ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರಕ್ಕೆ ಆಗ್ರಹಿಸಿ ಮುಷ್ಕರ

Last Updated 28 ಅಕ್ಟೋಬರ್ 2014, 6:00 IST
ಅಕ್ಷರ ಗಾತ್ರ

ಕುಂದಾಪುರ: ಬಡ ರೈತರು, ಕೃಷಿ ಕೂಲಿ ಕಾರ್ಮಿಕರು ಸರ್ಕಾರಿ ಹಾಗೂ ಅರಣ್ಯ ಜಮೀನಿನಲ್ಲಿ ಹಾಕಿಕೊಂಡಿರುವ ಮನೆಗಳ ಹಕ್ಕು ಪತ್ರಕ್ಕಾಗಿ, ಜಮೀನುಗಳ ಆಕ್ರಮ, ಸಕ್ರಮಕ್ಕಾಗಿ ಆಗ್ರಹಿಸಿ ಆಗ್ರಹಿಸಿ ಕುಂದಾಪುರದ ತಹಶೀಲ್ದಾರ್ ಕಚೇರಿಯ ಎದುರು ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ತಾಲ್ಲೂಕು ಸಮಿತಿಗಳು ಸೋಮವಾರ ಅನಿರ್ದಿಷ್ಟಾವಧಿ ಮುಷ್ಠರವನ್ನು ಆರಂಭಿಸಿದವು.

ಈ ವೇಳೆ ಸಂಘಟನೆಯ ಪ್ರಮುಖರು ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರನ್ನು ಸರ್ಕಾರಿ ಭೂ ಒತ್ತುವರಿದಾರರ ಪಟ್ಟಿಗೆ ಸೇರಿಸಬಾರದು. ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವವರನ್ನು ಎತ್ತಂಗಡಿ ಮಾಡಬಾರದು. ರೈತರನ್ನು ಒಕ್ಕೆಲೆಬ್ಬಿಸುವ ಸರ್ಕಾರಿ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಸರ್ಕಾರಿ ಗೋಮಾಳ, ಅಮೃತ ಮಹಲ ಕಾವಲು, ಗುಂಡು ತೋಪು, ಬಂಜರು ಭೂಮಿ ಇತ್ಯಾದಿ ಹೆಸರಿನಲ್ಲಿ 80 ದಶಕದಿಂದಲೂ ಸಾಗುವಾಳಿ ಮಾಡುತ್ತಾ ಬಂದಿರುವ ಜಮೀನುಗಳಿಗೆ ಹಕ್ಕು ಪತ್ರ ನೀಡಬೇಕು. ಪ್ರತಿ ಹೋಬಳಿಗೂ ಒಂದರಂತೆ ಆಕ್ರಮ-–ಸಕ್ರಮ ಸಮಿತಿ ರಚಿಸಬೇಕು.

ಕೇರಳ ಮಾದರಿಯಂತೆ ಬಡವರಿಗೆ ಹಿತ್ತಲು ಸಹಿತ 12 ಸೆಂಟ್ಸ್ ಜಾಗ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ಮನೆ ಕಟ್ಟಲು ಶೇ 75 ರಷ್ಟು ಸಹಾಯಧನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ತಾಲ್ಲೂಕು ಸಂಘಟನೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಅವರು ಮಾತನಾಡಿ, ಸಮಸ್ಯೆಯ ಪರಿಹಾರ ಕ್ಕಾಗಿ ಕೂಡಲೇ ಕಂದಾಯ ಉಪವಿಭಾಗಾಧಿಕಾರಿಗಳ ಸಮಕ್ಷಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಕರಣಿಕರ ಉಪಸ್ಥಿತಿಯಲ್ಲಿ ಕೂಲಿಕಾರರ ಸಂಘಟನೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಯ ಪರಿಹಾರಕ್ಕೆ ದಾರಿ ಕಂಡುಕೊಳ್ಳುವಂತೆ ಒತ್ತಾಯಿಸಿದರು.

ರಾಜ್ಯ ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ಬಸವರಾಜ್, ಮಂಗಳೂರು ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಯಾದವ್ ಶೆಟ್ಟಿ, ಜಿಲ್ಲಾ ಸಿಐಟಿಯು ಅಧ್ಯಕ್ಷ ಕೆ.ಶಂಕರ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ತಾಲ್ಲೂಕಿನ ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಮಹಾಬಲ ವಡೇರಹೋಬಳಿ, ರಾಜು ಪಡುಕೋಣೆ, ಸುರೇಶ್ ಕಲ್ಲಾಗಾರ್, ಎಚ್. ನರಸಿಂಹ, ನಾಗರತ್ನ ನಾಡ, ಯು.ದಾಸು ಭಂಡಾರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಹಸೀಲ್ದಾರೊಂದಿಗೆ ಸಭೆ: ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ತಾಲ್ಲೂಕು ತಹಸೀಲ್ದಾರ್ ಗಾಯತ್ರಿ ನಾಯಕ್ ಅವರು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವೆಂಕಟೇಶ್ ಕೋಣಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಅಲ್ಲದೇ, ನಾಳೆಯೂ ಮುಷ್ಕರ ಮುಂದುವರೆಯಲ್ಲಿದ್ದು, ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಕುರಿತು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT