ಶುಕ್ರವಾರ, ಅಕ್ಟೋಬರ್ 18, 2019
23 °C
ಸಂವಾದ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ದಿನೇಶ್ ಹೊಳ್ಳ

ಪಶ್ಚಿಮಘಟ್ಟದ ಮೇಲಿನ ದೌರ್ಜನ್ಯಕ್ಕೆ ಗುಡ್ಡಕುಸಿತಗಳು ಉತ್ತರ

Published:
Updated:
Prajavani

ಉಡುಪಿ: ವೋಟು, ನೋಟು, ಸೀಟಿನ ಕಾರಣಕ್ಕೆ ಪಶ್ಚಿಮ ಘಟ್ಟವನ್ನು ಬಲಿಕೊಡಲಾಗುತ್ತಿದೆ. ನದಿಗಳ ಮೂಲವನ್ನು ನಾಶ ಮಾಡಲಾಗುತ್ತಿದೆ. ಪರಿಸರದ ಮೇಲಿನ ದೌರ್ಜನ್ಯದ ಪ್ರತಿಫಲವಾಗಿ ಗುಡ್ಡಕುಸಿದಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಪರಿಸರ ತಜ್ಞ ದಿನೇಶ್ ಹೊಳ್ಳ ಅಭಿಪ್ರಾಯಪಟ್ಟರು.

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯವನ್ನು ಮೀರಿ, ನದಿಗಳ ತಿರುವು ಯೋಜನೆ, ರೆಸಾರ್ಟ್‌ಗಳ ನಿರ್ಮಾಣ ನಡೆಯುತ್ತಿದೆ. ಇದಕ್ಕೆ ಉತ್ತರವಾಗಿ ಪ್ರಾಕೃತಿಕ ವಿಕೋಪಗಳನ್ನು ಕಾಣುತ್ತಿದ್ದೇವೆ ಎಂದರು.

ಪಶ್ಚಿಮಘಟ್ಟದಲ್ಲಿರುವ ನದಿ ಮೂಲಗಳ ಸೂಕ್ಷ್ಮ ಪ್ರದೇಶಗಳನ್ನು ರೆಸಾರ್ಟ್‌ಗಳಿಗೆ ನೀರಿನ ಮೂಲಗಳನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪಶ್ಚಿಮಘಟ್ಟದ ಮಿದುಳನ್ನು ಕೊರದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಕಾಡಿನ ಅಧ್ಯಯನ ಕೇಂದ್ರಗಳ ಹೆಸರಿನಲ್ಲಿ ಜಂಗಲ್‌ ರೆಸಾರ್ಟ್‌ ತೆರೆದು ಮೋಜು ಮಸ್ತಿಗೆ ಅವಕಾಶ ನೀಡಲಾಗುತ್ತಿದೆ. ಅವ್ಯಾಹತವಾಗಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ. ಕಾಡಿನೊಳಗೆ ಬಿದ್ದಿರುವ ಮದ್ಯದ ಬಾಟಲಿಗಳಿಂದ ಪ್ರಾಣಿಗಳ ಜೀವಕ್ಕೆ ಸಂಚಕಾರ ಎದುರಾಗಿದೆ ಎಂದರು.

ಎತ್ತಿನಹೊಳೆ ದುಡ್ಡಿನ ಯೋಜನೆ:

ಎತ್ತಿನಹೊಳೆ ಬಯಲುಸೀಮೆಗೆ ನೀರು ಹರಿಸುವ ಯೋಜನೆಯಲ್ಲ; ರಾಜಕಾರಣಿಗಳಿಗೆ, ಗುತ್ತಿಗೆದಾರರಿಗೆ ದುಡ್ಡು ಮಾಡುವ ಯೋಜನೆ. ಇದು ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯ ಜನರನ್ನು ಮೂರ್ಖರನ್ನಾಗಿಸುವ ಯೋಜನೆ ಎಂದು ಟೀಕಿಸಿದರು.‌

ಯೋಜನೆ ಕಾಮಗಾರಿ ಶುರುವಾದ ನಂತರ ಕರಾವಳಿಯಲ್ಲಿ ಬರದ ಛಾಯೆ ಕಾಣಿಸಿಕೊಳ್ಳುತ್ತಿದೆ. ಕಾಮಗಾರಿ ಪೂರ್ಣಗೊಂಡರೆ ಕರಾವಳಿಯ ಪರಿಸ್ಥಿತಿ ಶೋಚನೀಯವಾಗುವುದು ಖಚಿತ ಎಂದು ದಿನೇಶ್ ಹೊಳ್ಳ ಆತಂಕ ವ್ಯಕ್ತಪಡಿಸಿದರು.

ಎತ್ತಿನಹೊಳೆ ವ್ಯಾಪ್ತಿಯಲ್ಲಿ 9 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದ್ದು, ನದಿ ತಿರುವ ಯೋಜನೆಯಿಂದ ಸಿಗುವುದು ಕೇವಲ 1 ಟಿಎಂಸಿ ಅಡಿಗೂ ಕಡಿಮೆ ಎಂದು ಜಲತಜ್ಞ ರಾಮಚಂದ್ರ ಅವರು ವರದಿ ನೀಡಿದ್ದಾರೆ. ಆದರೆ, ಸರ್ಕಾರ ವರದಿಯನ್ನು ನಿರ್ಲಕ್ಷ್ಯ ಮಾಡಿ ಯೋಜನೆ ಮುಂದುವರಿಸಿದೆ ಎಂದರು.

ಗುತ್ತಿಗೆದಾರರು, ಕೈಗಾರಿಕಾ ಮಾಫಿಯಾ ಹಾಗೂ ರಾಜಕಾರಣಿಗಳಿಗೆ ಹಣ ಮಾಡುವ ಯೋಜನೆಯೇ ಹೊರತು ಬಯಲುಸೀಮೆಗೆ ಹನಿ ನೀರೂ ಸಿಗುವುದಿಲ್ಲ. 25 ವರ್ಷ ಕಳೆದರೂ ಕಾಮಗಾರಿ ಮುಗಿಯುವುದಿಲ್ಲ. ಬಯಲುಸೀಮೆಗೆ ನೀರೂ ಹರಿಯುವುದಿಲ್ಲ. ಈ ಸತ್ಯ ಅಲ್ಲಿನ ಜನರಿಗೂ ನಿಧಾನಕ್ಕೆ ಅರಿವಾಗುತ್ತಿದೆ ಎಂದರು.

ಎತ್ತಿನಹೊಳೆ ವ್ಯಾಪ್ತಿಯಲ್ಲಿ ಅಣೆಕಟ್ಟುಗಳನ್ನು ಕಟ್ಟಲಾಗುತ್ತದೆ. ಮಳೆಗಾಲದಲ್ಲಿ ಗುಡ್ಡಕುಸಿದು ಅಣೆಕಟ್ಟೆಗಳು ಒಡೆದರೆ ಘೋರ ದುರಂತ ಸಂಭವಿಸಲಿದೆ. ಪಶ್ಚಿಮಘಟ್ಟ ಉಳಿಯಬೇಕಾದರೆ ಜನರಿಗೆ ಪ್ರಕೃತಿ ಮೇಲೆ ಅಭಿಮಾನ ಕಾಳಜಿ ಮೂಡಬೇಕು. ಭವಿಷ್ಯದ ಸುರಕ್ಷತೆಗೆ ಕರಾವಳಿಯ ಜನರು ಪರಿಸರ ಪರವಾದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಹೊಳ್ಳ ಕರೆ ನೀಡಿದರು.

Post Comments (+)