ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಣ್ಣೆಹೊಳೆ: ನ್ಯಾಯಾಧೀಶರಿಂದ ತನಿಖೆ ಆಗಲಿ– ವೀರಪ್ಪ ಮೊಯಿಲಿ ಆಗ್ರಹ

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಆಗ್ರಹ
Last Updated 12 ಜೂನ್ 2022, 6:16 IST
ಅಕ್ಷರ ಗಾತ್ರ

ಕಾರ್ಕಳ: ಸರಿಯಾದ ಅಧ್ಯಯನ ನಡೆಸದೇ ಎಣ್ಣೆಹೊಳೆಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ. ₹ 108 ಕೋಟಿಯ ಜೊತೆ ಮತ್ತೆ ₹ 40 ಕೋಟಿ ಎಣ್ಣೆಹೊಳೆ ಹೊಳೆಗೆ ತಡೆಗೋಡೆ ನಿರ್ಮಾಣಕ್ಕಾಗಿ ಮಂಜೂರಾಗಲಿದೆ. ಎಣ್ಣೆಹೊಳೆ ಯೋಜನೆಯಿಂದ ಮುಂದಿನ ದಿನಗಳಲ್ಲಿ ನೆರೆಯುಂಟಾಗಿ, ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಆರೋಪಿಸಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆಯನ್ನು ಪಟ್ಟಿಬಾವು ಎಂಬಲ್ಲಿ ನಿರ್ಮಾಣ ಮಾಡುತ್ತಿದ್ದಲ್ಲಿ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಯೋಜನೆಯ ಹೆಚ್ಚುವರಿ ಹಣವು ಯಾವ ರೀತಿಯಲ್ಲಿ ಬಳಕೆಯಾಗಿದೆ ಎನ್ನುವುದು ತಿಳಿಯಬೇಕಿದೆ. ಅದು ಜಿಲ್ಲಾ ನ್ಯಾಯಾಧೀಶರ ಮಟ್ಟದಲ್ಲಿ ತನಿಖೆಯಾಗಬೇಕು’ ಎಂದರು.

‘ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್‌ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಸಂಚಾರ ಮಾಡಿ, ಪಕ್ಷ ಬಲಪಡಿಸುವ ಕಾರ್ಯ ನಡೆಸಲಿದ್ದೇನೆ. ರಾಜ್ಯ ಹಾಗೂ ರಾಷ್ಟ್ರದೆಲ್ಲೆಡೆ ನವಸಂಕಲ್ಪ ಶಿಬಿರ ನಡೆಯಲಿದೆ’ ಎಂದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪಪ್ರಶ್ನೆಗೆ ಉತ್ತರಿಸಿದ ಮೊಯಿಲಿ, ‘ಪ್ರಜಾಪ್ರಭುತ್ವದ ನಿಯಮದಂತೆ ಪ್ರಕ್ರಿಯೆಗಳು ನಡೆದು ಅಭ್ಯರ್ಥಿಯ ಘೋಷಣೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ಜಾತಿಯ ಧ್ರುವೀಕರಣ ಆಗಬಾರದು. ಈ ನಾಡು ಎಲ್ಲರಿಗೂ ಸೇರಿದ್ದು. ಕಾಂಗ್ರೆಸ್ ಪಕ್ಷ ಎಂದಿಗೂ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡದು. ಕೆಲವು ಪಕ್ಷಗಳು ಅವನ್ನೇ ಮಾಡುತ್ತಿರುವುದು ಸರಿಯಲ್ಲ’ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಕಾಂಗ್ರೆಸ್ ನ ಪ್ರಮುಖರಾದ ಸುಧಾಕರ್ ಕೋಟ್ಯಾನ್, ಸುರೇಂದ್ರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಶೇಖರ ಮಡಿವಾಳ, ಶುಭದ್ ರಾವ್, ಅಣ್ಣಯ್ಯ ಶೇರಿಗಾರ್, ಸುಬಿತ್ ಎನ್. ಆರ್., ಸುಧಾಕರ ಶೆಟ್ಟಿ,
ನವೀನ್ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗಿಶ್ ನಯನ್ ಇನ್ನಾ, ಅಶ್ಫಾಕ್ ಅಹಮ್ಮದ್ ಮೊದಲಾದವರು ಇದ್ದರು.

‘ವೃತ್ತಿಗೆ ನಿಷ್ಠೆ ಇರಲಿ, ಪಕ್ಷಕ್ಕೆ ಅಲ್ಲ’

‘ತಾಲ್ಲೂಕಿನ ಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಡ್ಸೆ ನಾಮಫಲಕದ ವಿಚಾರವಾಗಿ ಪೊಲೀಸರು ಐಪಿಸಿ ಸೆಕ್ಷನ್ 290ರ ಅಡಿ ಕ್ಲುಲ್ಲಕ ಪ್ರಕರಣ ಎಂದು ಕೇಸ್ ದಾಖಲಿಸಿದ್ದಾರೆ. ಗೋಡ್ಸೆಯಂತಹ ಮನಃಸ್ಥಿತಿಯುಳ್ಳ ವ್ಯಕ್ತಿಗಳಿಂದ ಇಂತಹ ಕೃತ್ಯ ನಡೆದಿದೆ. ಇದರ ಮೂಲೋತ್ಪಾಟನೆ ಮಾಡಬೇಕಿದೆ. ಇದು ಗಂಭೀರ ಅಪರಾಧ. ಇಂತಹ ಗಂಭೀರ ಪ್ರಕರಣವನ್ನು ಸೆಕ್ಷನ್ 153ರ ಅಡಿ ದಾಖಲಿಸಬೇಕಿತ್ತು. ಪೊಲೀಸ್ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ. ಹೀಗಾಗಿ ಪೊಲೀಸ್ ಅಧಿಕಾರಿಗಳಿಗೆ ಇನ್ನೊಮ್ಮೆ ತರಬೇತಿ ನೀಡುವ ಅವಶ್ಯಕತೆ ಇದೆ. ಅಧಿಕಾರಿಗಳ ನಿಷ್ಠೆ ವೃತ್ತಿಗಿರಬೇಕೇ ಹೊರತು ಪಕ್ಷಕ್ಕೆ ಅಲ್ಲ’ ಎಂದು ವೀರಪ್ಪ ಮೊಯಿಲಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT