ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಪಾದೇಕಲ್ಲು ವಿಷ್ಣು ಭಟ್ಟ, ಡಾ.ಎಸ್.ಡಿ.ಶೆಟ್ಟಿಗೆ ತಾಳ್ತಜೆ ಪ್ರಶಸ್ತಿ

Last Updated 2 ಸೆಪ್ಟೆಂಬರ್ 2021, 11:53 IST
ಅಕ್ಷರ ಗಾತ್ರ

ಉಡುಪಿ: 2020ನೇ ಸಾಲಿನ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿಗೆ ಸಾಹಿತಿ, ಸಂಶೋಧಕರಾದ ಡಾ.ಎಸ್.ಡಿ.ಶೆಟ್ಟಿ ಹಾಗೂ 2021ನೇ ಸಾಲಿನ ಪ್ರಶಸ್ತಿಗೆ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ.

ಸಾಹಿತ್ಯ, ಗಮಕ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ತಾಳ್ತಜೆ ಕೇಶವ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಹಾಗೂ ಮಾಹೆ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಡಾ.ಎಸ್‌.ಡಿ.ಶೆಟ್ಟಿ:ಡಾ.ಶಾಂತಿನಾಥ ದೀಪಣ್ಣ ಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲಿಕೇರಿಯವರು. ಧಾರವಾಡದಲ್ಲಿ ಎಂ.ಎ, ಡಿಪ್ಲೊಮಾ ಇನ್‌ ಎಫಿಗ್ರಫಿ ಪದವಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಮಂಗಳೂರು ವಿವಿಯಿಂದ ಪಿಎಚ್.ಡಿ ಪಡೆದಿದ್ದಾರೆ.

35 ವರ್ಷಗಳ ಕಾಲ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ರೀಡರ್, ಪ್ರೊಫೆಸರ್ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದಾರೆ. ಪ್ರಸ್ತುತ ಡಾ.ಹಾ.ಮಾ.ನಾ ಸಂಶೋಧನಾ ಕೇಂದ್ರ ಉಜಿರೆ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೋಧ-ಸಂಶೋಧನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ವರಾಂಗ, ವಿಜಯಮ್ಮ ಚರಿತ್ರೆ, ಧರ್ಮಸ್ಥಳ ಮಂಜಯ್ಯ ಹೆಗ್ಗಡೆ, ಜೈನರ ಹಬ್ಬಗಳು, ದಕ್ಷಿಣ ಕನ್ನಡ ಜಿಲ್ಲೆಯ ಜೈನ ಪರಂಪರೆ ಮತ್ತು ಅದರ ವಿಶಿಷ್ಟ ಸಂಪ್ರದಾಯ, ತುಳುನಾಡಿನ ಜೈನಧರ್ಮ ಸೇರಿದಂತೆ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿದ್ಯಾಪೀಠ ಪ್ರಶಸ್ತಿ, ಸಾಹಿತ್ಯ ದತ್ತಿನಿಧಿ ಪ್ರಶಸ್ತಿ, ಸಿದ್ಧಾಂತ ಕೀರ್ತಿ ಪ್ರಶಸ್ತಿಗಳು ಅವರಿಗೆ ಸಂದಿವೆ.

ಡಾ.ಪಾದೇಕಲ್ಲು ವಿಷ್ಣು ಭಟ್: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಪಾದೇಕಲ್ಲು ಕರೋಪಾಡಿಯಲ್ಲಿ ಜನಿಸಿದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮೈಸೂರು ವಿವಿಯಿಂದ ಎಂ.ಎ, ಮಂಗಳೂರು ವಿವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, ಹಿರಿಯಡಕದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಪ್ರಗಲ್ಭ, ಯಕ್ಷಗಾನ, ಛಂದಸ್ಸು, ವ್ಯಾಕರಣ, ಹಳೆಗನ್ನಡ ಕಾವ್ಯ, ಅನುವಾದ, ವಿಮರ್ಶೆ ಇತ್ಯಾದಿ ವಿಷಯಗಳ ಕುರಿತ ಉದ್ಗ್ರಂಥಗಳನ್ನು ಸಂಪಾದಿಸಿದ್ದಾರೆ. 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸೇಡಿಯಾಪು, ಪಂಡಿತವರೇಣ್ಯ, ಶ್ರೀಭಾಗವತೊ, ಸಾಹಿತ್ಯಾಧ್ಯಯನ, ಯಕ್ಷಗಾನ ಅಧ್ಯಯನ, ಸಂಶೋಧನ ತವನಿಧಿ, ಹಿರಿಯರಿವರು ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ವಿದ್ವತ್ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ರಾಮವಿಠಲ ಪ್ರಶಸ್ತಿಗಳು ಅವರಿಗೆ ಸಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT