ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯಿತು ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಕ್ಕಳು ನಿರಾಳ

ಕೊನೆ ದಿನ 12,812 ವಿದ್ಯಾರ್ಥಿಗಳು ಹಾಜರು: ಪರೀಕ್ಷಾ ಯಶಸ್ಸಿಗೆ ಡಿಡಿಪಿಐ ಧನ್ಯವಾದ
Last Updated 4 ಜುಲೈ 2020, 4:59 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸೋಂಕಿನ ಭಯದ ನಡುವೆಯೂ ಜಿಲ್ಲೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯಿತು. ಕೊನೆಯ ದಿನ ವಿದ್ಯಾರ್ಥಿಗಳು ತೃತೀಯ ಭಾಷಾ ವಿಷಯದ ಪರೀಕ್ಷೆ ಬರೆದರು.

ಜಿಲ್ಲೆಯಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದ 13,603 ವಿದ್ಯಾರ್ಥಿಗಳ ಪೈಕಿ 12,812 ಮಕ್ಕಳು ಪರೀಕ್ಷೆ ಬರೆದರು. 110 ವಿದ್ಯಾರ್ಥಿಗಳು ಗೈರಾಗಿದ್ದರು. ಹೊರ ಜಿಲ್ಲೆಗಳಲ್ಲಿ 587 ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಹಾಜರಾತಿ ಕೊರತೆ ಕಾರಣದಿಂದ 94 ಮಕ್ಕಳು ಪರೀಕ್ಷೆ ಬರೆಯಲಿಲ್ಲ.

ಕಂಟೈನ್‌ಮೆಂಟ್‌ ವಲಯಗಳಿಂದ ಬಂದಿದ್ದ 10 ಹಾಗೂ ಅನಾರೋಗ್ಯದ ಲಕ್ಷಣಗಳಿದ್ದ 18 ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರು. ಗ್ರಾಮೀಣ ಹಾಗೂ ಇತರೆ ಭಾಗಗಳಿಂದ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು 82 ಬಸ್‌ಗಳನ್ನು ಬಳಸಿಕೊಳ್ಳಲಾಗಿತ್ತು.

ಕೊನೆಯ ದಿನ ಪರೀಕ್ಷೆ ಬರೆದ ಮಕ್ಕಳು ಸಂತಸದಿಂದ ಮನೆಯ ಕಡೆಗೆ ಹೆಜ್ಜೆಹಾಕಿದರು. ಪ್ರತಿಯೊಬ್ಬರೂ ಅಂತರ ಕಾಯ್ದುಕೊಂಡು ಕೇಂದ್ರದಿಂದ ಹೊರಬಂದ ದೃಶ್ಯ ವಿಶೇಷವಾಗಿತ್ತು.

ಪರೀಕ್ಷೆ ಬರೆದ ಬಳಿಕ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಶಾಲೆಯ ವರ್ಷಾ ಮಾತನಾಡಿ, ಪರೀಕ್ಷೆ ಆರಂಭಕ್ಕೂ ಮುನ್ನ ಕೊರೊನಾ ಭಯವಿತ್ತು. ಪರೀಕ್ಷಾ ಕೊಠಡಿಗಳು ಶುಚಿಯಾಗಿರುತ್ತವೊ ಇಲ್ಲವೊ, ಭಯದಲ್ಲಿ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬ ಆತಂಕವಿತ್ತು. ಕೇಂದ್ರಕ್ಕೆ ಬಂದ ಬಳಿಕ ಮನಸ್ಸು ಹಗುರವಾಯಿತು. ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಸ್ಯಾನಿಟೈಸರ್ ಹಾಕಿದರು, ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಇತ್ತು ಎಂದು ಸಂತಸ ಹಂಚಿಕೊಂಡರು.

ವಿದ್ಯಾರ್ಥಿನಿ ದೀಪಿಕಾ ಮಾತನಾಡಿ, ಪರೀಕ್ಷಾ ಕೇಂದ್ರದ ಶೌಚಾಲಯಗಳು ಶುಚಿಯಾಗಿದ್ದವು. ಅಗತ್ಯ ವ್ಯವಸ್ಥೆ ಮಾಡಲಾಗಿತ್ತು ಎಂದರು. ಕಾಳಾವರದ ಶಾಲೆಯ ವಿದ್ಯಾರ್ಥಿ ಮಂಜುನಾಥ್, ಕೋಟೇಶ್ವರದ ಫಿದಾ ಅಂಜುಮ್ ಮಾತನಾಡಿ, ನಿರೀಕ್ಷೆಗೂ ಮೀರಿ ಶಿಕ್ಷಣ ಇಲಾಖೆ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿದ್ದು ಖುಷಿತಂದಿದೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿರುವುದು ನೆಮ್ಮದಿ ತಂದಿದೆ ಎಂದರು.

ಅಶ್ವಿತಾ ವಕ್ವಾಡಿ, ಕೋಟೇಶ್ವರದ ಫಾತಿಮಾ, ತೆಕ್ಕಟ್ಟೆಯ ವಿಘ್ನೇಶ್‌, ಬೀಜಾಡಿಯ ಸಾತ್ವಿಕ್, ವ ಮಾತನಾಡಿ, ಪರೀಕ್ಷೆಗೂ ಮುನ್ನ ಬಹಳಷ್ಟು ಆತಂಕ ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ‘ಜೀವ ಮುಖ್ಯವೇ, ಜೀವನ ಮುಖ್ಯವೇ ಎಂದೆಲ್ಲ ಭಯ ಹುಟ್ಟಿಸಲಾಗಿತ್ತು. ಶಿಕ್ಷಣ ಇಲಾಖೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು ಯಾವ ಕೊರತೆಯೂ ಕಾಣಲಿಲ್ಲ. ಪರೀಕ್ಷೆ ಮಾಡದಿದ್ದರೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗುತ್ತಿತ್ತು. ಪರೀಕ್ಷೆ ಬರೆದ ಬಳಿಕ ಮನಸ್ಸು ನಿರಾಳವಾಗಿದೆ ಎಂದರು.

ನಿಮಗಿದೋ ಧನ್ಯವಾದ..

‘ಈ ಬಾರಿ ಹಿಂದಿನಂತಿರಲಿಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷೆ,

ಒಂದಷ್ಟು ಧಾವಂತ, ಚಡಪಡಿಕೆ, ಗೊಂದಲ ಭಯಮಿಶ್ರಿತ ವಾತಾವರಣವಿತ್ತು.ಆದರೆ, ಎಲ್ಲರಸಹಕಾರದಿಂದ ಪರೀಕ್ಷೆ ನಡೆಯಿತು. ಪರೀಕ್ಷಾ ಯಶಸ್ಸಿಗೆ ಕಾರಣಕರ್ತರಾದಪೋಷಕರಿಗೆ, ಪ್ರೀತಿಯಿಂದ ಮಕ್ಕಳನ್ನು ಕರೆತಂದ ರಿಕ್ಷಾ ಚಾಲಕರಿಗೆ, ಮಾಲೀಕರಿಗೆ, ನೆರೆಹೊರೆಯ ಮನೆಯವರಿಗೆ, ಹೋರಾಟದ ಹಾದಿಯನ್ನು ಸುಗಮಗೊಳಿಸಿದ ಆರೋಗ್ಯ ಕೇಂದ್ರದ ಶುಶ್ರೂಷಕಿಯರಿಗೆ,ಆಶಾ ಕಾರ್ಯಕರ್ತೆಯರು, ಸ್ಕೌಟ್ಸ್‌ ಮತ್ತು ಗೈಡ್ಸ್‌ವಿದ್ಯಾರ್ಥಿಗಳಿಗೆ, ಪೊಲೀಸರಿಗೆ,ಶಿಕ್ಷಕರಿಗೆ,ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ,ಮಾಧ್ಯಮ ಮಿತ್ರರಿಗೆ,ಕೊಡೆಯನ್ನೇ ಹಿಡಿಯದಂತೆ ಮಾಡಿದ ವರುಣದೇವನಿಗೆ ಅಭಿನಂದನೆಗಳು. ಕೊರೊನಾಮುಗಿದಿಲ್ಲ. ನಮ್ಮ ಹೋರಾಟ ಕೂಡ ಮುಗಿದಿಲ್ಲ’ ಎಂದು ಡಿಡಿಪಿ ಶೇಷಶಯನ ಕಾರಿಂಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT