ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರು ಮಾನವರಲ್ಲ: ನ್ಯಾ.ಹೆಗ್ಡೆ

Last Updated 21 ಜನವರಿ 2012, 8:15 IST
ಅಕ್ಷರ ಗಾತ್ರ

ಉಡುಪಿ: `ನಮ್ಮ ರಾಷ್ಟ್ರದಲ್ಲಿ ಎಲ್ಲ ಕಡೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಈ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡವರು ಮಾನವರಲ್ಲ~ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ ಹೆಗ್ಡೆ ಇಲ್ಲಿ ಹೇಳಿದರು.

ಮಲ್ಪೆಯಲ್ಲಿ ಶುಕ್ರವಾರ ಸಂಜೆ ನಡೆದ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್‌ನ ದಶಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

`ಭ್ರಷ್ಟರು ಮಾನವೀಯತೆ ಕಳೆದುಕೊಂಡಿದ್ದಾರೆ. ಮನುಷ್ಯನೆಂದರೆ ಸ್ವಲ್ಪವಾದರೂ ಮಾನವೀಯತೆ ಇರಬೇಕು. ಯಾರ ಬಳಿ ಮನುಷ್ಯತ್ವ ಇದೆ ಅವರು ಮಾನವರಾಗುತ್ತಾರೆ. ಹೀಗಾಗಿ ನಮ್ಮಲ್ಲಿ ಕೆಲವರು ಮಾತ್ರವೇ ಮಾನವರಾಗಿ ಬದುಕುತ್ತಿದ್ದಾರೆ~ ಎಂದರು.

`ಭ್ರಷ್ಟಾಚಾರದ ಬಗ್ಗೆ ನಮ್ಮ ಹಿರಿಯ ಮನೋಭಾವ ಬದಲಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನಮ್ಮ ಮಕ್ಕಳ ಬಗ್ಗೆ ನಾವು ಭರವಸೆ ಇಡೋಣ. ಭ್ರಷ್ಟಾಚಾರ ತೊಲಗಿಸಲು ಮಕ್ಕಳೇ ಭವಿಷ್ಯದಲ್ಲಿ ಹೆಚ್ಚಿನ ಯತ್ನ ಮಾಡಬೇಕೆಂಬುದು ನನ್ನ ಕಳಕಳಿ~ ಎಂದರು.

`ಭ್ರಷ್ಟಾಚಾರರಿಂದ ಬಡವರಿಗೆ ಬಹಳ ಅನ್ಯಾಯವಾಗುತ್ತಿದೆ.  ಇದನ್ನು ಕಳೆದ 5 ವರ್ಷಗಳಿಂದ ನಾನು ಹತ್ತಿರದಿಂದ ಕಣ್ಣಾರೆ ಕಂಡಿದ್ದೇನೆ~ ಎಂದರು.

ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲ: `ಅಧಿಕಾರದಲ್ಲಿರುವ ಬಹುತೇಕ ಮಂದಿ ಜನರನ್ನು ಮರೆತಿದ್ದಾರೆ. ನಮ್ಮ ಸಂವಿಧಾನ ದೊರಕಿದ್ದು ಪ್ರಜಾಪ್ರಭುತ್ವದಿಂದಲೇ ಹೊರತೂ ಸಂಸತ್ತಿನಿಂದ ಅಲ್ಲ. ಚುನಾಯಿತ ಪ್ರತಿನಿಧಿಗಳು ನಾವು ಮಾಲೀಕರು, ಜನಸೇವಕರಲ್ಲ ಎನ್ನುವ ಅಹಂಕಾರದಲ್ಲಿದ್ದಾರೆ. ಪ್ರಜಾಪ್ರಭುತ್ವದ ಅರ್ಥ ಕೂಡ ನಮ್ಮ ಬಹುತೇಕ ಜನಪ್ರತಿನಿಧಿಗಳಿಗೆ ಗೊತ್ತಿಲ್ಲ. ಒಮ್ಮೆ ಆಯ್ಕೆಯಾದರೆ ಸಾಕು ಮತದಾರರ ಹೆಗಲ ಮೇಲೆ ಕುಳಿತುಕೊಳ್ಳುತ್ತಾರೆ~ ಎಂದರು.

`ಖಾಸಗಿ ವ್ಯಕ್ತಿಗಳೂ ಭ್ರಷ್ಟರಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಕಷ್ಟವಿದೆ. ಹೀಗಾಗಿ ಮಕ್ಕಳಿಗೆ ಈಗಲೇ ಶಾಲೆಯಲ್ಲಿ ಮೌಲ್ಯಗಳನ್ನು ಕಲಿಸಬೇಕು. ಮೊದಲು ಮಾನವರಾಗಲು ಕಲಿಸಬೇಕು~ ಎಂದರು.

ಅಂಜುಮನ್ ಎಜುಕೇಷನ್ ಸಂಸ್ಥೆ ಅಧ್ಯಕ್ಷ ಎಸ್.ಎಂ.ಸಯೀದ್ ಖಲೀಲ್, ಮಲ್ಪೆ ಎಜುಕೇಷನ್ ಸೊಸೈಟಿಯ ಅಬ್ದುಲ್ ಜಲೀಲ್, ಪ್ರಾಂಶುಪಾಲ ಸ್ಯಾಮ್ ಡೇನಿಯಲ್, ನಾರಾಯಣ ಗುರು ಶಾಲೆಯ ದಯಾರಾವ್, ಗೀತಾ, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT