ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಮನೋಭಾವ ಸ್ತ್ರೀಯರಲ್ಲಿ ಸಹಜ

ವಿಶ್ವ ಮಹಿಳಾ ದಿನಾಚರಣೆಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ
Last Updated 10 ಮಾರ್ಚ್ 2017, 9:27 IST
ಅಕ್ಷರ ಗಾತ್ರ

ಉಡುಪಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜತೆಗೆ ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವುದರಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠ ಹಾಗೂ ಉಡುಪಿ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ನಗರದ ರಾಜಾಂಗಣದಲ್ಲಿ ಗುರುವಾರ ಏರ್ಪಡಿ ಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಶಾಂತಿಗೆ ಬೇಕಾದದ್ದು ತ್ಯಾಗ ಮತ್ತು ಪ್ರೇಮದ ಮನೋಭಾವ. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿದೆ. ತ್ಯಾಗ, ಪ್ರೇಮ ಹಾಗೂ ಕುಟುಂಬ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಮಾಡುವ ಮನೋವೃತ್ತಿ ಸ್ತ್ರೀಯರಲ್ಲಿ ಸಹಜ. ಈ ರೀತಿಯ ಸಹಜವಾದ ಮನೋಭಾವ ಮತ್ತಷ್ಟು ವ್ಯಾಪಿಸಿದರೆ, ಇಡೀ ಲೋಕದ ಕಲ್ಯಾಣ ಆಗುತ್ತದೆ ಎಂದು ಹೇಳಿದರು.

ಮಹಿಳೆಯರು ತಮ್ಮ ಸೇವಾ ಕಾರ್ಯವನ್ನು ಕೇವಲ ಕುಟುಂಬಕ್ಕೆ ಸೀಮಿತಗೊಳಿಸದೆ, ಇಡೀ ಸಮಾಜಕ್ಕೆ ವಿಸ್ತರಿಸಬೇಕು. ತ್ಯಾಗ ಮತ್ತು ಪ್ರೇಮದ ಪ್ರೇರಣೆಯನ್ನು ಇಡೀ ಸಮಾಜಕ್ಕೆ ವ್ಯಾಪಿ ಸುವ ಸ್ಫೂರ್ತಿಯನ್ನು ಮಹಿಳೆಯರಿಂದ ಪುರುಷರು ಪಡೆಯಬೇಕು. ಇಂತಹ ಮಾನವೀಯ ಸದ್ಗುಣ ಸ್ತ್ರೀಯರಲ್ಲಿ ರಕ್ತಗತವಾಗಿ ಬಂದಿದೆ ಎಂದರು. 

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮಾತನಾಡಿ, ಮಹಿಳೆಯರ ಮತ್ತು ಪುರುಷರ ನಡುವಿನ ಸಂಘರ್ಷಕ್ಕೆ ಅವಕಾಶ ನೀಡದೆ ನಿಜವಾದ ಅರ್ಥದಲ್ಲಿ ಮಹಿಳಾ ಸಬಲೀಕರಣವಾಗಬೇಕು. ಅದಕ್ಕಾಗಿ ಲಿಂಗ ತಾರತಮ್ಯದ ಲೇಪವನ್ನು ನೀಡದೆ, ಪರಸ್ಪರ ಸಹಕಾರ ಮನೋಭಾವದಿಂದ ಚಿಂತನೆ ನಡೆಸಬೇಕು ಎಂದು ಹೇಳಿದರು.

ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಂತೆ, ಪ್ರತಿಯೊಂದು ಮಹಿಳಾ ಸಾಧಕಿಯ ಹಿಂದೆ ಪುರುಷನ ಸಹಕಾರ ಇರುತ್ತದೆ. ಇದಕ್ಕೆ ಸ್ವತಃ ನಾನೇ ಒಂದು ಉದಾಹರಣೆ. ನನ್ನ ತಂದೆಯ ಸಹಕಾರ ದಿಂದಲೇ ನಾನು ಈ ಹಂತವನ್ನು ತಲುಪಲು ಸಾಧ್ಯವಾಯಿತು. ಇಂದು ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ಅದರ ಬಗ್ಗೆ ತಿಳಿದುಕೊಂಡು, ದೃಢ ನಿಶ್ಚಯದಿಂದ ಮುನ್ನಡೆದಲ್ಲಿ ಮಹಿಳಾ ಸಬಲೀಕರಣ ಸಾಧ್ಯ ಎಂದರು.

ಹೂಡೆಯ ಸಾಲಿಹಾತ್‌ ಅರೇಬಿಕ್‌ ವುಮೆನ್ಸ್‌ ಕಾಲೇಜಿನ ಪ್ರಾಂಶುಪಾಲೆ ಖುಲ್ಸುಂ ಅಬೂಬಕ್ಕರ್‌, ಕುಂದಾಪುರದ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್‌, ಉಡುಪಿ ತಾಲ್ಲೂಕು ಮಹಿಳಾ ಮಂಡಳಿ ಗಳ ಒಕ್ಕೂಟದ ಉಪಾಧ್ಯಕ್ಷರಾದ ಸುಷ್ಮಾ ಎಸ್‌. ಶೆಟ್ಟಿ, ಸುಪ್ರಭಾ ಆಚಾರ್ಯ, ಕೋಶಾಧಿಕಾರಿ ಮಮತಾ ಎಸ್‌. ಶೆಟ್ಟಿ, ಸರಳ ಕಾಂಚನ್‌. ರಾಧಾ ದಾಸ್‌, ವಸಂತಿ ರಾವ್‌ ಕೊರಡ್ಕಲ್‌ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ಸ್ವಾಗತಿಸಿದರು, ಜಂಟಿ ಕಾರ್ಯದರ್ಶಿ ಗೀತಾರವಿ ಮತ್ತು ಪ್ರಸನ್ನ ಪ್ರಸಾದ್‌ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಯಶೋದಾ ಜೆ. ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT