ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿ: ಜನ್ಸಾಲೆ ನಿರ್ಗಮನ

Last Updated 25 ನವೆಂಬರ್ 2021, 3:54 IST
ಅಕ್ಷರ ಗಾತ್ರ

ಕುಂದಾಪುರ/ ಹಿರಿಯಡಕ: ಪೆರ್ಡೂರುಅನಂತಪದ್ಮನಾಭ ಯಕ್ಷಗಾನ ಮಂಡಳಿಯ ಈ ವರ್ಷದ ತಿರುಗಾಟಕ್ಕೆ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ ಅವರು ಮತ್ತೆ ರಂಗಸ್ಥಳ ಏರಲಿದ್ದಾರೆ.

ಬಡಗುತಿಟ್ಟಿನ ಪ್ರಸಿದ್ಧ ಡೇರೆ ಮೇಳಗಳಲ್ಲಿ ಒಂದಾದ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿ ಈ ವರ್ಷದ ತಿರುಗಾಟಕ್ಕೆ ಸಂಪೂರ್ಣ ತಯಾರಿ ನಡೆಸಿದ್ದು, ಕೆಲವೊಂದು ಮುಮ್ಮೇಳ ಕಲಾವಿದರ ಬದಲಾವಣೆ ನಡೆಸಿತ್ತು. ಆದರೆ, ‘ತಿರುಗಾಟ ಪ್ರಾರಂಭಕ್ಕೆ ಕೆಲವೇ ದಿನ ಇದೆ’ ಎನ್ನುವಾಗ ಕಳೆದ 9 ವರ್ಷಗಳಿಂದ ಮೇಳದ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ನಿರ್ಗಮಿಸಿದ್ದು, ಈ ತಿರುಗಾಟದಿಂದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ ಅವರು ಮತ್ತೆ ಪ್ರಧಾನ ಭಾಗವತ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಪ್ರಧಾನ ಭಾಗವತಿಕೆ ಹಾಗೂ ದಕ್ಷ ನಿರ್ದೇಶನದೊಂದಿಗೆ ಪೆರ್ಡೂರು ಮೇಳದ ಶಿವಾನಿ-ಭವಾನಿ, ನಾಗವಲ್ಲಿ, ದಾಮಿನಿ-ಭಾಮಿನಿ, ಸಾವನಿ-ಪಾವನಿ, ಹೀಗೆ ಅನೇಕ ಯಶಸ್ವಿ ಸಾಮಾಜಿಕ ಹಾಗೂ ಪೌರಾಣಿಕ ಪ್ರಸಂಗಗಳು ಯಶಸ್ವಿಯಾಗಲು ಕಾರಣ
ರಾದ ಧಾರೇಶ್ವರರು 9 ವರ್ಷಗಳ ಹಿಂದೆ ಪೆರ್ಡೂರು ಮೇಳದಿಂದ ನಿರ್ಗಮಿಸಿ, ಕೇವಲ ಅತಿಥಿ ಕಲಾವಿದರಾಗಿ ಹಾಗೂ ಧಾರೇಶ್ವರ ಯಕ್ಷಬಳಗdಲ್ಲಿ ಭಾಗವಹಿಸುತ್ತಿದ್ದರು.

ಅವರ ಸ್ಥಾನಕ್ಕೆ ಬಡಗುತಿಟ್ಟಿನ ಭಾಗವತ, ಅಸಂಖ್ಯಾತ ಅಭಿಮಾನಿ
ಗಳನ್ನು ಹೊಂದಿರುವ ಜನ್ಸಾಲೆ ಮೇಳದ ಯಶಸ್ಸಿಗೆ ಕಾರಣರಾಗಿದ್ದರು. ಇದೀಗ ಅವರು ದಿಢೀರ್ ನಿರ್ಗಮಿಸಿದ್ದಾರೆ. ನವೆಂಬರ್ 30 ರಂದು ಪೆರ್ಡೂರು ಮೇಳದ ಈ ವರ್ಷದ ತಿರುಗಾಟ ಆರಂಭವಾಗಲಿದ್ದು, ಈ ಬಾರಿ ಪ್ರಸಂಗಕರ್ತ ಪವನ್ ಕಿರಣಕೆರೆ ಅವರ ‘ಕೃಷ್ಣ ಕಾದಂಬಿನಿ’ ಪ್ರಸಂಗದೊಂದಿಗೆ ಪೌರಾಣಿಕ ಪ್ರಸಂಗಗಳು ಪ್ರದರ್ಶನವಾಗಲಿದೆ.

ಮೇಳದ ನೂತನ ಪ್ರಸಂಗದ ಕರಪತ್ರಗಳಲ್ಲಿ ಜನ್ಸಾಲೆಯವರ ಭಾವಚಿತ್ರ ಹಾಗೂ ಹೆಸರನ್ನು ನಮೂದಿಸಲಾಗಿತ್ತು. ಇದೀಗ ನಡೆದ ಅಚ್ಚರಿಯ ಬೆಳವಣಿಗೆ ಬಳಿಕ ಧಾರೇಶ್ವರ ಅವರ ಭಾವಚಿತ್ರ ಹಾಗೂ ಹೆಸರನ್ನು ನಮೂದಿಸಲಾಗಿದೆ. 9 ವರ್ಷಗಳ ಬಳಿಕ ಧಾರೇಶ್ವರ ಅವರು ಮತ್ತೆ ಪೆರ್ಡೂರು ಮೇಳಕ್ಕೆ ಭಾಗವತರಾಗಿ ರಂಗಸ್ಥಳ ಏರುವುದು ಯಕ್ಷ ಅಭಿಮಾನಿಗಳಲ್ಲಿ ಖುಷಿಯ ವಿಚಾರವಾದರೆ, ಜನ್ಸಾಲೆಯವರು ಮೇಳದಿಂದ ದಿಢೀರ್ ನಿರ್ಗಮಿಸಿರುವುದು ಅಚ್ಚರಿಗೂ ಕಾರಣವಾಗಿದೆ‌.

ಕರುಣಾಕರ ಶೆಟ್ಟರ ಆಹ್ವಾನದ ಮೇರೆಗೆ ಮತ್ತೆ ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸಲಿದ್ದೇನೆ ಎಂದು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರತಿಕ್ರಿಯಿಸಿದ್ದಾರೆ.

‘9 ವರ್ಷದಿಂದ ಪೆರ್ಡೂರು ಮೇಳದಲ್ಲಿ ಮಾಡಿರುವ ಕೆಲಸದಲ್ಲಿ ತೃಪ್ತಿ ಇದೆ. ಬೇರೆ ಮೇಳಗಳಿಂದ ಕರೆ ಬಂದಿದ್ದರೂ, ಈಗಾಗಲೇ ಕಲಾವಿದರ ಆಯ್ಕೆ ನಡೆದಿರುವುದರಿಂದ, ನನ್ನಿಂದಾಗಿ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವುದಕ್ಕಾಗಿ ಈ ವರ್ಷ ತಿರುಗಾಟ ಮಾಡುವುದಿಲ್ಲ. ಆದರೆ ಯಾವುದೇ ಪ್ರದರ್ಶನಕ್ಕೆ ಪ್ರೀತಿಯಿಂದ ಕರೆ ಬಂದರೂ ಅತಿಥಿಯಾಗಿ ಭಾಗವತಿಕೆಗೆ ಹೋಗುತ್ತೇನೆ’ ಎಂದು ಜನ್ಸಾಲೆ ರಾಘವೇಂದ್ರ ಆಚಾರ್ಯ ಪ್ರತಿಕ್ರಿಯಿಸಿದರು.

‘ತಿರುಗಾಟದ ಅವಧಿಯಲ್ಲಿ ನಾವ್ಯಾರೂ ಬೇರೆ ಖಾಸಗಿ ಪ್ರದರ್ಶನಗಳಿಗೆ ಹೋಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಕಲಾವಿದರು ಹಾಗೂ ಯಜಮಾನರ ನಡುವೆ ನಡೆದ ಸಭೆಯಲ್ಲಿ ನಾವೆಲ್ಲ ಒಪ್ಪಿದ್ದೇವೆ’ ಎಂದು ಕಲಾವಿದರಾದ ವಿದ್ಯಾಧರ ರಾವ್ ಜಲವಳ್ಳಿ ಹಾಗೂ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಪ್ರತಿಕ್ರಿಯಿಸಿದ್ದಾರೆ.

ಧಾರೇಶ್ವರ ಅವರು ಪ್ರಧಾನ ಭಾಗವತರಾಗಿ ಮತ್ತೆ ಮೇಳದಲ್ಲಿ ಮುಂದುವರಿಯಲಿದ್ದಾರೆ ಎಂದು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT