ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲವನ್ನೂ ಬಿಟ್ಟು ಶಿಕ್ಷಣ ಸಂಸ್ಥೆಗಳ ಮುಚ್ಚುವುದೇಕೆ’-ಮೋಹನ್ ಆಳ್ವ

ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಅವರಿಗೆ ವಿಶ್ವಪ್ರಭಾ ಪುರಸ್ಕಾರ
Last Updated 4 ಏಪ್ರಿಲ್ 2021, 16:20 IST
ಅಕ್ಷರ ಗಾತ್ರ

ಉಡುಪಿ: ವಿದ್ಯಾರ್ಥಿಗಳು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದರೂ ಸರ್ಕಾರ ಕೋವಿಡ್ ಕಾರಣದಿಂದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸುತ್ತಿದೆ. ಮತ್ತೊಂದೆಡೆ ಸೋಂಕು ಹೆಚ್ಚು ಮಾರಕವಾಗುವ ಅಪಾಯವಿರುವ ಮದ್ಯ ಮಾರಾಟ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಟೀಕಿಸಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಭಾನುವಾರ ಸಮಾರೋಪಗೊಂಡ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ‘ವಿಶ್ವಪ್ರಭಾ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

‘ಸಭೆ, ಸಮಾರಂಭಗಳಲ್ಲಿ ಅಂತರ ಕಾಣುತ್ತಿಲ್ಲ. ಎಗ್ಗಿಲ್ಲದೆ ಮೋಜು ಮಸ್ತಿ ನಡೆಯುತ್ತಿದೆ. ರಾಜಕೀಯ ಸಮಾವೇಶಗಳಿಗೆ ಕಡಿವಾಣ ಇಲ್ಲದಂತಾಗಿದೆ. ಆದರೆ, ಸೋಂಕು ಹರಡುವ ಕಾರಣದಿಂದ ವಿದ್ಯಾಸಂಸ್ಥೆಗಳನ್ನು ಮಾತ್ರ ಮುಚ್ಚಲಾಗುತ್ತಿದೆ’ ಎಂದು ಆಳ್ವ ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ವರ್ಷ ವಿದ್ಯಾಕ್ಷೇತ್ರ ಬಂದ್ ಆದರೆ ಹೆಚ್ಚು ನಷ್ಟವಿಲ್ಲ ಎಂದು ಕೆಲವು ರಾಜಕಾರಣಿಗಳು ವಾದಿಸುತ್ತಾರೆ. ವಿದ್ಯಾರ್ಥಿಗಳಿಗೆ ಪ್ರಸ್ತುತ ಬೇಕಿರುವುದು ಶಿಕ್ಷಣವೇ ಹೊರತು ರಾಜಕೀಯವಲ್ಲ. ಬೇಕಿದ್ದರೆ ಒಂದು ವರ್ಷ ರಾಜಕೀಯ ಚಟುವಟಿಕೆಗಳು ಬಂದ್ ಮಾಡಲಿ’ ಎಂದು ಹೇಳಿದರು.

ಕಲೆ, ಸಂಸ್ಕೃತಿ, ಕ್ರೀಡೆಗೆ ವೇದಿಕೆಯಾಗಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯು ಸಣ್ಣ ವೈರಸ್‌ನಿಂದ ಸ್ತಬ್ಧವಾಗಿದೆ. ರಾಜ್ಯದಲ್ಲಿ ಒಂದು ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಸಾಮಾನ್ಯ ಸೋಂಕು ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಸೋಂಕಿಗೆ ಹೆದರಿ ಮನೆಯಲ್ಲಿ ಕೂರದೆ ಸೋಂಕನ್ನು ಎದುರಿಸಿ ಬದುಕಬೇಕಾಗಿದೆ ಎಂದರು.

ಪ್ರಸ್ತುತ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಹೆಚ್ಚಾಗುತ್ತಿದ್ದು, ಮಕ್ಕಳು ಪೋಷಕರ ಹಿಡಿತದಿಂದ ದೂರ ಸರಿಯುತ್ತಿರುವುದು ಹೆಚ್ಚುತ್ತಿದೆ. ಸಾಂಸ್ಕೃತಿಕ ಕಲೆಗಳನ್ನು ಜಾತಿಗಳಿಗೆ ಸೀಮಿತಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿಗಳ ವೈಭವೀಕರಣವೂ ಸಲ್ಲದು; ಜಾತಿಯ ಬಳಕೆ ಇತಿಮಿತಿಯಲ್ಲಿದ್ದರೆ ಒಳಿತು ಎಂದು ಆಳ್ವ ಸಲಹೆ ನೀಡಿದರು.

ಪ್ರೊ.ಎಂ.ಎಲ್‌.ಸಾಮಗ ಮಾತನಾಡಿ, ‘ಸಣ್ಣ ಸಾಂಸ್ಕೃತಿಕ ವಿಶ್ವವನ್ನು ಮೂಡುಬಿದರೆಯ ಆಳ್ವಾಸ್ ಸಂಸ್ಥೆಯಲ್ಲಿ ಸೃಷ್ಟಿಸಿದ ಸಾಧಕ ಹಾಗೂ ಉತ್ತರ ಕರ್ನಾಟಕದ ಮುಂಡಾಸಿಗೆ ಕರಾವಳಿಯಲ್ಲಿ ಮೌಲ್ಯ ತಂದುಕೊಟ್ಟ ಸಾಧಕ ಮೋಹನ್ ಆಳ್ವ’ ಎಂದರು.

ವೈದ್ಯಕೀಯ, ಸಾಮಾಜಿಕ ಶಿಕ್ಷಣ, ಯೋಗ, ನ್ಯಾಚುರೋಪತಿ, ಕರಾಟೆ, ಕ್ರೀಡೆ, ಸಂಸ್ಕೃತಿ ಹೀಗೆ ಎಲ್ಲವೂ ಆಳ್ವಾಸ್‌ ಪರಿಸರದಲ್ಲಿ ಕಾಣಬಹುದು. ಆಳ್ವಾಸ್ ನುಡಿಸಿರಿ ಹಾಗೂ ವಿರಾಸತ್‌ ಸಾಂಸ್ಖೃತಿಕ ವೈವಿಧ್ಯಗಳ ತಾಣ ಎಂದು ಶ್ಲಾಘಿಸಿದರು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ರಂಗಾಯಣ ಶಿವಮೊಗ್ಗ ನಿರ್ದೇಶಕ ಸಂದೇಶ್ ಜವಳಿ,ವಿಶ್ವಪ್ರಭ ಪುರಸ್ಕಾರ ಸಮಿತಿಯ ಸಂಚಾಲಕ ನಾಗರಾಜ್ ಹೆಬ್ಬಾರ್, ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಎಚ್‌.ಪಿ.ರವಿರಾಜ್‌, ಕಲಾ ಪೋಷಕರಾದ ಯು.ವಿಶ್ವನಾಥ್‌ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಶಿವಮೊಗ್ಗ ರಂಗಾಯಣದ ‘ಹಕ್ಕಿಕಥೆ’ ಮಕ್ಕಳ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT