ಗುರುವಾರ , ಫೆಬ್ರವರಿ 25, 2021
29 °C

ಹೆಜಮಾಡಿ ಒಳರಸ್ತೆಗೂ ಟೋಲ್: ಟೋಲ್‌ ಸೋರಿಕೆ ತಡೆದ ನವಯುಗ ಮುಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಪಡುಬಿದ್ರಿ: ಹೆಜಮಾಡಿಯ ಟೋಲ್‌ಗೇಟ್‌ನಲ್ಲಿ ಟೋಲ್‌ಸೋರಿಕೆಯಾಗುವ ಹಿನ್ನಲೆಯಲ್ಲಿ ಹೆಜಮಾಡಿ ಒಳರಸ್ತೆಯಲ್ಲಿ ಸಂಚರಿಸಿ ಸಾಗುವ ವಾಹನಗಳಿಂದ ಟೋಲ್ ಸಂಗ್ರಹ ಶನಿವಾರದಿಂದ ಆರಂಭಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬಸ್ತಿಪಡ್ಪು ಕ್ರೀಡಾಂಗಣದ ಬಳಿ ಟೋಲ್ ಸಂಗ್ರಹ ಕೇಂದ್ರ ಆರಂಭಿಸಿತ್ತು. ಆದರೆ ಹೆಚ್ಚಿನ ವಾಹನಗಳು ಟೋಲ್‌ಗೇಟ್ ತಪ್ಪಿಸಿ ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ತಪ್ಪಿಸಿ ಒಳ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದರಿಂದ ಲಕ್ಷಾಂತರ ರೂಪಾಯಿ ಟೋಲ್ ನಷ್ಟವಾಗುತ್ತಿತ್ತು. ಇದನ್ನು ಮನಗಂಡು ಗುತ್ತಿಗೆದಾರ ನವಯುಗ ಕಂಪೆನಿ ಹೆಜಮಾಡಿ ಗುಡ್ಡೆಯಂಗಡಿ ಬಳಿ ಒಳರಸ್ತೆಗೂ ಟೋಲ್ ಸಂಗ್ರಹಕ್ಕೆ ಮುಂದಾಗಿತ್ತು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೆಜಮಾಡಿ ಗ್ರಾಮಸ್ಥರು ಹಲವಾರು ಬಾರಿ ಕಾಮಗಾರಿಗೆ ತಡೆಯೊಡ್ಡಿದ್ದರು. ಲೋಕೋಪಯೋಗಿ ರಸ್ತೆಗೆ ಟೋಲ್ ಆರಂಭಿಸಿರುವುದರ ಬಗ್ಗೆ ಇತ್ತೀಚೆಗೆ ನಡೆದ ಹೆಜಮಾಡಿ ಗ್ರಾಮಸಭೆಯಲ್ಲಿ ಇಲಾಖೆ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಅಂತಿಮವಾಗಿ ಇದೀಗ ಅಪೂರ್ಣ ಕಾಮಗಾರಿಯಲ್ಲಿಯೇ ಪೊಲೀಸ್ ಬಲದೊಂದಿಗೆ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಒಳ ರಸ್ತೆಯಲ್ಲಿ ಟೋಲ್ ಅರಂಭವಾಗಿದ್ದರಿಂದ ಕೆಲ ವಾಹನಗಳವರು ಟೋಲ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯೂ ನಡೆಸಿದರು.

ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರ ನವಯುಗ ಕಂಪೆನಿಯ ಅವೈಜ್ಞಾನಿಕ ಕಾಮಗಾರಿಯಿಂದ ಹೆಜಮಾಡಿ ಒಳರಸ್ತೆಯಲ್ಲಿ ಟೋಲ್ ನಿರ್ಮಿಸುವಂತಾಗಿದೆ. ಟೋಲ್ ನಿರ್ಮಾಣದಿಂದ ಹೆಜಮಾಡಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ದಲಿತ ಮುಖಂಡ ಶೇಖರ್ ಹೆಜ್ಮಾಡಿ ಹೇಳಿದ್ದಾರೆ.

ಇಂದು ಪ್ರತಿಭಟನೆ:  ಸ್ಥಳೀಯ ಬೇಡಿಕೆಗಳನ್ನು ಈಡೇರಿಸುವ ತನಕ ಟೋಲ್ ಸಂಗ್ರಹ ಮಾಡಕೂಡದು. ತಕ್ಷಣ ಒಳ ರಸ್ತೆಯ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು  ಎಂದು ಹೋರಾಟಗಾರರು ಹೇಳಿದ್ದಾರೆ. 

ಜಿಲ್ಲಾಡಳಿತದ ಆದೇಶದಂತೆ ಪೊಲೀಸರ ಸಹಕಾರದೊಂದಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೆಜಮಾಡಿಯ ಒಳ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದು, ನವಯುಗ ಕಂಪನಿಯು ಟೋಲ್ ಸಂಗ್ರಹಿಸುವಂತಿಲ್ಲ.  ಈ ಬಗ್ಗೆ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದ್ದು, ಎಲ್ಲರ ಅಭಿಪ್ರಾಯದಂತೆ ಭಾನುವಾರ ಬೆಳಿಗ್ಗೆ ಟೋಲ್ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ  ಶೇಖರ ಹೆಜ್ಮಾಡಿ ತಿಳಿಸಿದ್ದಾರೆ. 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು