ಬುಧವಾರ, ಮಾರ್ಚ್ 3, 2021
30 °C
ಮಧ್ವ ಸರೋವರದಲ್ಲಿ ಅವಭೃತ ಸ್ನಾನ: ಹಗಲು ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ

ಸಪ್ತೋತ್ಸವ ಸಂಪನ್ನ: ಬ್ರಹ್ಮ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪರ್ಯಾಯ ಅದಮಾರು ಮಠದ ನೇತೃತ್ವದಲ್ಲಿ ಕೃಷ್ಣಮಠದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಸಪ್ತೋತ್ಸವವು ಶುಕ್ರವಾರ ನಡೆದ ಹಗಲು ರಥೋತ್ಸವ ಹಾಗೂ  ಚೂರ್ಣೋತ್ಸವದೊಂದಿಗೆ ಸಂಪನ್ನವಾಯಿತು. ಕೋವಿಡ್‌ನಿಂದಾಗಿ ಕಳೆಗುಂದಿದ್ದ ಕೃಷ್ಣಮಠದ ಪರಿಸರ ಭಕ್ತರಿಂದ ತುಂಬಿ ತುಳುಕಿತು. ಭಕ್ತರು ಶ್ರದ್ಧಾಭಕ್ತಿಯಿಂದ ತೇರು ಎಳೆದು ದೇವರನ್ನು ಸ್ಮರಿಸಿದರು.

ಶುಕ್ರವಾರ ಬೆಳಿಗ್ಗೆ 8ಕ್ಕೆ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಸ್ವರ್ಣದ ಪಲ್ಲಕ್ಕಿಯಲ್ಲಿಟ್ಟು ಹೊರಗೆ ತರಲಾಯಿತು. ಈ ಸಂದರ್ಭ ಮಂಗಳವಾದ್ಯ, ಚೆಂಡೆ ಸದ್ದು, ಭಕ್ತರ ಜಯಘೋಷ ಮೇಳೈಸಿತು. ಬಳಿಕ ಉತ್ಸವ ಮೂರ್ತಿಗಳನ್ನು ಬ್ರಹ್ಮ ರಥದಲ್ಲಿಟ್ಟು ಹಗಲು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಪರ್ಯಾಯ ಅದಮಾರು ಮಠ ಈಶಪ್ರಿಯ ತೀರ್ಥ ಸ್ವಾಮೀಜಿ, ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಪೂಜೆ ಸಲ್ಲಿಸಿದರು. ಬಳಿಕ ದೇವರಿಗೆ ಪ್ರಸಾದ ನೈವೇದ್ಯ ಮಾಡಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಅಷ್ಟಮಠದ ಯತಿಗಳು ರಥೋತ್ಸವದಲ್ಲಿ ಭಾಗವಹಿಸಿ ತೇರು ಎಳೆದರು.

ರಥೋತ್ಸವದ ನಂತರ ಕೃಷ್ಣ ಮುಖ್ಯಪ್ರಾಣ ಮೂರ್ತಿಗಳನ್ನು ಮಠಕ್ಕೆ ತಂದು ಮಧ್ವ ಮಂಟಪದಲ್ಲಿ ವಾಲಗ ಮಂಟಪ ಪೂಜೆ ಮಾಡಲಾಇತು. ಉತ್ಸವದ ಕೊನೆಯಲ್ಲಿ  ಮಠಾಧೀಶರು ಕೃಷ್ಣನ ಉತ್ಸವ ಮೂರ್ತಿಗೆ ಓಕಳಿ ಅರ್ಪಿಸಿ ಮಧ್ವ ಸರೋವರದಲ್ಲಿ ಅವಭೃತ ಸ್ನಾನ ಮಾಡಿದರು. ಭಕ್ತರೂ ಮಧ್ವಸರೋವರದಲ್ಲಿ ಮಿಂದರು.‌

ಚೂರ್ಣೋತ್ಸವದ ಪ್ರಯುಕ್ತ ಭಕ್ತರ ಅನ್ನಪ್ರಸಾದಕ್ಕಾಗಿ ತಯಾರಿಸಲಾಗಿದ್ದ ಅನ್ನದ ರಾಶಿಗೆ ಈಶಪ್ರಿಯ ತೀರ್ಥ ಸ್ವಾಮೀಜಿ ಪಲ್ಲಪೂಜೆ ನಡೆಸಿದರು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು