ಮಡಿವಂತಿಕೆ, ಮೌಢ್ಯ ಮೀರಿನಿಂತ ಸ‌ಂತ

7
ಬಹುಮುಖ ವ್ಯಕ್ತಿತ್ವದ ಶಿರೂರು ಶ್ರೀಗಳು ಇನ್ನಿಲ್ಲ; ಕಂಬನಿ ಮಿಡಿದ ಭಕ್ತವೃಂದ

ಮಡಿವಂತಿಕೆ, ಮೌಢ್ಯ ಮೀರಿನಿಂತ ಸ‌ಂತ

Published:
Updated:

ಉಡುಪಿ: ಯತಿಗಳು ಹೀಗೆಯೇ ಬದುಕುಬೇಕು ಎಂಬ ಧಾರ್ಮಿಕ ಚೌಕಟ್ಟನ್ನು ಮೀರಿದವರು ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ. ಪೂಜೆ, ಧ್ಯಾನ, ಪ್ರವಚನಕ್ಕಿಂತ ಹೆಚ್ಚಾಗಿ, ಭಕ್ತರ ಜತೆಗಿನ ಅವರ ಒಡನಾಟ, ಆಪ್ತತೆ, ಜಾತ್ಯತೀತ ನಿಲುವುಗಳು ಅಷ್ಟಮಠಗಳ ಇತರ ಯತಿಗಳ ಪೈಕಿ ಶಿರೂರು ಶ್ರೀಗಳು ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದವು.

ಮಧ್ವ ಪರಂಪರೆಯ ಕಟ್ಟುಪಾಡುಗಳನ್ನು ಧಿಕ್ಕರಿಸಿದ್ದ ಆರೋಪವೂ ಅವರ ಮೇಲಿತ್ತು. ಮಡಿವಂತಿಕೆಯನ್ನು ಮುರಿದ ಅವರ ಮೇಲೆ ಟೀಕೆಗಳ ಮಳೆಯನ್ನೇ ಸುರಿಸಲಾಯಿತು. ಆದರೆ, ಇದ್ಯಾವುದಕ್ಕೂ ಜಗ್ಗದೆ, ಬದುಕಿದ್ದ ಕಾಲದವರೆಗೂ ತಮ್ಮ ಆದರ್ಶಗಳಿಗೆ ಗಟ್ಟಿಯಾಗಿ ನಿಂತಿದ್ದರು. ಅಧ್ಯಾತ್ಮದ ಬದುಕಿಗೆ ಸೀಮಿತರಾಗದೆ, ಲೌಕಿಕ ಬದುಕಿನ ಬಗ್ಗೆಯೂ ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು.

ಮನಸ್ಸಿಗೆ ಅನಿಸಿದ್ದನ್ನು ನಿಷ್ಠುರವಾಗಿ ಹೇಳುವಷ್ಟು ಹಾಗೂ ಕೃತಿಗೆ ಇಳಿಸುವಷ್ಟು ಗಟ್ಟಿತನ ಅವರಲ್ಲಿತ್ತು. ಯಾರು, ಏನ‌ಂದುಕೊಂಡಾರೋ ಎಂಬ ಅಳಕು ಸಾಸಿವೆಯಷ್ಟೂ ಅವರಲ್ಲಿರಲಿಲ್ಲ. ಹಾಗಾಗಿಯೇ ಕೆಲವರ ಪಾಲಿಗೆ ಅವರು ‘ನುಂಗಲಾರದ ಬಿಸಿತುಪ್ಪ’ವಾಗಿದ್ದರು ಎಂದು ಅವರೊಂದಿಗೆ ಒಡನಾಡಿದ ಆಪ್ತರು ಹೇಳುತ್ತಾರೆ.

ಶ್ರೀಕೃಷ್ಣ ಮಠದಲ್ಲಿ ನಡೆಯುವ ಪ್ರತಿ ಪರ್ಯಾಯದ ಅವಧಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ, ಪರ್ಯಾಯ ಮಠಾಧೀಶರ ಆಪ್ತರನ್ನೊ ಅಥವಾ ಬ್ರಾಹ್ಮಣ, ಗೌಡ ಸಾರಸ್ವತ ಸಮಾಜದವರನ್ನು ನೇಮಕ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಕಳೆದ ಬಾರಿಯ ಶಿರೂರು ಶ್ರೀಗಳ ಪರ್ಯಾಯದ ಸಂದರ್ಭ ಈ ಪದ್ಧತಿಗೆ ಎಳ್ಳುನೀರು ಬಿಡಲಾಗಿತ್ತು.

‘ಕೆಳಜಾತಿಯ ನನ್ನನ್ನು ಪರ್ಯಾಯ ಅವಧಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಶಿರೂರು ಶ್ರೀಗಳು ಎಲ್ಲ ಜಾತಿಗಳ ಪರ ಇದ್ದೇನೆ ಹಾಗೂ ಜಾತ್ಯತೀತವಾಗಿದ್ದೇನೆ ಎಂದು ಸಾಬೀತುಪಡಿಸಿದ್ದರು’ ಎನ್ನುತ್ತಾರೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‌.

‘ಉಡುಪಿಗೆ ನೀರಿನ ಬರ ಎದುರಾದಾಗ ಶಿರೂರಿನಿಂದ ನೀರನ್ನು ಪಂಪ್‌ ಮಾಡುವಾಗ ಅಲ್ಲಿನ ರೈತರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭ ಅಲ್ಲಿನ ರೈತರ ಮನವೊಲಿಸಿ, ನೀರು ಪ್ರತಿಯೊಬ್ಬರಿಗೂ ಅವಶ್ಯ, ಅಡ್ಡಿ ಮಾಡಬೇಡಿ ಎಂದು ಉಡುಪಿಯ ಜನರಿಗೆ ಕುಡಿಯುವ ನೀರು ನೀಡಲು ಶ್ರಮಿಸಿದ್ದರು’ ಎಂದು ಮಧ್ವರಾಜ್ ಸ್ಮರಿಸಿದರು.

ಕಲಾರಾಧಕರಾಗಿದ್ದ ಶಿರೂರು ಶ್ರೀಗಳು ಡ್ರಮ್‌ ಬಾರಿಸುವುದರಲ್ಲಿ ನಿಷ್ಣಾತರು. ಪ್ರಖ್ಯಾತ ಡ್ರಮ್ಮರ್‌ ಶಿವಮಣಿಯ ಜತೆ ಆಪ್ತ ಒಡನಾಟ ಇಟ್ಟುಕೊಂಡಿದ್ದ ಶ್ರೀಗಳು, ತಮ್ಮ ಪರ್ಯಾಯದ ಅವಧಿಯಲ್ಲಿ ಶಿವಮಣಿ ಅವರನ್ನು ಕರೆಸಿ ರಾಜಾಂಗಣದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರು. ತಾವೂ ಮನದಣಿಯೇ ಡ್ರಮ್‌ ಬಾರಿಸಿ ಸಂತಸಪಟ್ಟಿದ್ದರು.

ಭರತನಾಟ್ಯ, ಯಕ್ಷಗಾನ, ಪ್ರವಚನ, ಹರಿಕಥೆ, ಭಾವಗೀತೆ, ಸುಗಮ ಸಂಗೀತ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ರಾಜಾಂಗಣದಲ್ಲಿ ಮೊದಲ ಬಾರಿಗೆ ಡ್ರಮ್‌ ಸದ್ದು ಕೇಳಿಸಿದ್ದು ಕೆಲವರ ಕಿವಿಗೆ ಇಂಪು ನೀಡಿರಲಿಲ್ಲ. ಆದರೆ, ಭಕ್ತರು ಸ್ವಾಮೀಜಿಯ ಕಾರ್ಯಗಳನ್ನು ಮನಸಾರೆ ಒಪ್ಪಿಕೊಂಡಿದ್ದರು ಎನ್ನುತ್ತಾರೆ ಮಠದ ಆಪ್ತವಲಯದವರು.

ಶಿರೂರು ಶ್ರೀಗಳಿಗೆ ಹುಲಿವೇಷಧಾರಿಗಳು ಎಂದರೆ ಎಲ್ಲಿಲ್ಲದ ಪ್ರೀತಿ. ವಿಟ್ಲಪಿಂಡಿ ಉತ್ಸವ ನಡೆಸುವ ಸಂದರ್ಭ ಮಠದ ಮುಂಭಾಗವೇ ವೇದಿಕೆಯನ್ನು ನಿರ್ಮಿಸಿ ಹುಲಿ ಕುಣಿತಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಖುದ್ದು ಕುಣಿತವನ್ನು ಆಸ್ವಾದಿಸಿ, ಪ್ರತಿಯಾಗಿ ಹುಲಿವೇಷಧಾರಿಗಳಿಗೆ ಸಾವಿರಾರು ರೂಪಾಯಿಗಳ ನೋಟಿನ ಮಾಲೆಯನ್ನು ಹಾಕಿ ಕಲಾವಿದರನ್ನು ಹುರಿದುಂಬಿಸುತ್ತಿದ್ದರು.

‘ರಥೋತ್ಸವಗಳು ನಡೆಯುವಾಗ ಶ್ರೀಗಳು ಎಸೆಯುವ ನಾಣ್ಯ, ಫಲವಸ್ತುಗಳಿಗೆ ಭಕ್ತರು ಮುಗಿಬೀಳುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತೆ ಇದೆ’ ಎನ್ನುತ್ತಾರೆ ಭಕ್ತರಾದ ಶ್ರೀಧರ ಹೆಗಡೆ. ಉತ್ತಮ ಈಜುಪಟುವಾಗಿದ್ದ ಯತಿಗಳು, ಸಮುದ್ರದಲ್ಲಿ ಗಂಟೆಗಟ್ಟಲೆ 
ಮೀಯುತ್ತಿದ್ದರು. ಜನರ ಮಧ್ಯೆ ಎಂದಿಗೂ ಅಂತರವನ್ನು ಕಾಯ್ದುಕೊಳ್ಳದೆ, ಸದಾ ಹಸನ್ಮುಖಿಯಾಗಿರುತ್ತಿದ್ದ ಶ್ರೀಗಳು ಇನ್ನಿಲ್ಲ ಎಂಬ ಸತ್ಯವನ್ನು ಭಕ್ತರು ಅರಗಿಸಿಕೊಳ್ಳುತ್ತಿಲ್ಲ.

‘ಸಂಗೀತ ಪ್ರೇಮಿ ಶ್ರೀಗಳು‌’

ವೀಣೆ, ಗಿಟಾರ್ ನುಡಿಸುವುದರಲ್ಲೂ ಪ್ರವೀಣರಾಗಿದ್ದ ಶಿರೂರು ಶ್ರೀಗಳು ಅವಕಾಶ ಸಿಕ್ಕಾಗಲೆಲ್ಲ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದರು. ಶಿರೂರು ಮಠದಲ್ಲಿ ಬೃಹತ್ ಕೀ ಬೋರ್ಡ್, ಡ್ರಮ್ ಸೆಟ್‌, ವೀಣೆ ಹಾಗೂ ಸಂಗೀತ ಪರಿಕರಗಳ ದೊಡ್ಡ ಸಂಗ್ರಹವನ್ನೇ ಇಟ್ಟುಕೊಂಡಿರುವುದು ಅವರ ಸಂಗೀತ ಪ್ರೇಮಕ್ಕೆ ನಿದರ್ಶನ.

ಇದೇ ಜೂನ್‌ನಲ್ಲಿ ಶಿರೂರು ಮೂಲಮಠದಲ್ಲಿ ವಿಶ್ವಮಟ್ಟದ ಸಂಗೀತ ಶಾಲೆಯನ್ನು ಪ್ರಾರಂಭಿಸಲು ಶ್ರೀಗಳು ಶಿಲಾನ್ಯಾಸ ನೆರವೇರಿಸಿದ್ದರು. ಶಿವಮಣಿ ಕೂಡ ಜತೆಗಿದ್ದು, ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಕುರಿತು ಚರ್ಚಿಸಿದ್ದರು. ಆದರೆ, ಸಂಗೀತ ಶಾಲೆ ಪ್ರಾರಂಭವಾಗುವ ಮುನ್ನವೇ ಶ್ರೀಗಳು ಅದೇ ಜಾಗದಲ್ಲಿ ವೃಂದಾವನಸ್ಥರಾಗಿದ್ದು ವಿಪರ್ಯಾಸ.

ಇನ್ನಷ್ಟು ಸುದ್ದಿಗಳು...

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶ

ಲಕ್ಷ್ಮೀವರ ತೀರ್ಥರ ದೇಹದಲ್ಲಿ ವಿಷದ ಅಂಶ: ಪೊಲೀಸರಿಗೆ ಮಾಹಿತಿ

ಉಡುಪಿ ಶೀರೂರು ಮಠದ ಲಕ್ಷ್ಮೀವರ ತೀರ್ಥರಿಗೆ ಭಿನ್ನಾಭಿಪ್ರಾಯವೇ ಮುಳುವಾಯ್ತೇ?

ಶ್ರೀಗಳ ದೇಹದಲ್ಲಿ ವಿಷ ಹೇಗೆ ಬಂತು: ಈಶ ವಿಠಲದಾಸ ಸ್ವಾಮೀಜಿ ಪ್ರಶ್ನೆ

ಶೀರೂರು ಶ್ರೀಗಳಿಗೆ ವಿಷಪ್ರಾಶನದ ಅನುಮಾನವಿಲ್ಲ: ಪೇಜಾವರ ಶ್ರೀ

ಅಸಹಜ ಸಾವೆಂಬ ಅನುಮಾನ ವ್ಯಕ್ತವಾದಲ್ಲಿ ತನಿಖೆಗೆ ಆದೇಶ: ಕುಮಾರಸ್ವಾಮಿ

ಶೀರೂರು ಮಠದ ಲಕ್ಷ್ಮೀವರ ತೀರ್ಥರ ಬದುಕಿನ ಹಾದಿ...

ಶಿರೂರು ಸ್ವಾಮೀಜಿ ಏಕೆ ವಿರೋಧ ಕಟ್ಟಿಕೊಂಡಿದ್ದರು?

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !