ್ನು ತಿಳಿಸಲಾಗಿದೆ ಎಂದು ಆರ್‌ಟಿಒ ಜೆ.ಪಿ.ಗಂಗಾಧರ್ ತಿಳಿಸಿದರು.

ಸ್ಮಾರ್ಟ್‌ ಕಾರ್ಡ್‌ ಬದಲು ಕಾಗದದ ಆರ್‌ಸಿ

ರಾಜ್ಯದಲ್ಲಿ ಸ್ಮಾರ್ಟ್‌ ಕಾರ್ಡ್‌ ವಿತರಣೆಯಲ್ಲಿ ಅವ್ಯವಹಾರ, ನಿಯಮ ಉಲ್ಲಂಘನೆಯಾಗಿದ್ದರಿಂದ ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಸ್ಮಾರ್ಟ್‌ಕಾರ್ಡ್‌ ಆರ್‌ಸಿ (ನೋಂದಣಿ ಪ್ರಮಾಣಪತ್ರ) ಬದಲಾಗಿ ಪೇಪರ್‌ ಆರ್‌ಸಿ ನೀಡುತ್ತಿದೆ. 2021ರ ನವೆಂಬರ್‌ನಿಂದ ಈ ನಿಯಮ ಜಾರಿಗೆ ಬಂದಿದೆ. ನೂತನ ಆರ್‌ಸಿಯಲ್ಲಿ ಕ್ಯೂಆರ್‌ ಕೋಡ್ ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆ ಇದ್ದು, ವಾಹನಗಳ ಮಾಲೀಕರು ಆರ್‌ಸಿ ಪ್ರಮಾಣಪತ್ರವನ್ನು ಲ್ಯಾಮಿನೇಷನ್‌ ಮಾಡಿಸಿಕೊಟ್ಟುಕೊಂಡು ಇರಿಸಿಕೊಳ್ಳಬೇಕು ಎಂದು ಆರ್‌ಟಿಒ ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಖಜಾಂಚಿ ಉಮೇಶ್ ಮಾರ್ಪಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.