ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ‘ಶಿಕ್ಷಣ ಕೊಡುವಲ್ಲಿ ಎರಡೂ ಪಕ್ಷಗಳು ವಿಫಲ’

ಪ್ರಜಾಪ್ರಭುತ್ವ, ಸಂವಿಧಾನದ ಸಂರಕ್ಷಣೆಗಾಗಿ ಅಹೋರಾತ್ರಿ ಧರಣಿ
Published : 17 ಆಗಸ್ಟ್ 2024, 6:02 IST
Last Updated : 17 ಆಗಸ್ಟ್ 2024, 6:02 IST
ಫಾಲೋ ಮಾಡಿ
Comments

ಉಡುಪಿ: ನಮ್ಮನ್ನು ಆಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಶಿಕ್ಷಣ ಕೊಡಿಸುವಲ್ಲಿ ವಿಫಲವಾಗಿವೆ ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದರು.

ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ, ಕಾರ್ಮಿಕ ವರ್ಗದ ಹಕ್ಕುಗಳ ಉಳಿವಿಗಾಗಿ ಹಾಗೂ ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಸಿಐಟಿಯು, ಕೃಷಿ ಕೂಲಿಕಾರರ ಸಂಘ, ರೈತ ಸಂಘ ಜಂಟಿಯಾಗಿ ಬುಧವಾರ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಎಂಜಿನಿಯರಿಂಗ್‌ ಕಾಲೇಜು ತರಲು ನಮ್ಮ ಶಾಸಕ, ಸಂಸದರು ಪ್ರಯತ್ನಿಸಬೇಕು. ಖಾಸಗಿ, ಸರ್ಕಾರಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಬೇಡ, ಹಾಗಾದರೆ ನಮ್ಮ ಹಣವನ್ನು ಮತ್ತೆ ಖಾಸಗಿಯವರಿಗೆ ಕೊಟ್ಟಂತೆ. ನಮಗೆ ಪೂರ್ಣ ಪ್ರಮಾಣದ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂದು ಒತ್ತಾಯಿಸಿದರು.

ಇಂದು ಕಾಂಗ್ರೆಸ್‌ ಸರ್ಕಾರವು ಉಡುಪಿ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ. ಕೆಲವು ಕಾಂಗ್ರೆಸ್‌ ಮುಖಂಡರು, ನಿಮಗೆ ಆಸ್ಪತ್ರೆ ಯಾಕೆ ಕೊಡಬೇಕು ನೀವು ಮತ ಹಾಕಿದ್ದೀರಾ ಎಂದು ಕೇಳುತ್ತಿದ್ದಾರೆ. ಇದು ತಪ್ಪು ಧೋರಣೆ. ಹಲವಾರು ವರ್ಷಗಳಿಂದ ಇಲ್ಲಿನ ಜನರು ಕಾಂಗ್ರೆಸ್‌ನವರಿಗೆ ಮತ ಹಾಕಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.

ಇಂದು ಆರೋಗ್ಯ, ಶಿಕ್ಷಣಕ್ಕಾಗಿ ರಸ್ತೆಯಲ್ಲಿ ನಿಂತು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ವಿಫಲವಾಗಿವೆ. ಸರ್ಕಾರ ಪಕ್ಷಪಾತ ಮಾಡಬಾರದು. ನಮ್ಮ ಊರಿನ ಬಡವರು ಏನು ತಪ್ಪು ಮಾಡಿದ್ದಾರೆ. ಅವರು ಆರೋಗ್ಯ, ಶಿಕ್ಷಣಕ್ಕಾಗಿ ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಜಯನ್ ಮಲ್ಪೆ, ಇದ್ರೀಸ್ ಹೂಡೆ, ಸುಂದರ್ ಮಾಸ್ಟರ್, ಸಂಜೀವ ಬಳ್ಕೂರ್, ಬಾಲಕೃಷ್ಣ ಶೆಟ್ಟಿ, ಕವಿರಾಜ್. ಎಸ್, ಭಾರತಿ, ಯಶೋದಾ, ಎಚ್. ನರಸಿಂಹ, ಕೆ.ಶಂಕರ್, ಸುರೇಶ್ ಕಲ್ಲಾಗಾರ, ಚಂದ್ರಶೇಖರ್, ರಾಮ ಕಾರ್ಕಡ, ಮೊಹನ್, ನಳಿನಿ, ಶಶಿಧರ ಗೊಲ್ಲ, ಸಿಐಟಿಯು, ಕೃಷಿಕೂಲಿಕಾರರ ಸಂಘ, ರೈತ ಸಂಘ, ಜನವಾದಿ ಮಹಿಳಾ ಸಂಘಟನೆ, ಅಂಗನವಾಡಿ ಸಂಘ, ರಿಕ್ಷಾ ಯೂನಿಯನ್ ಮುಖಂಡರು ಭಾಗವಹಿಸಿದ್ದರು. ದಲಿತ ಸಂಘಟನೆಯಿಂದ ಕ್ರಾಂತಿ ಗೀತೆಗಳನ್ನು ಹಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT