ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪ್ರವಾಸೋದ್ಯಮಕ್ಕೆ ಬೇಕು ದೂರದೃಷ್ಟಿತ್ವ

ಪ್ರಕೃತಿದತ್ತ ಕೊಡುಗೆಗಳಿದ್ದರೂ ಹಿಂದೆ ಬಿದ್ದ ಉಡುಪಿ ಜಿಲ್ಲೆ
Last Updated 28 ಆಗಸ್ಟ್ 2022, 0:00 IST
ಅಕ್ಷರ ಗಾತ್ರ

ಉಡುಪಿ: ಕಣ್ಮನ ಸೆಳೆಯುವ ಕಡಲ ತೀರಗಳು, ನದಿ–ಸಮುದ್ರ ಸಂಗಮವಾಗುವ ಮನಮೋಹಕ ಅಳಿವೆಗಳು, ಭಕ್ತರನ್ನು ಸೆಳೆಯುತ್ತಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಹಸಿರು ಹೊದ್ದು ಮಲಗಿರುವ ಪಶ್ಚಿಮಘಟ್ಟಗಳು..ಹೀಗೆ, ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಕೊಡುಗೆಗಳನ್ನು ಪ್ರಕೃತಿಯೇ ನೀಡಿದೆ. ಆದರೆ, ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ದೂರದೃಷ್ಟಿತ್ವದ ಕೊರತೆಯಿಂದ ಜಿಲ್ಲೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲು ಸಾದ್ಯವಾಗಿಲ್ಲ.

ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾಪು ತಾಲ್ಲೂಕುಗಳಲ್ಲಿ ನೂರಾರು ಕಿ.ಮೀ ಉದ್ದದ ಸುಂದರ ಕಡಲ ತೀರ ಹಾಸಿಕೊಂಡರೂ ಇಂದಿಗೂ ಮಲ್ಪೆ, ಕಾಪು, ಪಡುಬಿದ್ರಿ, ಮರವಂತೆ ಸೇರಿ ಬೆರಳೆಣಿಕೆ ಬೀಚ್‌ಗಳನ್ನು ಹೊರತುಪಡಿಸಿದರೆ ಹೆಚ್ಚಿನ ಬೀಚ್‌ಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ.

ನೆರೆಯ ಕೇರಳ ರಾಜ್ಯ ಕೂಡ ಹೊಂದಿರದಷ್ಟು ನೈಸರ್ಗಿಕ ಸಂಪನ್ಮೂಲಗಳು ಉಡುಪಿ ಜಿಲ್ಲೆಯಲ್ಲಿ ಪ್ರಕೃತಿದತ್ತವಾಗಿಯೇ ಇದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿದೆ. ಉಡುಪಿಗೆ ಬರುವ ಪ್ರವಾಸಿಗರು ಹಿನ್ನೀರಿನ ಪ್ರವಾಸೋದ್ಯಮದ ಸವಿ ಸವಿಯಲು ಇಂದಿಗೂ ಕೇರಳದತ್ತ ಮುಖಮಾಡುವಂತಹ ಪರಿಸ್ಥಿತಿ ಇದೆ.

ಕೇರಳ ರಾಜ್ಯ ಹಿನ್ನೀರಿನ ಪ್ರವಾಸೋದ್ಯಮದಿಂದಲೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ನೂರಾರು ಬೋಟ್‌ ಹೌಸ್‌ಗಳು ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತಿವೆ. ಆದರೆ, ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಬೈಂದೂರು ತಾಲ್ಲೂಕುಗಳಲ್ಲಿ ಹಲವು ಹಿನ್ನೀರಿನ ಅಳಿವೆಗಳಿದ್ದರೂ ಪ್ರವಾಸಿಗರನ್ನು ಸೆಳೆಯಲು ಸಾದ್ಯವಾಗಿಲ್ಲ.

4 ವರ್ಷಗಳ ಹಿಂದೆ ಕೋಡಿಬೆಂಗ್ರೆಯಲ್ಲಿ ತಿರುಮಲ ಕ್ರೂಸ್ ಹೆಸರಿನ ಬೋಟ್‌ಹೌಸ್ ಆರಂಭವಾಗಿದ್ದು ಬಿಟ್ಟರೆ ನಂತರ ಹೆಚ್ಚಿನ ಬೋಟ್‌ಹೌಸ್‌ಗಳು ಕಾಲಿಡಲಿಲ್ಲ. ಹಿನ್ನೀರಿನ ಪ್ರವಾಸೋದ್ಯಮ ಇಂದಿಗೂ ಹಿನ್ನೆಲೆಯಲ್ಲಿಯೇ ಉಳಿದುಬಿಟ್ಟಿದೆ.

ಕುಂದಾಪುರ ತಾಲ್ಲೂಕು ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಬಳಿಯ ಸೀತಾ ನದಿಯ ಹಿನ್ನೀರಿನಲ್ಲಿ ಉತ್ಸಾಹಿ ಯುವಕರ ತಂಡವಾದ ಲೋಕೇಶ್, ಮಿಥುನ್‌ ಕಯಾಕಿಂಗ್ ಸಾಹಸ ಕ್ರೀಡೆ ಶುರುಮಾಡಿದ್ದು, ದಿನಕಳೆದಂತೆ ಹೊರ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಪ್ರಯತ್ನದ ಬಳಿಕ ಹಲವೆಡೆ ಕಯಾಕಿಂಗ್ ಆರಂಭಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಅಗತ್ಯ ಪ್ರೋತ್ಸಾಹ ದೊರೆಯುತ್ತಿಲ್ಲ.

ಪಡುಬಿದ್ರಿ ಬೀಚ್‌ಗೆ ಅಂತರರಾಷ್ಟ್ರೀಯ ಬ್ಲೂಫ್ಲಾಗ್ ಬೀಚ್‌ ಮಾನ್ಯತೆ ಸಿಕ್ಕರೂ ನಿರೀಕ್ಷಿತ ಮಟ್ಟದ ಪ್ರವಾಸಿಗರನ್ನು ಸೆಳೆಯಲು ಸಾದ್ಯವಾಗಿಲ್ಲ. ನೆರೆಯ ಗೋವಾ ರಾಜ್ಯದಲ್ಲಿ ಬೀಚ್‌ಗಳನ್ನು ಹೊರತುಪಡಿಸಿದರೆ ಪ್ರಾಕೃತಿಕ ಸಂಪನ್ಮೂಲಗಳು ಹೆಚ್ಚಿಲ್ಲ. ಆದರೂ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ರಾಜ್ಯವಾಗಿ ಗೋವಾ ಗುರುತಿಸಿಕೊಂಡಿದೆ. ಗೋವಾ ರಾಜ್ಯದ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗುವಷ್ಟು ಬೆಳೆದು ನಿಂತಿದೆ. ಆದರೆ, ರಾಜ್ಯದ ಕರಾವಳಿ ಪ್ರಾಕೃತಿಕವಾಗಿ ಸಂಪದ್ಬರಿತವಾಗಿದ್ದರೂ ಹಿಂದುಳಿದಿದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಿಂದೆ ಬೀಳಲು ಹಲವು ಕಾರಣಗಳನ್ನು ಉದ್ಯಮಿಗಳು ನೀಡುತ್ತಾರೆ. ಸಿಆರ್‌ಝೆಡ್‌ ನಿಯಮಗಳು ಬಹಳ ಕಠಿಣವಾಗಿರುವುದರಿಂದ ಪ್ರವಾಸೋದ್ಯಮಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳಲು ಅಡ್ಡಿಯಾಗುತ್ತಿವೆ. ಹೋಂಸ್ಟೇ ಆರಂಭಕ್ಕೂ ಹತ್ತು ಹಲವು ತೊಡಕುಗಳಿವೆ. ಬ್ಯಾಂಕ್‌ಗಳಿಂದ ಆರ್ಥಿಕ ನೆರವು ದೊರೆಯುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ ಉದ್ಯಮಿಗಳು.

ಪರಿಸರಕ್ಕೆ ಹಾನಿ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಅಗತ್ಯವಿಲ್ಲ. ಪ್ರಕೃತಿಗೆ ಪೂರಕವಾಗಿ ಉದ್ಯಮ ಆರಂಭಿಸಲು ಸಹಕಾರ ನೀಡಿದರೂ ಸಾಕು. ಪರವಾನಗಿ ಪಡೆಯಲು ಕಚೇರಿಗಳಿಗೆ ಅಲೆಸಬಾರದು, ನಿಯಮಗಳು ಸರಳೀಕರಣವಾಗಬೇಕು, ಪ್ರೋತ್ಸಾಹಧನ ಸೇರಿದಂತೆ ಸುಲಭವಾಗಿ ಬ್ಯಾಂಕ್ ಸಾಲ ಸಿಗಬೇಕು. ಸರ್ಕಾರದಿಂದ ವ್ಯಾಪಕ ಪ್ರಚಾರ ಸಿಗಬೇಕು. ಬೃಹತ್ ಹೋರ್ಡಿಂಗ್, ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕು ಎನ್ನುತ್ತಾರೆ ಉದ್ಯಮಿ ಯಶವಂತ್‌.

‘ನಿಯಮಗಳ ಸಡಿಲ ಅಗತ್ಯ’

ನೆರೆಯ ಕೇರಳ ಹಾಗೂ ಗೋವಾ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಹಾಗೂ ಪ್ರೋತ್ಸಾಹ ದೊರೆಯುತ್ತಿಲ್ಲ. ಅಗತ್ಯ ಪ್ರಚಾರವೂ ದೊರೆಯುತ್ತಿಲ್ಲ. ಉಡುಪಿ ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆ. ಪ್ರವಾಸೋದ್ಯಮ ಅಭಿವೃದ್ದಿಗೆ ಇಲ್ಲಿರುವಷ್ಟು ಪೂರಕ ವಾತಾವರಣ ಎಲ್ಲಿಯೂ ಇಲ್ಲ. ಬೀಚ್‌ ಹಾಗೂ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಿಆರ್‌ಝೆಡ್ ನಿಯಮಗಳು ಅಡ್ಡಿಯಾಗಿವೆ. ಪರಿಸರಕ್ಕೆ ಹಾನಿಯಾಗದಂತೆ ನಿಯಮಗಳನ್ನು ಸಡಿಲಿಸಿದರೆ ಹೋಂಸ್ಟೇ, ಗೆಸ್ಟ್‌ ಹೌಸ್‌, ಟೆಂಟ್‌ ಹೌಸ್‌ಗಳನ್ನು ನಿರ್ಮಿಸಬಹುದು. ಹಿನ್ನೀರಿನ ಮಧ್ಯೆ ಪ್ರವಾಸಿಗರು ಉಳಿಯುವ ಹಾಗೂ ಫಿಶಿಂ‌ಗ್ ಮಾಡುವ ಮಾದರಿಯ ಮನೆಗಳು ನಿರ್ಮಾಣ ಮಾಡಲು ಅವಕಾಶ ಸಿಗಬೇಕು. ಹಿನ್ನೀರಿನಲ್ಲಿ ತುಂಬಿರುವ ಹೂಳೆತ್ತಬೇಕು ಎನ್ನುತ್ತಾರೆ ಸೀತಾ ನದಿಯ ಹಿನ್ನೀರಿನಲ್ಲಿ ಕಯಾಕಿಂಗ್ ಆರಂಭಿಸಿರುವ ಮಿಥುನ್‌.

ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣಗಳು

ಉಡುಪಿಯ ಕೃಷ್ಣಮಠ, ಅಷ್ಟಮಠ, ಪಾಜಕ, ಮಣಿಪಾಲದ ಹೆರಿಟೇಜ್ ವಿಲೇಜ್‌, ಕೋಡಿಬೆಂಗ್ರೆ ಎಂಡ್ ಪಾಯಿಂಟ್‌, ಮಲ್ಪೆ, ಪಡುಕೆರೆ, ಕಾಪು, ಪಡುಬಿದ್ರಿ, ಕೋಡಿ, ಮರವಂತೆ ಕಡಲ ತೀರಗಳು, ಸೇಂಟ್‌ ಮೇರಿಸ್‌ ದ್ವೀಪ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ, ಕಮಲಶಿಲೆ, ಹಟ್ಟಿಯಂಗಡಿ, ಕುಂಭಾಶಿ ದೇವಸ್ಥಾನ, ಕಾರ್ಕಳದ ಗೊಮ್ಮಟೇಶ್ವರ, ಅತ್ತೂರು ಚರ್ಚ್‌, ಜೈನ ಬಸದಿಗಳು, ವರಂಗ, ಕೂಡ್ಲು ಫಾಲ್ಸ್‌ ಹೀಗೆ ಹತ್ತಾರು ಪ್ರಸಿದ್ಧ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT