ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ, ಪ್ರಾಕೃತಿಕ ವಿಕೋಪ: ತುರ್ತು ಸ್ಪಂದನೆ ಇರಲಿ

ರಕ್ಷಣಾ ಪರಿಕರಗಳು ಸಿದ್ಧವಿರಲಿ, ಹಾನಿಯಾದರೆ ತಕ್ಷಣ ಪರಿಹಾರ ವಿತರಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್
Last Updated 18 ಮೇ 2022, 14:55 IST
ಅಕ್ಷರ ಗಾತ್ರ

ಉಡುಪಿ: ಮಳೆಯಿಂದ ಉಂಟಾಗುವ ನೆರೆ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಉಂಟಾದಾಗ ತ್ವರಿತ ಸ್ಪಂದನೆಯಿಂದ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮುಂಗಾರು ಮತ್ತು ಕೃಷಿ ಚಟುವಟಿಕೆ ಪ್ರಾರಂಭದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಹೆಚ್ಚಿನ ಮಳೆ ಗಾಳಿ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ಸಿಕ್ಕ ಕೂಡಲೇ ಅದಕ್ಕೆ ಅನುಗುಣವಾಗಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಕಳೆದ ವರ್ಷಗಳಲ್ಲಿ ನೆರೆ ಸಂಭವಿಸಿರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ವಿಕೋಪಗಳನ್ನು ನಿರಾಯಾಸವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.

ಪ್ರತಿ ತಾಲ್ಲೂಕಿನಲ್ಲಿ ಪ್ರಾಕೃತಿಕ ವಿಕೋಪಗಳನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಅಣುಕು ಪ್ರದರ್ಶನ ಅಭ್ಯಾಸಗಳು ನಡೆಯಬೇಕು. ವಿಕೋಪಗಳು ಎದುರಾದಾಗ ಸಮರ್ಥವಾಗಿ ಎದುರಿಸಲು ಇದರಿಂದ ಅನುಕೂಲವಾಗುತ್ತದೆ. ಸುರಕ್ಷತಾ ಪರಿಕರಗಳ ಉಪಯೋಗಗಳ ಬಗ್ಗೆಯೂ ಅನುಭವ ದೊರೆಯಲಿದೆ ಎಂದರು.

ವಿಕೋಪಗಳಿಂದ ಉಂಟಾಗುವ ಪ್ರಾಣ ಹಾನಿಗೆ 24 ಗಂಟೆಯೊಳಗೆ ಪರಿಹಾರ ಒದಗಿಸಬೇಕು. ಮನೆ ಹಾಗೂ ಬೆಳೆ ಹಾನಿಗಳ ಅಂದಾಜು ಮೊತ್ತವನ್ನು 48 ಗಂಟೆಯ ಒಳಗೆ ವರದಿ ಸಲ್ಲಿಸಿ ಪರಿಹಾರ ಮೊತ್ತವನ್ನು ಶೀಘ್ರ ವಿತರಿಸಬೇಕು ಎಂದರು.

ತಾಲ್ಲೂಕು ಮಟ್ಟ, ಗ್ರಾಮ ಪಂಚಾಯಿತಿ ಮಟ್ಟ ಹಾಗೂ ನಗರಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ಸಭೆ ನಡೆಸಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ತೊಂದರೆಗೊಳಗಾದವರಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಂದಾಪುರ, ಪಡುಬಿದ್ರಿ, ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು, ಬೈಂದೂರಿನ ಕೆಲವು ಭಾಗಗಳಲ್ಲಿ ಮಣ್ಣು ಕುಸಿತಗಳಾಗುವ ಬಗ್ಗೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.

ಮಳೆಯ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಮಳೆ ಗಾಳಿಯಿಂದ ಮರಗಳು ರಸ್ತೆಗೆ ಉರುಳಿ ವಾಹನಗಳ ಸಂಚಾರಕ್ಕೆ ಅಡ್ಡಿಯಾದರೆ ಶೀಘ್ರ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉತ್ತಮ ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜದ ದಾಸ್ತಾನು ಇರಬೇಕು. ರಸಗೊಬ್ಬರ ದಾಸ್ತಾನು ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುರ್ತು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅಗತ್ಯವಿರುವ ಬೋಟುಗಳು ಸೇರಿದಂತೆ ಅಗತ್ಯ ಪರಿಕರ ಖರೀದಿಸಲು ಹಾಗೂ ನೆರೆ ಸಂತ್ರಸ್ಥರಿಗೆ ಅನುಕೂಲವಾಗುವಂತೆ ಕಾಳಜಿ ಕೇಂದ್ರಗಳನ್ನು ತೆರೆಯಲು ಸೂಕ್ತ ಸ್ಥಳಗಳನ್ನು ಗುರುತಿಸಿಕೊಳ್ಳಬೇಕು. ಮಳೆ ಗಾಳಿಯಿಂದ ವಿದ್ಯುತ್ ಕಂಬಗಳು ಹಾಗೂ ಪ್ರಸರಣ ತಂತಿಗಳು ಹಾನಿಯಾದರೆ ಕೂಡಲೇ ದುರಸ್ತಿ ಕೈಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ತುಂಡಾದ ವಿದ್ಯುತ್ ತಂತಿಗಳನ್ನು ಸಾರ್ವಜನಿಕರು ಮುಟ್ಟದಂತೆ ಅರಿವು ಮೂಡಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ಕರಾವಳಿ ಕಾವಲು ಪಡೆಯ ಎಸ್‌ಪಿ ಅಂಶುಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಎಎಸ್‌ಪಿ ಸಿದ್ದಲಿಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT