ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್

ರಾಜಕೀಯ ಪಕ್ಷದ ನಾಯಕರಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸ್ಪಷ್ಟನೆ
Last Updated 5 ಡಿಸೆಂಬರ್ 2022, 12:59 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅತ್ಯಂತ ಪಾರದರ್ಶಕವಾಗಿ, ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಡೆಸಲಾಗುತ್ತಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದೆ.

ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸೇರ್ಪಡೆಗೆ ಆದ್ಯತೆ ನೀಡಲಾಗಿದ್ದು, ಕಾಲೇಜುಗಳಲ್ಲಿ ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮತದಾರರ ಪಟ್ಟಿಯ ಪರಿಶೀಲನೆ ಸಂದರ್ಭದಲ್ಲಿ ಖುದ್ದು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಹೆಸರು ಕೈಬಿಡುವಾಗ ಅದಕ್ಕೆ ಪೂರಕವಾದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮಹಜರು ಮಾಡಲಾಗಿದೆ ಎಂದರು.

ನ.9ರಿಂದ ಆರಂಭಗೊಂಡಿರುವ ವಿಶೇಷ ಪರಿಷ್ಕರಣೆ ಕುರಿತು ಪ್ರತಿ ವಾರ ಮತದಾರರ ಪಟ್ಟಿಯಲ್ಲಿನ ಸೇರ್ಪಡೆ, ತಿದ್ದುಪಡಿ, ಬದಲಾವಣೆ, ತೆಗೆದುಹಾಕುವಿಕೆ ಕುರಿತ ವಿವರವಾದ ಅಂಕಿ ಅಂಶಗಳನ್ನು ರಾಜಕೀಯ ಪಕ್ಷಗಳಿಗೆ ಪರಿಶೀಲನೆಗೆ ನೀಡಲಾಗುತ್ತಿದೆ.

ಕ್ಷೇತ್ರಮಟ್ಟದ ಎಲ್ಲ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ಮತದಾರರ ಪಟ್ಟಿಯ ಕುರಿತು ರಾಜಕೀಯ ಪಕ್ಷಗಳು ಯಾವುದೇ ಆಕ್ಷೇಪಣೆ ಸಲ್ಲಿಸಿದ್ದಲ್ಲಿ ಮುಕ್ತವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.

ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಸಂದೇಹಗಳಿದ್ದರೆ ಬಗೆಹರಿಸಿಕೊಳ್ಳಲು ಉಚಿತ ಸಹಾಯವಾಣಿ 1950 ಸಂಪರ್ಕಿಸಬಹುದು. ರಾಜಕೀಯ ಪಕ್ಷಗಳ ವತಿಯಿಂದ ಬೂತ್ ಮಟ್ಟದ ಸಹಾಯಕರ ಪಟ್ಟಿಯನ್ನು ಶೀಘ್ರವಾಗಿ ನೀಡಿದರೆ ಅವರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಇದರಿಂದ ಬಿಎಲ್‌ಒಗಳೊಂದಿಗೆ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯ ಸಮಸ್ಯೆಗಳ ಬಗ್ಗೆ ಸಮನ್ವಯದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಬಿಜೆಪಿಯ ಚಂದ್ರಶೇಖರ ಪ್ರಭು, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜೆಡಿಎಸ್‌ನ ಜಯರಾಮ ಆಚಾರ್ಯ, ಕಾಂಗ್ರೆಸ್‌ನ ಹಬೀಬ್ ಅಲಿ, ಸಂತೋಷ್ ಕುಲಾಲ್, ನವೀನ್ ಚಂದ್ರ ಎಸ್.ಸುವರ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT