ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಉಚಿತ ಯಕ್ಷಗಾನ ಕಮ್ಮಟ 20ರಿಂದ

ಯಕ್ಷಗಾನ ಕೇಂದ್ರಕ್ಕೆ 50 ವರ್ಷಗಳ ಸಂಭ್ರಮ
Last Updated 17 ಫೆಬ್ರುವರಿ 2021, 13:11 IST
ಅಕ್ಷರ ಗಾತ್ರ

ಉಡುಪಿ: ಯಕ್ಷಗಾನ ಕೇಂದ್ರ ಇಂದ್ರಾಳಿ ಸಂಸ್ಥೆಯ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರು ಮತ್ತು ರಂಗಕರ್ಮಿಗಳಿಗೆ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ನೇತೃತ್ವದಲ್ಲಿ ಉಚಿತ ಯಕ್ಷಗಾನ ಕಮ್ಮಟ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಟ್ರಸ್ಟಿ ಡಾ.ಪಿಎಲ್‌ಎನ್ ರಾವ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಕ್ಷಗಾನ ಕೇಂದ್ರದ ಶಿಬಿರದಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳ 300ಕ್ಕೂ ಹೆಚ್ಚು ರಂಗಕರ್ಮಿಗಳು ಅರ್ಜಿ ಹಾಕಿದ್ದಾರೆ. ದೆಹಲಿ, ಮಹಾರಾಷ್ಟ್ರ, ಜೈಪುರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ 18 ಕಲಾವಿದರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ 20 ದಿನ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಫೆ.20 ರಿಂದ ಮಾರ್ಚ್10 ರವರೆಗೆ ಬಡಗುತಿಟ್ಟು ಯಕ್ಷಗಾನವನ್ನು ಪ್ರಧಾನವಾಗಿಟ್ಟುಕೊಂಡು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಗುವುದು. ತೆಂಕುತಿಟ್ಟು ಯಕ್ಷಗಾನದ ವೇಷಗಾರಿಕೆ, ಹೆಜ್ಜೆಯ ಕುರಿತು ಒಂದು ದಿನದ ಕಾರ್ಯಾಗಾರ ನಡೆಸಲಾಗುವುದು. ಹಲವು ರಾಜ್ಯಗಳಿಂದ ಬರುವ ಶಿಬಿರಾರ್ಥಿಗಳಿಗೆ ಕರಾವಳಿಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶವನ್ನು ಯಕ್ಷಗಾನ ಕೇಂದ್ರ ಹೊಂದಿದೆ ಎಂದರು.

ತರಬೇತಿ ಅವಧಿಯಲ್ಲಿ ಕರಾವಳಿಯ ಪ್ರಸಿದ್ಧ ನಾಗಮಂಡಲ, ದೈವಾರಾಧನೆ ಸೇರಿದಂತೆ ಕರಾವಳಿಯ ಸಂಸ್ಕೃತಿ, ಕಲೆಯನ್ನು ಬಿಂಬಿಸುವ ಕಲಾಪ್ರಾಕಾರಗಳನ್ನು ಪರಿಚಯಿಸಲಾಗುತ್ತದೆ. ಶಿಬಿರದಲ್ಲಿ ವೇಷಭೂಷಣ, ಮುಖವರ್ಣಿಕೆ ಬಗ್ಗೆಯೂ ಕಮ್ಮಟ ನಡೆಯಲಿದೆ. ರಂಗ ವ್ಯಾಯಾಮ, ಯಕ್ಷಗಾನ ತಾಳ, ಸ್ವರಾಭ್ಯಾಸ, ಕಿರುಚಿತ್ರ ವೀಕ್ಷಣೆ, ಯಕ್ಷಗಾನ ಕುಣಿತ, ಆಂಗಿಕ ಅಭ್ಯಾಸಗಳನ್ನು ಮಾಡಿಸಲಾಗುವುದು. ಜತೆಗೆ, ಕಲಾವಿದನ ಬದುಕು, ಕಲಾವಿದನ ಭವಿಷ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸಲಾಗುವುದು ಎಂದರು.

ಶಿಬಿರಾರ್ಥಿಗಳಿಗೆ ಊಟ ವಸತಿ ಸೇರಿದಂತೆ 20 ದಿನದ ಓಡಾಟದ ಖರ್ಚನ್ನು ಯಕ್ಷಗಾನ ಕೇಂದ್ರ ಭರಿಸಲಿದೆ. ಶಿಬಿರದ ಉದ್ಘಾಟನೆ ಫೆ. 21ರಂದು ಸಂಜೆ 6ಕ್ಕೆ ನಡೆಯಲಿದ್ದು, ಶಿಬಿರ ಮುಗಿದ ಬಳಿಕ ಮಾರ್ಚ್ 9 ಹಾಗೂ 10ರಂದು ಕಲಾ ಪ್ರದರ್ಶನಗಳು ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ಆರ್‌ಆರ್‌ಸಿ ಆಡಳಿತಾಧಿಕಾರಿ ಜಗದೀಶ್ ಶೆಟ್ಟಿ, ಗುರುಗಳಾದ ಕೃಷ್ಣಮೂರ್ತಿ ಭಟ್, ಶೈಲೇಶ್ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT