ಮಂಗಳವಾರ, ಮಾರ್ಚ್ 2, 2021
29 °C
ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಹೇಳಿಕೆ

ಸಾವಿರ ಕೇಸ್‌ ಹಾಕಿದರೂ ಹೆದರುವುದಿಲ್ಲ: ಪ್ರಮೋದ್ ಮುತಾಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ಧರ್ಮ, ಸಂಸ್ಕೃತಿ ರಕ್ಷಣೆ ಮಾಡುತ್ತಿರುವ ಸನಾತನ ಸಂಸ್ಥೆ ಮೇಲೆ ಕೊಲೆ ಆರೋಪಗಳನ್ನು ಹೊರಿಸಲಾಗುತ್ತಿದೆ. ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತಿದೆ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯ ಬೋರ್ಡ್‌ ಹೈಸ್ಕೂಲ್‌ ಆವರಣದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡಿದರು.

ಹಿಂದೂಗಳ ನಂಬಿಕೆ, ದೇವರು, ಗ್ರಂಥ, ದೇವಸ್ಥಾನಗಳನ್ನು ಅಪಮಾನ ಮಾಡುತ್ತಿರುವ ಬುದ್ಧಿಜೀವಿಗಳು ಮುಸ್ಲಿಮರ ಹಾಗೂ ಕ್ರಿಶ್ಚಿಯನ್ನರ ಏಜೆಂಟರು. ಹಿಂದೂ ಧರ್ಮವನ್ನು ಅವಹೇಳನ ಮಾಡಲು ಬುದ್ದಿಜೀವಿಗಳು ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಸಾಕ್ಷ್ಯಗಳ ಸಮೇತ ಹೇಳುತ್ತೇನೆ ಎಂದು ವಾಗ್ದಾಳಿ ನಡೆಸಿದರು.

‘ನನ್ನ ಮೇಲೆ ಇದುವರೆಗೂ 109 ಕೇಸ್ ದಾಖಲಿಸಲಾಗಿದೆ. ಇಸ್ಪೀಟ್‌, ಜೂಜು, ಕುಡಿತ ಮಾಡಿದ್ದಕ್ಕೆ ಕೇಸ್ ಹಾಕಿಲ್ಲ; ಭಾಷಣ ಮಾಡಿದ್ದಕ್ಕೆ ಹಾಕಲಾಗಿದೆ. ಉಡುಪಿಯಲ್ಲಿ ಭಾಷಣ ಮಾಡಿದ್ದಕ್ಕೂ ಕೇಸ್‌ ಹಾಕಲಿ. ಸಾವಿರ ಕೇಸ್‌ಗಳನ್ನು ಹಾಕಿದರೂ ಹಿಂದೂ ದನಿಯನ್ನು ಅಡಗಿಸಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣ ಪ‍್ರಯತ್ನದಿಂದ ಹಿಂದೆ ಸರಿಯುವುದಿಲ್ಲ ಎಂದರು.

ಜಮ್ಮು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಹಿಂದೂಗಳನ್ನು ಹೊರಹಾಕಲಾಗಿದೆ. ಹಿಂದೂಗಳ ಪಾಲಿಗೆ ಕಾನೂನು ಇಲ್ಲ, ಪ್ರಜಾಪ್ರಭುತ್ವ ಇಲ್ಲ, ಸಂವಿಧಾನವೂ ನೆರವಿಗೆ ಬಂದಿಲ್ಲ ಎಂದು ಆರೋಪಿಸಿದರು.

ಮುಕ್ತಾನಂದ ಸ್ವಾಮೀಜಿ ಮಾತನಾಡಿ, ‘ಸನಾತನ ಸಂಸ್ಥೆ ಭಯೋತ್ಪಾದನಾ ಸಂಸ್ಥೆಯಲ್ಲ; ಹಿಂದೂಗಳಲ್ಲಿರುವ ಭಯವನ್ನು ನಿರ್ಮೂಲನೆ ಮಾಡಲು ಇರುವ ಸಂಸ್ಥೆ. ಹಿಂದೂ ರಾಷ್ಟ್ರ ಸ್ಥಾಪನೆಗೆ ನಾವೆಲ್ಲ ಕೈಜೋಡಿಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ನಿಜವಾಗಿಯೂ ಅಚ್ಛೇದಿನ್‌ ಬರಲಿದೆ ಎಂದರು.

ಕೇರಳದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ಕೆಲವು ಮಹಿಳೆಯರು ಹೋರಾಟ ಮಾಡಿದ್ದಾರೆ. ಅವರಿಗೆ ನಿಜವಾಗಿ ಮಹಿಳಾಪರ ಕಾಳಜಿ ಇದ್ದರೆ, ಕೇರಳದ ಮಸೀದಿ, ಚರ್ಚ್‌ಗಳಿಗೆ ಮಹಿಳೆಯರ ಪ್ರವೇಶಕ್ಕೆ ಹೋರಾಟ ಮಾಡಲಿ ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಮುಖಂಡ ಚಂದ್ರು ಮೊಗೆರ, ಲಕ್ಷ್ಮೀ ಪೈ ಅವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. 

‘ಭಗವಾನ್ ಅಲ್ಲ ಸೈತಾನ್‌’

‘ಈ ದೇಶದಲ್ಲಿ ಹುಟ್ಟಿ ರಾಮನ ಬಗ್ಗೆಯೇ ಅವಹೇಳನ ಮಾಡುತ್ತಿರುವ ಭಗವಾನ್‌ ಒಬ್ಬ ಸೈತಾನ್‌. ಸಿದ್ದರಾಮಯ್ಯ ಅವರ ಕ್ಲಾಸ್‌ಮೇಟ್‌ ಆಗಿರುವ ಕಾರಣ ಭಗವಾನ್‌ನನ್ನು ಬಂಧಿಸುತ್ತಿಲ್ಲ. ಎಷ್ಟು ಕೇಸ್‌ಗಳಿದ್ದರೂ ಮುಟ್ಟುತ್ತಿಲ್ಲ. ಆದರೆ, ನನ್ನ ಮೇಲೆ ಕೇಸ್‌ ದಾಖಲಾದರೆ ರಾತ್ರಿ 12ಗಂಟೆಗೆ ಪೊಲೀಸರು ಮನೆಗೆ ಬರುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಸಕರಿಗೆ ಶ್ಲಾಘನೆ

ಸರ್ಕಾರಿ ಶಾಲೆಯ ಆವರಣದಲ್ಲಿ ಧರ್ಮ ಸಭೆ ನಡೆಯುತ್ತಿದೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಶಾಲಾ ಮುಖ್ಯಸ್ಥರಿಗೆ ನೋಟಿಸ್‌ ನೀಡಬಹುದು. ಈ ಕಾರ್ಯಕ್ರಮಕ್ಕೆ ಅನುಮತಿ ದೊರೆತಿದ್ದು ಶಾಸಕರಾದ ಹಾಗೂ ಶಾಲಾ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ರಘುಪತಿ ಭಟ್ ಅವರಿಂದ. ಇಂಥ ಶಾಸಕರು ಹೆಚ್ಚಾಗಬೇಕು ಎಂದು ಪ್ರಮೋದ್ ಮುತಾಲಿಕ್‌ ಶ್ಲಾಘಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು