ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಮೇನಲ್ಲಿ ಕಾಡಲಿದೆ ಜಲಸಂಕಟ !

ಮುಂಗಾರುಪೂರ್ವ ಮಳೆಯಾಗದಿದ್ದರೆ ನೀರಿಗೆ ಹಾಹಾಕಾರ
Published 1 ಏಪ್ರಿಲ್ 2024, 6:09 IST
Last Updated 1 ಏಪ್ರಿಲ್ 2024, 6:09 IST
ಅಕ್ಷರ ಗಾತ್ರ

ಉಡುಪಿ: ಬೇಸಿಗೆ ಕಳೆಯಲು ಸುಧೀರ್ಘ ಅವಧಿ ಬಾಕಿ ಇರುವಂತೆಯೇ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಗಂಭೀರವಾಗುತ್ತಿದ್ದು ನದಿ, ಹೊಳೆ, ಕೆರೆ, ಬಾವಿ ಸೇರಿದಂತೆ ನೀರಿನ ಮೂಲಗಳು, ಸೆಲೆಗಳು ಬತ್ತುತ್ತಿವೆ. ಏಪ್ರಿಲ್‌ನಲ್ಲಿ ಮುಂಗಾರು ಪೂರ್ವ ಮಳೆಯಾಗದಿದ್ದರೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಲಿದೆ.

ಜಿಲ್ಲೆಯ 155 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 200ಕ್ಕೂ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಬ್ರಹ್ಮಾವರ ತಾಲ್ಲೂಕಿನ 25 ಗ್ರಾಮ ಪಂಚಾಯಿತಿ ವ್ಯಾಪ್ತಿಯ 42 ಗ್ರಾಮಗಳು, ಕಾಪು ತಾಲ್ಲೂಕಿನ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ 16 ಗ್ರಾಮಗಳು.

ಉಡುಪಿ ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ 23 ಗ್ರಾಮಗಳು, ಹೆಬ್ರಿ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳ 15 ಗ್ರಾಮಗಳು, ಕಾರ್ಕಳ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳ 26 ಗ್ರಾಮಗಳು, ಬೈಂದೂರು ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳ 22 ಗ್ರಾಮಗಳು, ಕುಂದಾಪುರ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ 59 ಗ್ರಾಮಗಳು ಸಮಸ್ಯಾತ್ಮಕ ಗ್ರಾಮಗಳಾಗಿವೆ.

ಜಿಲ್ಲೆಯ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 203 ಗ್ರಾಮಗಳ 1,427 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಮೇವರೆಗೂ ಬಜೆಯಲ್ಲಿ ನೀರು: ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಹಿರಿಯಡಕ ಸಮೀಪದ ಬಜೆ ಜಲಾಶಯದಲ್ಲಿ ಸದ್ಯ 5.25 ಮೀಟರ್ ನೀರು ಸಂಗ್ರಹವಿದೆ. ಲಭ್ಯವಿರುವ ನೀರು ಮೇ 15ರವರೆಗೆ ಸಾಲುತ್ತದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ರಾಯಪ್ಪ.

6 ಮೀಟರ್ ಗರಿಷ್ಠ ಸಾಮರ್ಥ್ಯದ ಬಜೆ ಜಲಾಶಯದಲ್ಲಿ 1.6 ಮೀಟರ್‌ ಡೆಡ್‌ ಸ್ಟೋರೆಜ್‌ ಹೊರತುಪಡಿಸಿದರೆ 3.65 ಮೀಟರ್‌ ನೀರು ಬಳಕೆ ಮಾಡಬಹುದು. ಸದ್ಯ ಸಂಗ್ರಹವಿರುವ ನೀರಿನಲ್ಲಿ ಪ್ರತಿದಿನ ನಗರಕ್ಕೆ 28 ಎಂಎಲ್‌ಡಿಯಂತೆ ಮೇ 15ರವರೆಗೂ ಪೂರೈಕೆ ಮಾಡಬಹುದು ಎನ್ನುತ್ತಾರೆ ಅವರು.

ನಿರೀಕ್ಷೆಯಂತೆ ಏಪ್ರಿಲ್‌ನಲ್ಲಿ ಮುಂಗಾರು ಪೂರ್ವ ಮಳೆಯಾದರೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಮಳೆಯಾಗದಿದ್ದರೆ ಪರ್ಯಾಯವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಜೆ ಜಲಾಶಯದ ನದಿ ಪಾತ್ರವಾಗಿರುವ ಸ್ವರ್ಣಾನದಿ ಹರಿಯುವ ಶೀರೂರು, ಪುತ್ತಿಗೆ ಮಠ, ಮಾಣೈ, ಭಂಡಾರಿಬೆಟ್ಟು ಸೇರಿದಂತೆ ಹಲವು ಕಡೆಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪಂಪ್‌ಸೆಟ್‌ಗಳನ್ನು ಬಳಸಿ ಜಲಾಶಯಕ್ಕೆ ಹರಿಸಲು ಟೆಂಡರ್ ಸಿದ್ಧವಿಟ್ಟುಕೊಳ್ಳಲಾಗಿದೆ.

ನದಿ ಪಾತ್ರದ ಬೃಹತ್ ಗುಂಡಿಗಳಲ್ಲಿ ಸಂಗ್ರಹವಾಗಿರುವ ನೀರನ್ನು ಮೇಲೆತ್ತಿದರೆ ನಗರಕ್ಕೆ 20 ದಿನ ಪೂರೈಕೆ ಮಾಡಬಹುದಾಗಿದ್ದು ಏಪ್ರಿಲ್‌ನಲ್ಲಿ ಮಳೆ ಕೈಕೊಟ್ಟರೆ ತುರ್ತು ಟೆಂಡರ್‌ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಬಜೆ ಹೊರತಾಗಿ ಪರ್ಯಾಯ ನೀರಿನ ಮೂಲವಿಲ್ಲದ ಪರಿಣಾಮ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವ ಸವಾಲು ನಗರಸಭೆಯ ಮುಂದಿದೆ. ಇದಕ್ಕೆ ಪೂರಕವಾಗಿ ನೀರು ಪೂರೈಕೆ ಅವಧಿಯನ್ನು 2 ತಾಸು ಕಡಿತಗೊಳಿಸಲಾಗಿದೆ.

ನಿರೀಕ್ಷೆಯಂತೆ ಏಪ್ರಿಲ್‌, ಮೇನಲ್ಲಿ ಮಳೆಯಾಗದಿದ್ದರೆ ಉಡುಪಿ ನಗರವನ್ನು ಹಲವು ವಲಯಗಳಾಗಿ ವಿಂಗಡಿಸಿ ರೇಷನಿಂಗ್ ಪದ್ಧತಿಯಲ್ಲಿ ನೀರು ಹಂಚಿಕೆ ಮಾಡಲಾಗುವುದು ಎಂದು ಪೌರಾಯುಕ್ತ ರಾಯಪ್ಪ ಮಾಹಿತಿ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿರುವ 6 ಬೋರ್‌ವೆಲ್‌ಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿರಿಸಲಾಗಿದೆ. ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ನಗರಸಭೆ ಮಾಲೀಕತ್ವದಲ್ಲಿ 22 ತೆರೆದ ಬಾವಿಗಳು ಹಾಗೂ 13 ಬೋರ್‌ವೆಲ್‌ಗಳಿದ್ದು ಅಗತ್ಯಬಿದ್ದರೆ ನೀರೆತ್ತಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು.

ಕಳೆದ ವರ್ಷ ಎತ್ತರದ ಪ್ರದೇಶಗಳಿಗೆ ನಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗದೆ ಸಮಸ್ಯೆಯಾಗಿತ್ತು. ಈ ಬಾರಿ ಸಮಸ್ಯೆ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಕುಡಿಯುವ ನೀರು ಪೂರೈಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ರಾಯಪ್ಪ ಹೇಳಿದರು.

ಹಿರಿಯಡ್ಕ ಸಮೀಪದ ಬಜೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು
ಹಿರಿಯಡ್ಕ ಸಮೀಪದ ಬಜೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು

Quote - ನಗರಸಭೆಯಿಂದ ಪೂರೈಕೆಯಾಗುವ ನಳ್ಳಿ ನೀರು ಕೆಲವು ಪ್ರದೇಶಗಳಿಗೆ ಸಮರ್ಪಕವಾಗಿ ಹತ್ತುತ್ತಿಲ್ಲ. ನಲ್ಲಿ ನೀರಿನ ಅವಧಿ ಕಡಿತಗೊಳಿಸಿರುವುದರಿಂದ ಸಮಸ್ಯೆಯಾಗಿದೆ. ಶ್ರೀನಿವಾಸ್‌ ಮಿಷನ್‌ ಕೌಂಪೌಂಡ್‌ ನಿವಾಸಿ

Quote - ಪ್ರತಿವರ್ಷ ಏಪ್ರಿಲ್‌ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತದೆ. ಎತ್ತರದ ಭಾಗಗಳಲ್ಲಿರುವ ಸಾರ್ವಜನಿಕರು ವಾರಕ್ಕೊಮ್ಮೆಯೂ ನೀರು ಸಿಗುವುದಿಲ್ಲ. ಈ ಬಾರಿ ಟ್ಯಾಂಕರ್ ಮೂಲಕ ನೀರು ಕೊಡಬೇಕು. ವಿಶ್ವನಾಥ್‌ ಮಣಿಪಾಲ

Quote - ಉಡುಪಿ ಮಣಿಪಾಲ ನಗರದಲ್ಲಿ ಕೆಟ್ಟುನಿಂತಿರುವ ಒಳಚರಂಡಿ ವ್ಯವಸ್ಥೆಯನ್ನು ನಗರಸಭೆ ದುರಸ್ತಿಗೊಳಿಸಬೇಕು. ಚರಂಡಿ ಹೊಲಸು ಬಾವಿ ಸೇರಿ ನೀರು ಕಲುಷಿತಗೊಳ್ಳುತ್ತಿದ್ದು ಬಳಕೆ ಮಾಡದಂತಾಗುತ್ತದೆ. ಇದರಿಂದ ಬೇಸಗೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಲಿದೆ. ಡೇನಿಯಲ್‌ ಮಣಿಪಾಲ

Cut-off box - ಅಂತರ್ಜಲ ಮಟ್ಟ(ಮೀಟರ್‌ಗಳಲ್ಲಿ) ತಿಂಗಳು;2022;2023 ಜನವರಿ;7.03;9.81 ಫೆಬ್ರುವರಿ;7.81;8.35 ಮಾರ್ಚ್‌;8.24;9.07 ಏಪ್ರಿಲ್‌;8.30;9.64 ಮೇ;8.18;10.2 ಜೂನ್‌;6.39;9.6 ಜುಲೈ;2.65;3.25 ಆಗಸ್ಟ್‌;4.09;4.83 ಸೆಪ್ಟೆಂಬರ್‌;3.99;4.93 ಅಕ್ಟೋಬರ್‌;5.70;5.96 ನವೆಂಬರ್‌;6.71;6.94 ಡಿಸೆಂಬರ್‌;7.11;7.77

Cut-off box - ಬಜೆ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ;6 ಮೀಟರ್‌ ಸದ್ಯ ಜಲಾಶಯದಲ್ಲಿರುವ ನೀರಿನ ಸಂಗ್ರಹ;5.25 ಮೀಟರ್‌ ಉಡುಪಿ ನಗರಕ್ಕೆ ಪ್ರತಿದಿನ ಬೇಕಾಗಿರುವ ನೀರುಲ;28 ಎಂಎಲ್‌ಡಿ ಉಡುಪಿ ನಗರದಲ್ಲಿರುವ ನಲ್ಲಿಗಳ ಸಂಪರ್ಕ;19000 ನಗರಸಭೆ ಅಧೀನದಲ್ಲಿರುವ ಬೋರ್‌ವೆಲ್‌ಗಳು;22 ನಗರಸಭೆ ಅಧೀನದಲ್ಲಿರುವ ಬಾವಿಗಳು;18

Cut-off box - ‘ಸಮಸ್ಯೆ ಬಗೆಹರಿಸಲು ಸನ್ನದ್ಧ’ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರಿ ಹಾಗೂ ಖಾಸಗಿ ಒಡೆತನದ 70ಕ್ಕೂ ಹೆಚ್ಚು ಕೊಳವೆಬಾವಿ ಹಾಗೂ 25 ಬಾವಿಗಳನ್ನು ಗುರುತಿಸಲಾಗಿದೆ. ಸಮಸ್ಯೆ ತಲೆದೋರುವ ಗ್ರಾಮಗಳಿಗೆ ಕೊಳವೆಬಾವಿ ಹಾಗೂ ಬಾವಿಗಳಿಂದ ನೀರೆತ್ತಿ ಪೂರೈಕೆ ಮಾಡಲಾಗುವುದು. ಟ್ಯಾಂಕರ್ ಮೂಲಕ ನೀರು ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಕಳ ಹೆಬ್ರಿ ಮತ್ತು ಬ್ರಹ್ಮಾವರ ತಾಲ್ಲೂಕುಗಳನ್ನು ಭಾಗಶಃ ಬರಪೀಡಿತ ತಾಲ್ಲೂಕುಗಳು ಎಂದು ಸರ್ಕಾರ ಘೋಷಿಸಿದ್ದು ಮೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗೆ ತಲಾ ₹25 ಲಕ್ಷದಂತೆ ₹75 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದಲ್ಲದೆ ಪ್ರತಿ ತಾಲ್ಲೂಕಿಗೆ ತಲಾ ₹20 ಲಕ್ಷದಂತೆ ₹1.40 ಕೋಟಿ ಅನುದಾನ ಬಿಡುಗಡೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸಹಾಯವಾಣಿ 18004257049ಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.

Cut-off box - ‘ನೀರು ಮಿತಬಳಕೆ ಇರಲಿ’ ಸಾರ್ವಜನಿಕರು ಮಿತವಾಗಿ ನೀರು ಬಳಕೆ ಮಾಡಬೇಕು. ವಾಹನಗಳನ್ನು ತೊಳೆಯಲು ಹಾಗೂ ಉದ್ಯಾನಗಳ ನಿರ್ವಹಣೆಗೆ ಕುಡಿಯುವ ನೀರು ಬಳಕೆ ಮಾಡಬಾರದು. ಮನೆಗಳಲ್ಲಿ ಮಳೆ ನೀರು ಸಂಗ್ರಹ ಮಾದರಿ ಅಳವಡಿಸಿಕೊಳ್ಳಬೇಕು. ಅನಗತ್ಯವಾಗಿ ನೀರು ಪೋಲಾಗುವುದು ಕಂಡುಬಂದರೆ ನಗರಸಭೆಗೆ ಮಾಹಿತಿ ನೀಡಬೇಕು ಎಂದು ಪೌರಾಯುಕ್ತ ರಾಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT