ಶನಿವಾರ, ಫೆಬ್ರವರಿ 29, 2020
19 °C
ಉಳಿಕೆ ಆಹಾರ ಕೊಂಡೊಯ್ಯಲು ಮುಗಿಬಿದ್ದ ಜನರು

ಕೃಷ್ಣಮಠದ ಪಾಕಶಾಲೆ ಸೂರೆಗೈದ ಭಕ್ತರು

ವಿಶೇಷ ವರದಿ Updated:

ಅಕ್ಷರ ಗಾತ್ರ : | |

prajavani

ಉಡುಪಿ: ಕೃಷ್ಣಮಠದಲ್ಲಿ ಪ್ರತಿ ಪರ್ಯಾಯದ ಮಗಿಯುವ ದಿನ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಆಚರಣೆಗಳು ನಡೆಯುವುದು ಸಂಪ್ರದಾಯ. ಅದರಂತೆ, ಶುಕ್ರವಾರ ‘ಪಾಕಶಾಲೆ ಸೂರೆಗೈಯುವ’ ಆಚರಣೆ ಗಮನ ಸೆಳೆಯಿತು.

ಕೃಷ್ಣಮಠದಲ್ಲಿ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದ ಬಳಿಕ ಉಳಿಕೆ ಆಹಾರ ಪದಾರ್ಥಗಳನ್ನು ಕಡಾಯಿಗಳಲ್ಲಿ ಹಾಗೆಯೇ ಬಿಟ್ಟು ಸೂರೆಗೈಯಲು ಅವಕಾಶ ಮಾಡಿಕೊಡಲಾಯಿತು. ಈ ವೇಳೆ ಪಾಕಶಾಲೆಗೆ ನುಗ್ಗಿದ ನೂರಾರು ಭಕ್ತರು ಕೈಗೆ ಸಿಕ್ಕಷ್ಟು ಆಹಾರವನ್ನು ತುಂಬಿಸಿಕೊಂಡು ಹೋದರು.

ಅನ್ನ, ಸಾರು, ಹುಳಿ ಸೇರಿದಂತೆ ಉಳಿದ ಎಲ್ಲ ಆಹಾರ ಪದಾರ್ಥಗಳನ್ನು ಪಾತ್ರೆ, ಬಕೆಟ್‌, ಕ್ಯಾನ್‌, ಬಾಟೆಲ್‌, ಹೀಗೆ ಕೈಗೆ ಸಿಕ್ಕ ವಸ್ತುಗಳಲ್ಲಿ ತುಂಬಿಕೊಂಡರು. ಕೆಲವರಂತೂ ಬೃಹತ್ ಗಾತ್ರದ ಕಡಾಯಿಗಳಿಂದ ಆಹಾರ ತೆಗೆಯಲು ಬಕೆಟ್‌ ಹಾಗೂ ಪಾತ್ರೆಗಳಿಗೆ ಹಗ್ಗಕಟ್ಟಿಕೊಂಡು ಬಂದಿದ್ದರು.

ಆಹಾರ ಸುಡುತ್ತಿದ್ದರೂ ಲೆಕ್ಕಿಸದೆ ಮುಗಿಬಿದ್ದು ಕಡಾಯಿಗಳ ಮೇಲೆ ನಿಂತು ಆಹಾರ ತುಂಬಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು. ಮಹಿಳೆಯರು, ಮಕ್ಕಳು, ವೃದ್ಧರೂ ಸೂರೆಗೆ ನಿಂತಿದ್ದು ವಿಶೇಷವಾಗಿತ್ತು.

ಒಂದೆಡೆ ಭಕ್ತರು ಮುಗಿಬಿದ್ದು ಆಹಾರ ತುಂಬಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ‘ಸೂರೆ’ ಆಚರಣೆಯ ಅರಿವಿಲ್ಲದ  ಪ್ರವಾಸಿಗರು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಬಳಿಕ ಸ್ಥಳೀಯರಿಂದ ಆಚರಣೆಯ ಬಗ್ಗೆ ತಿಳಿದುಕೊಂಡು ನಿರಾಳರಾದರು.

ಏನಿದು ಸೂರೆ ಪದ್ಧತಿ

ಪರ್ಯಾಯ ಅವಧಿಯ ಕೊನೆಯ ದಿನ ಮಧ್ಯಾಹ್ನ ಪಾಕಶಾಲೆಯಲ್ಲಿ ‘ಸೂರೆ ಬಿಡುವ’ ಪದ್ಧತಿ ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ. ಅಂದರೆ, ಮಧ್ಯಾಹ್ನ ಭಕ್ತರ ಭೋಜನದ ಬಳಿಕ ಉಳಿಕೆ ಆಹಾರವನ್ನು ಭಕ್ತರಿಗೆ ಕೊಂಡೊಯ್ಯಲು ಅವಕಾಶ ಕೊಡಲಾಗುತ್ತದೆ.

ಭಕ್ತರ ಭೋಜನ ಮುಗಿದ ಬಳಿಕ ಮಠದ ಸಿಬ್ಬಂದಿಯಿಂದ ಸೂರೆಗೆ ಆದೇಶ ನೀಡುತ್ತಾರೆ. ತಕ್ಷಣ ಭಕ್ತರು ನಾಮುಂದು, ತಾಮುಂದು ಎಂದು ಉಳಿಕೆ ಆಹಾರವನ್ನು ಸೂರೆ ಮಾಡುತ್ತಾರೆ. ಇಲ್ಲಿ ಯಾರು ಎಷ್ಟು ಬೇಕಾದರೂ ಆಹಾರವನ್ನು ಮನೆಗೆ ಕೊಂಡೊಯ್ಯಬಹುದು. ಉಳಿಕೆ ಆಹಾರ ಶ್ರೀಕೃಷ್ಣನ ಪ್ರಸಾದ ಎಂದು ಸೇವಿಸುವ ಪದ್ಧತಿ ರೂಢಿಯಲ್ಲಿರುವುದರಿಂದ ಸೂರೆ ಆಹಾರಕ್ಕೆ ಬೇಡಿಕೆ ಹೆಚ್ಚು. ಜತೆಗೆ ಸೂರೆಗೈದು ಸೇವಿಸಿದರೆ ಒಳಿತಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)