ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಶೀಲನೆ, ಪರಿಹಾರದ ಭರವಸೆ

ಕುತ್ಲೂರು ಗ್ರಾಮಕ್ಕೆ ಡಿ.ಸಿ, ಎಸ್‌ಪಿ ಭೇಟಿ
Last Updated 18 ಡಿಸೆಂಬರ್ 2014, 9:20 IST
ಅಕ್ಷರ ಗಾತ್ರ

ಉಜಿರೆ: ಕುದುರೆಮುಖ ರಾಷ್ಟ್ರೀಯ ಉದ್ಯಾನ­ದೊಳಗಿರುವ ಕುತ್ಲೂರು ಗ್ರಾಮದ ಅಲಂಬ ಮೂಲ ನಿವಾಸಿಗಳ ಕಾಲೊನಿಗೆ ಮತ್ತು ಅರಣ್ಯದಿಂದ ಹೊರ ಬಂದು ಸುಲ್ಕೇರಿ ಗ್ರಾಮದ ನಾಯಿದಗುರಿ ಪ್ರದೇಶದಲ್ಲಿ ನೆಲೆಸಿದ ಆದಿವಾಸಿ ಕುಟುಂಬಗಳ ಕಾಲೋನಿಗೆ ಬುಧವಾರ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಮತ್ತು ಎಸ್.ಪಿ ಶರಣಪ್ಪ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಸೂಕ್ತ ಪರಿಹಾರದ ಭರವಸೆ ನೀಡಿದರು.

ಅಧಿಕಾರಿಗಳೆದುರು ತಮ್ಮ ಸಂಕಷ್ಟಗಳ ಸರಮಾಲೆಯನ್ನೇ ಮಂಡಿಸಿದ ಮೂಲ ನಿವಾಸಿಗಳು, ‘ಕಾಡಿನ ನಡುವೆ ನಾವು ನೆಮ್ಮದಿಯ ಬದುಕನ್ನು ನಡೆಸುತ್ತಿದ್ದೆವು. ಆದರೆ ಅಧಿಕಾರಿಗಳ ಭರವಸೆಯನ್ನು ನಂಬಿ ಕಾಡಿನಿಂದ ಹೊರಗೆ ಬಂದು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿದ್ದೇವೆ. ನಮ್ಮ ಬದುಕೇ ಅತಂತ್ರವಾಗಿದೆ. ನಕ್ಸಲ್ ನಿಗ್ರಹ ದಳದವರು ಮನೆಗಳಿಗೆ ನುಗ್ಗಿ ಬೆದರಿಸುತ್ತಿದ್ದಾರೆ’ ಎಂದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡ ವಿಠಲ ಮಲೆಕುಡಿಯ ಮತ್ತು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು.

ಸರ್ಕಾರದ ಪುನರ್ವಸತಿ ಯೋಜನೆಯನ್ನು ನಂಬಿ ಕಾಡಿನಿಂದ ಹೊರಗೆ ಬಂದು ಕಂದಾಯ ಇಲಾಖೆಯ ಜಾಗದಲ್ಲಿ ಮನೆ ಕಟ್ಟಿ ಕುಳಿತ ಕುಟುಂಬಗಳಿಗೆ ಪರಿಹಾರವೂ ಇಲ್ಲ, ಜಮೀನಿನ ಹಕ್ಕುಪತ್ರವೂ ಸಿಗಲಿಲ್ಲ. ಸರ್ಕಾರ ತಮ್ಮನ್ನು ನಡುನೀರಿನಲ್ಲಿ ಕೈಬಿಟ್ಟಿದೆ ಎಂದು ನಾಯ್ದಗುರಿಯ ಸಂತ್ರಸ್ತ ಕುಟುಂಬಗಳ ಪರವಾಗಿ ಗಣೇಶ ಹಾಗೂ ಇತರರು ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಅರಣ್ಯ ಹಕ್ಕುಗಳ ಅರ್ಜಿಗಳ ವಿಲೇಗೆ ಸೂಚನೆ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ಉದ್ಯಾನ ನಿವಾಸಿಗಳು ಈ ಹಿಂದೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಈಗ ಸಲ್ಲಿಕೆಯಾಗಿ­ರುವ 19 ಅರ್ಜಿಗಳನ್ನು ಕೂಡಲೇ ಪರಿಶೀಲಿಸ­ಬೇಕೆಂದು ಜಿಲ್ಲಾಧಿಕಾರಿ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅನಗತ್ಯ ವಿಳಂಬ ಮಾಡಬಾರದೆಂದು ಎಚ್ಚರಿಕೆ ನೀಡಿದರು.

ನಕ್ಸಲ್ ನಿಗ್ರಹ ದಳದವರು ಮೂಲ ನಿವಾಸಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ ಎಸ್.ಪಿ ಶರಣಪ್ಪ ಮಾತನಾಡಿ ,ಈ ಬಗ್ಗೆ ದಲಿತರ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪ ಬಂದಿದೆ. ಈಗಾಗಲೇ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮುಂದೆ ಮೂಲ ನಿವಾಸಿಗಳಿಗೆ ಯಾವುದೇ ಕಿರುಕುಳ ನೀಡದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ನಾಯ್ದಗುರಿಗೆ ಭೇಟಿ, ವಾರದೊಳಗೆ ಪರಿಹಾರ: 2011 ರಲ್ಲಿ ಆಗಿನ ಜಿಲ್ಲಾಧಿಕಾರಿಗಳ ಸೂಚನೆ­ಯಂತೆ ಅರಣ್ಯ ಪ್ರದೇಶದಿಂದ ಹೊರಬಂದು ಸುಲ್ಕೇರಿ ಗ್ರಾಮದ ನಾಯ್ದಗುರಿ ಎಂಬಲ್ಲಿ ವಾಸಿಸುತ್ತಿರುವ ಐದು ಕುಟುಂಬಗಳನ್ನು ಜಿಲ್ಲಾಧಿಕಾರಿಯವರು ಭೇಟಿಯಾಗಿ ಅವರ ಸಮಸ್ಯೆಗಳನ್ನು ಸಹಾನು­ಭೂತಿಯಿಂದ ಆಲಿಸಿದರು. ವರದಿಯನ್ನು ಪರಿಶೀಲಿಸಿ ಒಂದು ವಾರದೊಳಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ನಾಯ್ದಗುರಿ ಪ್ರದೇಶದಲ್ಲಿ ಮೂಲನಿವಾಸಿಗಳ ಪುನರ್ವಸತಿಗೆಂದು 190 ಎಕರೆ ಜಾಗ ಕಾದಿರಿಸ­ಲಾಗಿದೆ. ಆದರೆ ಇದು ಕಾಡಿನೊಳಗೆ ಇರುವ ಬಗ್ಗೆ ಆಕ್ಷೇಪ ಬಂದ ಕಾರಣ ಮರು ಸರ್ವೆ ನಡೆಸುವಂತೆ ಹಾಗೂ ಅರಣ್ಯದಿಂದ ಹೊರತಾದ ಪ್ರದೇಶದಲ್ಲಿ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಬೆಳ್ತಂಗಡಿ ತಹಶೀಲ್ದಾರ್ ಪುಟ್ಟ ಶೆಟ್ಟಿ, ವನ್ಯ ಜೀವಿ ಇಲಾಖೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್‌ಕುಮಾರ್, ವಲಯ ಅರಣ್ಯ ಅಧಿಕಾರಿ ಶ್ರೀನಾಥ್, ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಯೋಗೇಶ್, ಆದಿವಾಸಿ ಹಕ್ಕುಗಳ ಹೋರಾಟ ಸಮಿತಿಯ ಶೇಖರ್ ಎಲ್, ಸಂಜೀವ ಆರ್, ಬೇಬಿ ಸುವರ್ಣ ಮತ್ತು ನಾರಾವಿ ಗ್ರಾ.ಪಂ.ಸದಸ್ಯ ಉದಯ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT